ಕನ್ನಡಪ್ರಭ ವಾರ್ತೆ ಪುತ್ತೂರು
ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಹಾಗೂ ಸಪರಿವಾರ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆಯು ಏ.೨೧ರಿಂದ ೨೮ರ ತನಕ ವಿವಿಧ ವೈದಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ತಿಳಿಸಿದ್ದಾರೆ.ಅವರು ಶನಿವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದಲ್ಲಿ ಏ.೨೧ರಂದು ಭಾನುವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಪಾಕ ಶಾಲೆ ಉದ್ಘಾಟನೆ, ಲಾಕರ್ ಉದ್ಘಾಟನೆ, ಕಾರ್ಯಾಲಯ ಉದ್ಘಾಟನೆ, ಅತಿಥಿ ಕೊಠಡಿ ಉದ್ಘಾಟನೆ, ಮುಖ್ಯ ವೇದಿಕೆ ಉದ್ಘಾಟನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಕ್ಷೇತ್ರದ ತಂತ್ರಿಗಳು ಹಾಗೂ ಋತ್ವಿಜರಿಗೆ ಸ್ವಾಗತ, ನಂತರ ದೇವತಾ ಪ್ರಾರ್ಥನೆಯೊಂದಿಗೆ ವಿವಿಧ ವೈದಿಕ ತಾಂತ್ರಿಕ ವಿಧಿ ವಿಧಾನಗಳು ಪ್ರಾರಂಭಗೊಳ್ಳಲಿದೆ. ಸಂಜೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಎಂದರು.ಏ.೨೨ ರಂದು ಸಂಜೆ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಏ.೨೩ ರಂದು ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಸ್ವಾಮೀಜಿಯವರು, ಏ.೨೪ ರಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಏ.೨೫ ರಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಗಣ್ಯರ ಉಪಸ್ಥಿತಿಯಲ್ಲಿ ಆಶೀರ್ವಚನ ನೀಡಲಿದ್ದಾರೆ. ಏ.೨೬ ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಕೆಮ್ಮಿ೦ಜೆ ಕಾರ್ತಿಕ್ ತಂತ್ರಿಗಳು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಏ.೨೬ರಂದು ಪ್ರಾತಃಕಾಲ ಮಹಾಗಣಪತಿ ಹೋಮ, ಮಂಟಪ ಸಂಸ್ಕಾರ, ಕುಂಭೇಶ ಕರ್ಕರಿಪೂಜೆ, ಅಗ್ನಿಜನನ, ಬ್ರಹ್ಮಕಲಶಪೂಜೆ, ಪರಿಕಲಶಪೂಜೆ, ಅಲ್ಪಪ್ರಸಾದ ಶುದ್ಧಿ, ಪ್ರಾಸಾದ ಪ್ರತಿಷ್ಠೆ ಮೊದಲಾದ ವೈಧಿಕ ಕಾರ್ಯಕ್ರಮಗಳು ನಡೆಯಲಿವೆ. ೯.೨೪ ರಿಂದ ೧೦.೧೫ ರವರೆಗೆ ನಡೆಯುವ ಮಿಥುನ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಪುನರ್‌ಪ್ರತಿಷ್ಠೆ, ಗಣಪತಿ, ದುರ್ಗಾದೇವಿ ಪ್ರತಿಷ್ಠೆ ಅಷ್ಟಬಂಧಕ್ರಿಯೆ, ಕುಂಭೇಶಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಜೀವಕಲಶಾಭಿಷೇಕ, ಪ್ರತಿಷ್ಠಾ ಪೂಜೆ, ಶಿಖರ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಮೊದಲಾದವು ನಡೆಯಲಿದೆ.೨೭ರಂದು ಬ್ರಹ್ಮಕಲಶಾಭಿಷೇಕ: ಏ.೨೭ರಂದು ಬೆಳಗ್ಗೆ ಮಹಾಗಣಪತಿ ಹೋಮ, ಪಂಚಾಮೃತಾಭಿಷೇಕ, ಇಂದ್ರಾದಿ ದಿಕ್ಪಾಲ ದೇವತೆಗಳ ಪ್ರತಿಷ್ಠೆ, ಮಹಾಬಲಿಪೀಠ ಪ್ರತಿಷ್ಠೆ, ಶ್ರೀದೇವರಿಗೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ರಾತ್ರಿ ರಂಗಪೂಜೆ, ಮಹಾಪೂಜೆ, ಶ್ರೀದೇವರ ಬಲಿ ಹೊರಟು ಶ್ರೀಭೂತ ಬಲಿ ಉತ್ಸವ, ವಸಂತಕಟ್ಟೆ ಪೂಜೆ, ಸಾರ್ವಜನಿಕ ಕಟ್ಟೆ ಪೂಜೆಗಳು ನಡೆಯಲಿದೆ.
೨೯ ಹಾಗೂ ೩೦ರಂದು ಉಳ್ಳಾಲ್ತಿ, ಉಳ್ಳಾಕ್ಲು ಮತ್ತು ಸಪರಿವಾರ ದೈವಗಳಿಗೆ ನೇಮೋತ್ಸವದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ, ಸಂಚಾಲಕ ಸುಧಾಕರ ರಾವ್ ಆರ್ಯಾಪು ಇದ್ದರು.