ಇಂದಿನಿಂದ ಕರ್ನಾಟಕ ಸರ್ವೋದಯ ಮಂಡಲ ರಾಷ್ಟ್ರೀಯ ಸಮ್ಮೇಳನ

KannadaprabhaNewsNetwork | Published : Jan 29, 2025 1:36 AM

ಸಾರಾಂಶ

ಶಿವಮೊಗ್ಗ: ಕರ್ನಾಟಕ ಸರ್ವೋದಯ ಮಂಡಲ ರಾಷ್ಟ್ರೀಯ ಸಮ್ಮೇಳನವನ್ನು ಜ.29 ಮತ್ತು 30 ರಂದು ಎರಡು ದಿನ ಕಾಲ ಈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಸರ್ವೋದಯ ಮಂಡಲದ ರಾಷ್ಟ್ರೀಯ ಸಮ್ಮೇಳನದ ಸಂಚಾಲಕ ಎಂ.ಎನ್.ಸುಂದರ ರಾಜ್ ತಿಳಿಸಿದರು.

ಶಿವಮೊಗ್ಗ: ಕರ್ನಾಟಕ ಸರ್ವೋದಯ ಮಂಡಲ ರಾಷ್ಟ್ರೀಯ ಸಮ್ಮೇಳನವನ್ನು ಜ.29 ಮತ್ತು 30 ರಂದು ಎರಡು ದಿನ ಕಾಲ ಈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಸರ್ವೋದಯ ಮಂಡಲದ ರಾಷ್ಟ್ರೀಯ ಸಮ್ಮೇಳನದ ಸಂಚಾಲಕ ಎಂ.ಎನ್.ಸುಂದರ ರಾಜ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನಕ್ಕೆ ವಿವಿಧ ರಾಜ್ಯಗಳಿಂದ ಮತ್ತು ಜಿಲ್ಲೆಗಳಿಂದ ಇನ್ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಬರುವ ನಿರೀಕ್ಷೆಯಿದೆ. ಜ.29 ರಂದು ಸಂಜೆ 5.30ಕ್ಕೆ ಈಸೂರಿನ ಜಿ.ಎಸ್.ಶಿವರುದ್ರಪ್ಪ ಬಯಲು ರಂಗ ಮಂದಿರದಲ್ಲಿ ಸರ್ವೋದಯ ಮಂಡಲದ ಪ್ರತಿನಿಧಿಗಳ ಸಮ್ಮಿಲನ ಮತ್ತು ಶಿವಮೊಗ್ಗ ಸಹ್ಯಾದ್ರಿ ರಂಗತರಂಗದ ವತಿಯಿಂದ ಕಾಂತೇಶ ಕದರಮಂಡಲಗಿ ನಿರ್ದೇಶಿಸಿದ ‘ಮನುಜ ಮತ ಗಾಂಧಿ ಪಥ’ ನಾಟಕ ಏರ್ಪಡಿಸಲಾಗಿದೆ ಎಂದರು.ಜ.30 ರಂದು ಬೆಳಿಗ್ಗೆ 9.30ಕ್ಕೆ ಇಲ್ಲಿನ ವೀರಭದ್ರ ಸ್ವಾಮಿ ದೇವಾಲಯದಿಂದ ಹುತಾತ್ಮರ ಸ್ಮಾರಕದವರೆಗೆ ಪ್ರಭಾತಪೇರಿ, 84 ಧ್ವಜಗಳೊಂದಿಗೆ ಜಾಥಾ ಮತ್ತು 11 ಗಂಟೆಗೆ ಮಹಾತ್ಮ ಗಾಂಧೀಜಿ ಮತ್ತು ಈಸೂರಿನ ಹುತಾತ್ಮರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.ನಂತರ ನಡೆಯುವ ರಾಷ್ಟ್ರಮಟ್ಟದ ಸರ್ವೋದಯ ಮಂಡಲದ ಸಮಾವೇಶವನ್ನು ಈಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಖಾ ಪ್ರಭಾಕರ್ ಪಾಟೀಲ್ ಅವರು ಉದ್ಘಾಟಿಸಲಿದ್ದಾರೆ. ಸರ್ವೋದಯ ಮಂಡಲದ ರಾಷ್ಟ್ರೀಯ ಅಧ್ಯಕ್ಷ ಚಂದನ ವಾಲ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಸಚಿವ ಮಧು ಬಂಗಾರಪ್ಪ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆಗಮಿಸಲಿದ್ದಾರೆ. ಸಭೆಯಲ್ಲಿ ಸರ್ವೋದಯ ಮಂಡಲದ ರಾಜ್ಯಾಧ್ಯಕ್ಷ ಡಾ.ಎಚ್.ಎಸ್.ಸುರೇಶ್ ಮತ್ತು ಜಿಲ್ಲಾಧ್ಯಕ್ಷ ಬಸವರಾಜಪ್ಪ ಪರಪ್ಪ ಕಂದಗಲ್, ಲಕ್ಷ್ಮಣ ತುಕಾರಾಮ್ ಗೋಲೆ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಡಾ.ಎಚ್.ಎಸ್.ಸುರೇಶ್ ವಿರಚಿತ ‘ಪಾತಕಲೋಕದಿಂದ ಗಾಂಧಿಯಾನದವರೆಗೆ’ ಕೃತಿ ಬಿಡುಗಡೆ ಮಾಡಲಾಗುವುದು. ಈಸೂರಿನ ಹುತಾತ್ಮ ಕುಟುಂಬದ ಸದಸ್ಯರಿಗೆ ಹಾಗೂ ಭಗವಂತರಾವ್, ಆರ್.ಬಸವರಾಜಪ್ಪ, ಗಾಯತ್ರಿ.ಬಿ.ರಾವ್, ಪ್ರೊ.ಸತ್ಯನಾರಾಯಣ, ಡಾ.ಡಿ.ವಿ.ರೇವಣಪ್ಪ ಗೌಡ, ಎಂ.ಎನ್.ವೆಂಕಟೇಶ್, ಆರ್.ಮನೋಹರ್ ಮತ್ತು ಪಿ.ಬಸವರಾಜಪ್ಪ ಅವರನ್ನು "ಸರ್ವೋದಯ ರಾಷ್ಟ್ರೀಯ ಸೇವಾ ಪ್ರಶಸ್ತಿ " ನೀಡಿ ಗೌರವಿಸಲಾಗುವುದು. ಇದರ ಜೊತೆಗೆ ಕೆಲ ಗಣ್ಯರಿಗೆ ಅಭಿನಂದಿಸಲಾಗುವುದು. ನಂತರ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸರ್ವೋದಯ ಮಂಡಲ ರಾಷ್ಟ್ರೀಯ ಸಮ್ಮೇಳನದ ಜಿಲ್ಲಾಧ್ಯಕ್ಷ ಬಸವರಾಜಪ್ಪ, ಪರಪ್ಪ ಕಂದಗಲ್, ಪ್ರಮುಖರಾದ ರಮೇಶ್, ಭಗವಂತ ರಾವ್, ವಿಶ್ವೇಶ್ವರಯ್ಯ, ಆರ್.ಬಸವರಾಜಪ್ಪ, ಸಾವಿತ್ರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article