ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಸ್ವಾಸ್ಥ್ಯ ಸಮಾಜಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರ ಎಂದು ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಅಭಿಪ್ರಾಯಪಟ್ಟರು.ಅವರು ಸಮೀಪದ ಶ್ರೀ ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ ಗುರುವಾರ ಹುಣ್ಣಿಮೆ ರಾತ್ರಿ ನಡೆದ ಸಹಸ್ರ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಠಗಳ ಪಾತ್ರ ಮಹತ್ವದಾಗಿದ್ದು, ಈ ನಿಟ್ಟಿನಲ್ಲಿ ಮನೆಹಳ್ಳಿ ಮಠ ಸಮಾಜಕ್ಕೆ ತನ್ನದೆಯಾದ ಕಾಣಿಕೆಯನ್ನು ನೀಡುತ್ತಿದೆ. ಹಿಂದೂ ಸಂಸ್ಕೃತಿಯಲ್ಲಿ ಗುರು ಶಿಷ್ಯ ಪರಂಪರೆಗೆ ದೊಡ್ಡ ಇತಿಹಾಸ ಇದ್ದು, ಗುರು ಶಿಷ್ಯನನ್ನು ಉದ್ದರಿಸುವ ಕಾರ್ಯ ಮಾಡಿದರೆ, ಶಿಷ್ಯ ಗುರುವಿನ ಸೇವೆ ಮಾಡಿ ತನ್ನ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುತ್ತಾನೆ ಎಂದರು.ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ಆಧ್ಯಾತ್ಮಿಕತೆಯ ಜೊತೆಗೆ ಜೀವನದಲ್ಲಿ ಮುನ್ನಡೆದಾಗ ಪ್ರಜ್ಞಾವಂತ ಸಮಾಜ ನಿರ್ಮಾಣವಾಗಲು ಸಾಧ್ಯ. ಧರ್ಮ ಮರೆತ ರಾಷ್ಟ್ರಕ್ಕೆ ಅಥವಾ ವ್ಯಕ್ತಿಗೆ ಸುಖ ಇರುವುದಿಲ್ಲ. ಧರ್ಮದ ಜೊತೆಯಲ್ಲಿ ದೈನಂದಿನ ಚಟುವಟಿಕೆಗಳನ್ನು ನಡೆಸಬೇಕು. ಆಗ ಸ್ವಾರ್ಥರಹಿತ ಸಮಾಜ ನಿರ್ಮಾಣವಾಗುತ್ತದೆ ಎಂದರು.ಬೆಂಗಳೂರಿನ ನ್ಯಾಯಧೀಶರಾದ ಜಯಶ್ರೀ ಮಾತನಾಡಿ, ಬೆಳ್ಳಿ, ಬಂಗಾರ, ಹಣ, ಆಸ್ತಿ ಇವು ಯಾವುದು ನಿಜವಾದ ಸಂಪತ್ತಾಗದು. ನಮಗೆ ಎಲ್ಲವನ್ನೂ ದಯಪಾಲಿಸುವ ಭಗವಂತನ ಸ್ಮರಣೆ ಮತ್ತು ಆಧ್ಯಾತ್ಮಿಕ ಚಿಂತನೆಯೇ ನಿಜವಾದ ಸಂಪತ್ತು ಎಂದರು.
ವೇದಿಕೆಯಲ್ಲಿ ಮನೆಹಳ್ಳಿ ಮಠಾಧೀಶ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಲಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕೆಸತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ದೊಡ್ಡ ಬಳ್ಳಾಪುರ ಮಠದ ಶ್ರೀ ನಿಶ್ಚಲ ದೇಶೀಕೇಂದ್ರ ಸ್ವಾಮೀಜಿ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ, ಪ್ರಮುಖರಾದ ರವಿಶಂಕರ್, ಮಲ್ಲಿಕಾರ್ಜುನ್, ಕೆ.ಪಿ.ಜಯಕುಮಾರ್ ಮುಂತಾದವರು ಭಾಗವಹಿಸಿದರು.
ಗುರುಸಿದ್ದವೀರೇಶ್ವರ ಸಹಸ್ರ ದೀಪೋತ್ಸವ ಕಾರ್ಯಕ್ರಮದಲ್ಲಿ ಕ್ಷೇತ್ರನಾಥ ಶ್ರೀ ವೀರಭದ್ರೇಶ್ವರ, ಶ್ರೀ ತಪೋವನೇಶ್ವರಿ, ಚಲುವರಾಯ ಸ್ವಾಮಿ ಉತ್ಸವ ಮೂರ್ತಿಗಳೊಂದಿಗೆ ಯಸಳೂರಿನ ನಂದಿಧ್ವಜ, ವೀರಗಾಸೆ, ದುಗ್ಗಳ ಹೊತ್ತ ಮಹಿಳೆಯರು ಉತ್ಸವಕ್ಕೆ ಮೆರಗು ತಂದರು. 25 ಸಾವಿರ ಎಣ್ಣೆ ದೀಪಗಳನ್ನು ಹಾಗೂ 21 ವಿವಿಧ ಮಾದರಿಯಿಂದ ಸ್ಥಳದಲ್ಲೇ ಕೊಬ್ಬರಿ, ತರಕಾರಿ, ಎಳನೀರು ಧಾನ್ಯಗಳನ್ನು ಬಳಸಿ ತಯಾರಿಸಿದ ದೀಪಗಳನ್ನು ಉರಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಆಕಾಶದಲ್ಲಿ ವರ್ಣರಂಜಿತ ಪಟಾಕಿಗಳನ್ನು ಸಿಡಿಸಲಾಯಿತು. ದೀಪೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮಠದ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ 2024 ವರ್ಷದ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಯಿತು.