ಕಾರವಾರ: ವಿವೇಕ ಹೆಬ್ಬಾರ್, ಬೆಂಬಲಿಗರ ಕಾಂಗ್ರೆಸ್ ಸೇರ್ಪಡೆ ಹಾಗೂ ಶಿವರಾಮ ಹೆಬ್ಬಾರ್ ನಡೆಯ ಬಗ್ಗೆ ಕೇವಲ ಬಿಜೆಪಿಗರಷ್ಟೇ ಅಲ್ಲ, ಹಿರಿಯ ಕಾಂಗ್ರೆಸ್ ಮುಖಂಡ ಆರ್.ವಿ. ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನ ಎರಡು ಶಕ್ತಿ ಕೇಂದ್ರಗಳ ನಡುವಣ ಶೀತಲ ಸಮರ ಶಿವರಾಮ ಹೆಬ್ಬಾರ್ ಭವಿಷ್ಯ ಹಾಗೂ ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರ ಪ್ರಚಾರದ ಮೇಲೂ ಯಾವ ಪರಿಣಾಮ ಬೀರಲಿದೆ ಎನ್ನುವ ಕುತೂಹಲ ಉಂಟಾಗಿದೆ.
ಹೆಬ್ಬಾರ್ ಪುತ್ರ ವಿವೇಕ ಹೆಬ್ಬಾರ್ ಹಾಗೂ ಬೆಂಬಲಿಗರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಂತೆ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ರೂಪಾಲಿ ಎಸ್. ನಾಯ್ಕ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಬಹುತೇಕರು ಹೆಬ್ಬಾರ್ ವಿರುದ್ಧ ಮುಗಿಬಿದ್ದರು. ಬಿಜೆಪಿಗರ ಹೇಳಿಕೆ ಬಗ್ಗೆ ಹೆಬ್ಬಾರ್ ತಲೆಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ. ಏಕೆಂದರೆ ಅವರು ಕಾಂಗ್ರೆಸ್‌ನಲ್ಲಿ ಒಂದು ಕಾಲನ್ನು ಇಟ್ಟು ಆಗಿತ್ತು. ಆದರೆ ದೇಶಪಾಂಡೆ ಹೆಬ್ಬಾರ್ ಬೆಂಬಲಿಗರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಹೆಬ್ಬಾರ್ ಬೆಂಬಲಿಗರಿಗೆ ಆತಂಕವನ್ನು ಹುಟ್ಟಿಸದೆ ಇರಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟಕ್ಕೆ ಹೋಗಲಿದೆ ಎನ್ನುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಹಾಗೂ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರದ್ದು ಒಂದು ಬಣ. ಇವರು ಸಿದ್ದರಾಮಯ್ಯ ಅವರಿಗೆ ಆಪ್ತರು. ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಕಾರವಾರ ಶಾಸಕ ಸತೀಶ ಸೈಲ್ ಅವರದ್ದು ಇನ್ನೊಂದು ಬಣ. ಇವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಆಪ್ತರು. ಈಗ ಶಿವರಾಮ ಹೆಬ್ಬಾರ್ ಬೆಂಬಲಿಗರು ಡಿ.ಕೆ. ಶಿವಕುಮಾರ್ ಅವರ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ. ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಎರಡು ಶಕ್ತಿ ಕೇಂದ್ರಗಳ ನಡುವೆ ಪೈಪೋಟಿ ಜೋರಾಗುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಇರುವಷ್ಟು ಕಾಲ ಜಿಲ್ಲೆಯಲ್ಲಿ ಆರ್.ವಿ. ದೇಶಪಾಂಡೆ ಪ್ರಾಬಲ್ಯ ಮುಂದುವರಿಯಲಿದೆ. ಇದು ಸಚಿವ ಮಂಕಾಳು ವೈದ್ಯ ಅವರಿಗೆ ಬಿಸಿತುಪ್ಪವಾಗಿದೆ. ಇದೇ ಕಾರಣಕ್ಕೆ ಮಂಕಾಳು ವೈದ್ಯ ಸಚಿವರಾಗಿ 9 ತಿಂಗಳಾದರೂ ದೇಶಪಾಂಡೆ ಪ್ರತಿನಿಧಿಸುವ ಹಳಿಯಾಳ ಕ್ಷೇತ್ರಕ್ಕೆ ಕಾಲಿಟ್ಟಿರಲಿಲ್ಲ.ಈ ಬೆಳವಣಿಗೆಗಳ ಬಿಸಿ ಕಾಂಗ್ರೆಸ್‌ನ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರಿಗೂ ತಟ್ಟುವ ಸಾಧ್ಯತೆ ಇದೆ. ಏಕೆಂದರೆ ಆರ್.ವಿ .ದೇಶಪಾಂಡೆ ಹಾಗೂ ಭೀಮಣ್ಣ ನಾಯ್ಕ ಶತಾಯಗತಾಯ ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಗೆಲ್ಲಿಸುವ ಪ್ರಯತ್ನಕ್ಕಿಳಿದರೆ, ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಸತೀಶ ಸೈಲ್ ಕೇವಲ ವೇದಿಕೆಗಳಲ್ಲಿ ಡಾ. ಅಂಜಲಿ ಅವರ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವುದನ್ನು ಹೊರತುಪಡಿಸಿದರೆ ದೇಶಪಾಂಡೆ ಅವರಿಗೆ ಗೆಲುವು ಸೋಲಿನ ಜವಾಬ್ದಾರಿ ಹೊರಿಸಲು ತೀರ್ಮಾನಿಸಿದಂತಿದೆ.
ಹೆಬ್ಬಾರ್ ಪುತ್ರ ವಿವೇಕ ಹೆಬ್ಬಾರ್ ಹಾಗೂ ಅವರ ಬೆಂಬಲಿಗರ ಕಾಂಗ್ರೆಸ್ ಪ್ರವೇಶ ಒಂದು ಬಣದಲ್ಲಿ ಸಡಗರ ಹಾಗೂ ಇನ್ನೊಂದು ಬಣದಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದೆ.