ರಣಜಿಗೆ ಶಿವಮೊಗ್ಗಕ್ಕೆ ಬಂದ ಕರ್ನಾಟಕ ತಂಡ

KannadaprabhaNewsNetwork |  
Published : Oct 24, 2025, 01:00 AM IST
ಪೊಟೋ: 23ಎಸ್‌ಎಂಜಿಕೆಪಿ05ಶಿವಮೊಗ್ಗದ ನವುಲೆಯ ಕೆಎಸ್‌ಸಿಎ ಮೈದಾನದ ಬಿ.ಅಂಕಣದಲ್ಲಿ ಕರ್ನಾಟಕ ತಂಡದ ಆಟಗಾರರು ಗುರುವಾರ ಸಂಜೆ ಅಭ್ಯಾಸ ಆರಂಭಿಸಿದರು. | Kannada Prabha

ಸಾರಾಂಶ

ನಗರದ ನವುಲೆಯ ಕೆಎಸ್‌ಸಿಎ ಕ್ರಿಕೆಟ್‌ ಮೈದಾನದಲ್ಲಿ ಗೋವಾ ತಂಡದ ವಿರುದ್ಧ ಅ.25ರಿಂದ ಆರಂಭಗೊಳ್ಳುತ್ತಿರುವ ರಣಜಿ ಟ್ರೋಫಿಯ ಎರಡನೇ ಪಂದ್ಯಕ್ಕಾಗಿ 15 ಆಟಗಾರರ ಕರ್ನಾಟಕ ತಂಡ ಗುರುವಾರ ಶಿವಮೊಗ್ಗಕ್ಕೆ ಆಗಮಿಸಿದ್ದು, ಸಂಜೆ ವೇಳೆ ಆಟಗಾರರು ಕೆಲವೊತ್ತು ಮೈದಾನದಲ್ಲಿ ಬೆವರಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದ ನವುಲೆಯ ಕೆಎಸ್‌ಸಿಎ ಕ್ರಿಕೆಟ್‌ ಮೈದಾನದಲ್ಲಿ ಗೋವಾ ತಂಡದ ವಿರುದ್ಧ ಅ.25ರಿಂದ ಆರಂಭಗೊಳ್ಳುತ್ತಿರುವ ರಣಜಿ ಟ್ರೋಫಿಯ ಎರಡನೇ ಪಂದ್ಯಕ್ಕಾಗಿ 15 ಆಟಗಾರರ ಕರ್ನಾಟಕ ತಂಡ ಗುರುವಾರ ಶಿವಮೊಗ್ಗಕ್ಕೆ ಆಗಮಿಸಿದ್ದು, ಸಂಜೆ ವೇಳೆ ಆಟಗಾರರು ಕೆಲವೊತ್ತು ಮೈದಾನದಲ್ಲಿ ಬೆವರಿಳಿಸಿದರು.

ರಾಜ್‌ಕೂಟ್‌ನಲ್ಲಿ ನಡೆದ ಈ ಋುತುವಿನ ಮೊದಲ ಪಂದ್ಯದಲ್ಲಿ ಸೌರಾಷ್ಟ್ರದ ವಿರುದ್ಧ ಡ್ರಾ ಮಾಡಿಕೊಂಡಿರುವ ಕರ್ನಾಟಕ ತಂಡ ಗೋವಾ ವಿರುದ್ಧ ಗೆಲ್ಲುವ ಮೂಲಕ ಗೆಲುವಿನ ಶುಭಾರಂಭದ ನಿರೀಕ್ಷೆಯಲ್ಲಿದೆ. ನಾಯಕ ಮಯಾಂಕ್‌ ಅಗರ್ವಾಲ್‌ ಹಾಗೂ ಉಪ ನಾಯಕ ಕರುಣ್‌ ನಾಯರ್‌ ಹಾಗೂ ಶ್ರೇಯಸ್‌ ಗೋಪಾಲ್‌ ಮೇಲೆ ನಿರೀಕ್ಷೆ ಹೆಚ್ಚಿದ್ದು, ಸೌರಾಷ್ಟ್ರ ಪಂದ್ಯದಲ್ಲಿ ರನ್‌ ಗಳಿಸಲು ಪರದಾಡಿದ ಕರುಣ್‌ ನಾಯರ್‌ ಗೋವಾ ವಿರುದ್ಧ ಬ್ಯಾಟಿಂಗ್‌ನಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.

ಇತ್ತ ಗೋವಾದಿಂದ ಶಿವಮೊಗ್ಗಕ್ಕೆ ಮಂಗಳವಾರ ಸಂಜೆಯೇ ವಿಮಾನದ ಮೂಲಕ ಆಗಮಿಸಿದ ದೀಪ್ ರಾಜ್ ಗಾಂವ್ಕರ್ ಸಾರಥ್ಯದ ಗೋವಾ ತಂಡವು ಬುಧವಾರ ಬೆಳಗ್ಗೆಯಿಂದಲೆ ಕೆಎಸ್‌ಸಿಎ ಬಿ ಕ್ರೀಡಾಂಗಣದಲ್ಲಿ ತಾಲೀಮು ನಡೆಸುತ್ತಿದೆ. ಮೊದಲ ಪಂದ್ಯದಲ್ಲೇ ಚಂಡಿಗಡ್‌ ವಿರುದ್ಧ 71 ರನ್‌ಗಳ ಅಂತರದಲ್ಲಿ ಗೆದ್ದು ಬೀಗಿರುವ ಗೋವಾ ತಂಡಕ್ಕೆ ಮೊದಲ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಬ್ಯಾಟಿಂಗ್‌ನಲ್ಲಿ ಮಿಂಚಿರುವ ಅಭಿನವ್‌ ತೇಜ್‌ರಾಣಾ ಹಾಗೂ ಲಲಿತ್‌ ಯಾದವ್‌ ಆಸರೆ ಆಗಿದ್ದಾರೆ. ಜೊತೆಗೆ ಭಾರತ ಕ್ರಿಕೆಟ್‌ ತಂಡದ ದಿಗ್ಗಜ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಬೌಲಿಂಗ್‌ನಲ್ಲಿ ಮಿಂಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಂದ್ಯಕ್ಕೆ ವರುಣನ ಆತಂಕ:

ನಗರದ ನವುಲೆ ಕೆಎಸ್‌ಸಿಎ ಮೈದಾನದಲ್ಲಿ ಗೋವಾ ವಿರುದ್ಧ ಕರ್ನಾಟಕ ತಂಡ 2ನೇ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಅ.25ರಿಂದ 28ರವರೆಗೆ ರಣಜಿ ಪಂದ್ಯ ನಡೆಯಲಿದ್ದು, ಇದರ ನಡುವೆ ಶಿವಮೊಗ್ಗದಲ್ಲಿ ನಿರಂತರ ಮಳೆಯಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಅ.27ರ ವರೆಗೆ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಕೆಎಸ್‌ಸಿಎ ಶಿವಮೊಗ್ಗ ವಲಯ ಸಮಿತಿಗೆ ಚಿಂತೆಗೀಡು ಮಾಡಿದೆ. ಹೀಗಾಗಿ ಮೈದಾನಕ್ಕೆ ಟಾರ್ಪಲ್ ಹೊದಿಸಲಾಗಿದೆ. ರಾತ್ರಿ ಮಳೆ ಬಂದರೂ ಹಗಲಿನಲ್ಲಿ ಬಿಸಿಲು ಕಾಯುತ್ತಿರುವುದು ಸಂಘಟಕರಿಗೆ ಸ್ವಲ್ಪ ಸಮಾಧಾನ ಮೂಡಿಸಿದೆ.

ತಂಡದಲ್ಲಿನ ಭಾಗವಹಿಸುವ ಪ್ರಮುಖ ಆಟಗಾರರು

ಕರ್ನಾಟಕ ತಂಡದಲ್ಲಿ ನಾಯಕರಾಗಿ ಮಯಾಂಕ್ ಅಗರ್‌ವಾಲ್, ಉಪ ನಾಯಕರಾಗಿ ಕರುಣ್ ನಾಯರ್, ವಿಕೇಟ್ ಕೀಪರ್ ಆಗಿ ಶ್ರೀಜಿತ್ ಕೆ.ಎಲ್. ಹಾಗೂ ಶ್ರೇಯಸ್ ಗೋಪಾಲ್, ಸ್ಮರಣ್ ಆರ್., ವಿದ್ವತ್ ಕಾವೇರಪ್ಪ, ಯಶೋವರ್ಧನ್, ಅಭಿಲಾಷ್‌ಶೆಟ್ಟಿ, ವೆಂಕಟೇಶ್ ಎಂ., ನಿಖಿನ್ ಜೋಷ್, ಅಭಿನವ್ ಮನೋಹರ್, ಕೃತಿಕ್ ಕೃಷ್ಣ, ಅನೀಷ್ ಕೆ.ವಿ., ಮಸಿನ್‌ಖಾನ್, ಶಿಖರಶೆಟ್ಟಿ ಹಾಗೂ ಗೋವಾ ತಂಡದಲ್ಲಿ ನಾಯಕರಾಗಿ ದೀಪ್‌ರಾಜ್ ಗಾಂವ್‌ಕರ್, ಉಪನಾಯಕರಾಗಿ ಸಮರ್ ದುಬಾಷಿ, ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್, ಲಲಿತ್ ಯಾದವ್, ಸುಯಾಸ್ ಪ್ರಭುದೇಸಾಯಿ, ಮಂಥನ್ ಕೌತುಕರ್, ಕಶ್ಯಪ್‌ಭಕ್ಲೆ, ದರ್ಶನ್ ನಿಸಾಲ್, ಮೋಹಿತ್ ರೆಡ್ಕರ್, ಅಭಿನವ್ ತೇಜರಾಣ, ಹೀರಂಬ ಪರಾಬೆ, ವಿಕಾಸ್‌ಸಿಂಗ್, ಈಶಾನ್ ಗಡೇಕರ್, ರಾಜಶೇಖರ್ ಹರಿಕಾಂತ್, ವಿಜೇಶ್ ಪ್ರಭು ದೇಸಾಯ್, ವಾಸುಕಿ ಕೌಶಿಕ್, ಸ್ನೇಹಲ್ ಕೌತನ್ಕರ್ ಭಾಗವಹಿಸಲಿದ್ದಾರೆ.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ