ಹೊಸಪೇಟೆ: ದೇಶದಲ್ಲಿ ಕಾಂಗ್ರೆಸ್‌ಗೆ ಕರ್ನಾಟಕದ ಜನತೆ ಶಕ್ತಿ ತುಂಬಿದ್ದಾರೆ. ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಸಂಕಷ್ಟ ಕಾಲದಲ್ಲಿ ಕರ್ನಾಟಕ ಕೈ ಹಿಡಿದಿದೆ. ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಸೋನಿಯಾ ಗಾಂಧಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಕಾಂಗ್ರೆಸ್ ಗೆಲುವಿಗೆ ಪೂರಕವಾದ ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು ಎಂದು ಸಕ್ಕರೆ ಸಚಿವ ಹಾಗೂ ಬಳ್ಳಾರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ವೀಕ್ಷಕ ಶಿವಾನಂದ ಪಾಟೀಲ್ ಹೇಳಿದರು.
ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬಳ್ಳಾರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಅಭಿಪ್ರಾಯ ಸಂಗ್ರಹಣೆಗಾಗಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿ ಈ ಬಾರಿ ನಾವು ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಕಾರ್ಯಕರ್ತರ ಅಭಿಪ್ರಾಯ ಕ್ರೋಡೀಕರಿಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರೇ ಹೈಕಮಾಂಡ್. ನಾವೆಲ್ಲರೂ ಕಾರ್ಯಕರ್ತರ ಮಾತಿಗೆ ಮನ್ನಣೆ ನೀಡಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರು ರಾಜ್ಯದ ಜನತೆಗೆ ನೀಡಿದ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ನಾವು ಯಾವತ್ತೂ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ಅದೇ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳು ಈಡೇರಿಲ್ಲ, ಈ ಬಗ್ಗೆ ಜನತೆಯಲ್ಲಿ ಜಾಗೃತಿಗೊಳಿಸಬೇಕು. ಬಿಜೆಪಿಯನ್ನು ಕೇಂದ್ರ ಸರ್ಕಾರದಿಂದ ಕಿತ್ತೊಗೆಯಬೇಕು ಎಂದರು.
ಶಾಸಕರಾದ ಈ. ತುಕಾರಾಂ, ಎಚ್.ಆರ್. ಗವಿಯಪ್ಪ, ಜೆ.ಎನ್. ಗಣೇಶ್, ನಾರಾ ಭರತ್ ರೆಡ್ಡಿ ಮಾತನಾಡಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಶಾಸಕರು, ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ನಮ್ಮ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗೆ ಲೀಡ್ ನೀಡುತ್ತೇವೆ. ಎಂಟು ವಿಧಾನಸಭೆ ಕ್ಷೇತ್ರಗಳಲ್ಲೂ ನಾವು ಖಂಡಿತ ಲೀಡ್ ಕೊಡುತ್ತೆವೆ ಎಂದರು.ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ಸಂಸತ್‌ನಲ್ಲೇ ಸಂಸದರಿಗೆ ರಕ್ಷಣೆ ಇಲ್ಲದಾಗಿದೆ. ಕೇಂದ್ರ ಸರ್ಕಾರ ಆಡಳಿತದಲ್ಲಿ ವೈಫಲ್ಯ ಕಂಡಿದೆ. ಕೋಮುವಾದಿಗಳನ್ನು ಹಿಮ್ಮೆಟ್ಟಿಸಲು, ಸಂವಿಧಾನ ಉಳಿವಿಗಾಗಿ ನಾವೆಲ್ಲರೂ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಶಾಸಕರಾದ ಎಂ.ಪಿ. ಲತಾ, ಡಾ. ಎನ್.ಟಿ. ಶ್ರೀನಿವಾಸ್, ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ, ಮಾಜಿ ಎಂಎಲ್ಸಿ ಕೆಎಸ್‌ಎಲ್ ಸ್ವಾಮಿ, ಕಾಂಗ್ರೆಸ್ ಬಳ್ಳಾರಿ ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ವಿಜಯನಗರ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ಅಲ್ಪಸಂಖ್ಯಾತ ವಿಭಾಗದ ರಾಜ್ಯ ಕಾರ್ಯದರ್ಶಿ ಸೈಯದ್ ಮೊಹಮದ್, ಮುಖಂಡರಾದ ದೀಪಕ್ ಕುಮಾರ ಸಿಂಗ್, ಕಮಲ ಮರಿಸ್ವಾಮಿ, ಎ. ಮಾನಯ್ಯ, ಮುಂಡ್ರಿಗಿ ನಾಗರಾಜ, ಗುಜ್ಜಲ ನಾಗರಾಜ, ವೆಂಕಟೇಶ್ ಪ್ರಸಾದ್, ಜಿಂಕಲ್ ನಾಗವೇಣಿ, ಗುಜ್ಜಲ ರಘು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ, ಉಪಾಧ್ಯಕ್ಷ ಐ. ದಾರುಕೇಶ್ ಮತ್ತಿತರರಿದ್ದರು.ಗೆಲುವು ಉಡುಗೊರೆ:
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಎಸ್ಟಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಬಳ್ಳಾರಿ ಲೋಕಸಭೆ ಕ್ಷೇತ್ರ ಉಡುಗೊರೆಯಾಗಿ ನೀಡೋಣ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹೇಳಿದರು.ಕಾಂಗ್ರೆಸ್ ಕಾರ್ಯರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಅವರು ಗೆಲುವು ಸಾಧಿಸಿದ್ದರು. ಬಳಿಕ ಬಿಜೆಪಿ ಗೆಲುವು ಸಾಧಿಸುತ್ತಾ ಬಂದಿತ್ತು. ಬಳಿಕ ವಿ.ಎಸ್. ಉಗ್ರಪ್ಪ ಜಯಶಾಲಿಯಾಗಿದ್ದರು. ಮತ್ತೆ ನಾವು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋಣ. ನನ್ನ ಕ್ಷೇತ್ರದಲ್ಲಿ ೫೦ ಸಾವಿರ ಲೀಡ್ ಕೊಡುವೆ. ಲೀಡ್ ಕೊಡುವುದರಲ್ಲಿ ನಮ್ಮ ಶಾಸಕರ ನಡುವೆ ಸ್ಪರ್ಧೆ ಇದೆ. ಸಹೋದರ ಭರತ್ ರೆಡ್ಡಿ ನನ್ನಗಿಂತಲೂ ಹೆಚ್ಚು ಲೀಡ್ ಕೊಡಲು ಸಜ್ಜಾಗಿದ್ದಾರೆ ಎಂದರು.