-ಹುಣಸೂರು ಎಸಿ ಮಹಮ್ಮದ್ ಹ್ಯಾರಿಸ್ ಸುಮೈರ್ ಅಭಿಮತ---
ಸಾಮಾಜಿಕ ಜಾಲತಾಣಗಳನ್ನು ಜಾಗರೂಕತೆಯಿಂದ ಬಳಸಬೇಕು, ಏಕಾಗ್ರತೆ ಕಳೆದುಕೊಳ್ಳಬಾರದು ಎಂದು ಐಎಎಸ್ ಅಧಿಕಾರಿ ಹುಣಸೂರು ಎಸಿ ಮಹಮ್ಮದ್ ಹ್ಯಾರಿಸ್ ಸುಮೈರ್ ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 50 ದಿನಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಐಎಎಸ್, ಕೆಎಎಸ್ ಪರೀಕ್ಷಾ ಸಿದ್ಧತೆ ಕುರಿತು ಮುಖ್ಯ ಭಾಷಣ ಮಾಡಿದರು.ಐಎಎಸ್, ಐಪಿಎಸ್, ಐಎಫ್ಎಸ್ ಎಲ್ಲಾ ಹುದ್ದೆಗಳ ಮೂಲ ಉದ್ದೇಶ ಸೇವೆಯೇ. ಬೀದರಿನ ಬಡ ಕುಟುಂಬದವನಾದ ನಮ್ಮ ಮನೆ ಸಮೀಪ ಪೊಲೀಸ್ ಠಾಣೆ ಇತ್ತು. ಅಲ್ಲಿನ ಅಧಿಕಾರಿಗಳನ್ನು ದಿನನಿತ್ಯ ನೋಡುತ್ತಿದ್ದ ನನಗೆ ನಾನೇಕೆ ಹಾಗಾಗಬಾರದು ಎನಿಸಿತು, ಅಂದಿನಿಂದ ಅದಕ್ಕೆ ಏನು ಮಾಡಬೇಕೆಂದು ಹುಡುಕಿ ನಿರಂತರವಾಗಿ ಓದಿದೆ. ಚಿಕ್ಕ ವಯಸ್ಸಿನಲ್ಲಿಯೇ ಐಎಎಸ್‌ಗೆ ಸೇರ್ಪಡೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಹೀಗೆ ಜೀವನದಲ್ಲಿ ಛಲ ರೂಢಿಸಿಕೊಳ್ಳಬೇಕು ಎಂದರು.
ಶಿಸ್ತು ಸಾಧನೆಗೆ ಬಹುಮುಖ್ಯ, ಯಾವ ಹಂತದ ಪರೀಕ್ಷೆಯಾದರು ಓದಿನಲ್ಲಿ ತಲ್ಲೀನತೆ ಇರಬೇಕು ಎಂದರು.
ಪ್ರತಿಯೊಬ್ಬ ಸ್ಪರ್ಧಾತ್ಮಕ ಶಿಬಿರಾರ್ಥಿಗಳೂ ಇತರರಿಗಿಂತ ಭಿನ್ನವಾಗಿ ನಾವು ಹೇಗೆ ಮುಂದೆ ಬರಬೇಕು, ಹೇಗೆ ಸಫಲರಾಗಬೇಕು ಎಂಬುದರ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು ಎಂದರು.
ನಾನು ವಿದ್ಯಾರ್ಥಿದಿಸೆಯಲ್ಲಿ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣನಾಗಿದ್ದವನು. ಆದರೆ ನಂತರದಲ್ಲಿ ಸಾಮಾನ್ಯರೇ ಹೆಚ್ಚು ಸಾಧನೆ ಮಾಡಿರುವುದನ್ನು ಕಂಡು ಓದಿನಲ್ಲಿ ನಿರತನಾದೆ. ಇಂದು ಯಶಸ್ಸಾಗಿ ನಿಮ್ಮೆಲ್ಲರಿಗೂ ಸಲಹೆ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದರು.
ಇಲ್ಲಿ ಪಡೆದ ಪರಿಣತಿಯನ್ನು ಜೀವನದಲ್ಲಿ ಸದುಪಯೋಗ ಪಡೆದುಕೊಳ್ಳಬೇಕು. ಆಗ ನಿಮ್ಮ ಶ್ರಮ ಸಾರ್ಥಕವಾಗಲಿದೆ ಎಂದರು.