ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ

KannadaprabhaNewsNetwork |  
Published : Aug 20, 2025, 02:00 AM IST
ಜಮಖಂಡಿ ನಗರದ ನಿರೀಕ್ಷಣ ಮಂದಿರ ರಮಾ ನಿವಾಸ ದಲ್ಲಿ ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಷಿ ಸುದ್ದಿಗಾರರೊಂದಿಗೆ ಮಾತನಾಡಿದರು.  | Kannada Prabha

ಸಾರಾಂಶ

ಜಮಖಂಡಿ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸತ್ಯಕಾಮರ ಸುಮ್ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವಾರ್ಷಿಕ ಸಾಮಾನ್ಯ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸತ್ಯಕಾಮರ ಸುಮ್ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವಾರ್ಷಿಕ ಸಾಮಾನ್ಯ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಹೇಳಿದರು. ನಗರದ ರಮಾ ನಿವಾಸ ನಿರೀಕ್ಷಣಾ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರ ಭಿನ್ನಾಭಿಪ್ರಾಯದಿಂದ ಹಾಗೂ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದ ಬಳ್ಳಾರಿ ಜೆಲ್ಲೆಯ ಸಂಡೂರಿನಲ್ಲಿ ನಡೆಯಬೇಕಿದ್ದ ಸಭೆ ರದ್ದು ಮಾಡಲಾಗಿದೆ. ಸಂಡೂರಿನ ಸಭೆ ರದ್ದಾಗಲು ಕಸಾಪ ಕೇಂದ್ರ ಸಮಿತಿಯಲ್ಲಿ 5 ವರ್ಷ ಕೆಲಸ ಮಾಡಿರುವ ವಸುಂಧರಾ ಭೂಪತಿ ಅವರು ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿರುವುದು ವಿಷಾದಕರ. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ ವೈಯಕ್ತಿಕ ದ್ವೇಷ ಇಲ್ಲ. ವಾರ್ಷಿಕ ಸಾಮಾನ್ಯ ಸಭೆಗೆ ಲಕ್ಷಗಟ್ಟಲೇ ಜನರು ಬರುವುದಿಲ್ಲ. ಕೇವಲ 200 ರಿಂದ 300ರವರೆಗೆ ಜನರು ಸೇರುತ್ತಾರೆ. ತಮ್ಮ ಅಧ್ಯಕ್ಷತೆಯಲ್ಲಿ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ನಡೆದ ಸಭೆಗೆ ಅತಿ ಹೆಚ್ಚು ಅಂದರೆ 648 ಜನರು ಸೇರಿದ್ದರು ಎಂದು ತಿಳಿಸಿದರು.

ಕಸಾಪ ಘನತೆ, ಗೌರವಕ್ಕೆ ಧಕ್ಕೆ ತರುವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಎಸ್‌.ಟಿ. ಸಿದ್ದರಾಮಯ್ಯ, ಜಯಪ್ರಕಾಶಗೌಡ, ನಾಗರಾಜ, ವೆಂಕಟರಮಣ, ನಿವೃತ್ತ ಅಧಿಕಾರಿ ಸಲೀಂ ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಹೋರಾಟ ನಡೆಸಲಾಗುತ್ತಿದೆ. ಯಾವುದೋ ವ್ಯಕ್ತಿಗಳ ಪ್ರಭಾವಕ್ಕೆ ಮಣಿದು, ಅಧಿಕಾರ ದುರುಪಯೋಗಪಡಿಸಿಕೊಂಡು ಕಸಾಪಕ್ಕೆ ಕಪ್ಪುಚುಕ್ಕೆ ತರುವಂಥ ಕೆಲಸ ಮಾಡಿದ್ದಾರೆ. ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ಮೊಕದ್ದಮೆ ದಾಖಲಿಸಲಾಗಿದೆ. ಹಿಂದಿನ ಬಾಗಿಲಿನಿಂದ ಬಂದು ಕಸಾಪ ಮೇಲೆ ಸವಾರಿ ಮಾಡಲು ಯತ್ನಿಸುತ್ತಿರುವುದು ಖಂಡನೀಯ, ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದವರು ಸ್ಪಷ್ಟಪಡಿಸಿದರು.

ಮಂಡ್ಯ ಅಧಿವೇಶನ ಲೆಕ್ಕಪತ್ರದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಅನುದಾನದ ಸಹಾಯದಿಂದ ಕಾರ್ಯಕ್ರಮ ಮಾಡುತ್ತೇವೆ. ಅನುದಾನ ಆಯಾ ಪ್ರದೇಶದ ಜಿಲ್ಲಾ ಆಡಳಿತಕ್ಕೆ ಜಮಾ ಆಗುತ್ತದೆ. ಆಹ್ವಾನ ಪತ್ರಿಕೆಗಳ ಪ್ರಕಟಣೆ, ಪುಸ್ತಕ ಪ್ರಕಟಣೆ ಮುಂತಾದವುಗಳಲ್ಲಿ ನಮ್ಮ ಜವಾಬ್ದಾರಿ ಇದೆ ಎಂದು ಉತ್ತರಿಸಿದರು.

ಕನ್ನಡ ಅನ್ನದ ಭಾಷೆಯಾಗಬೇಕು, ಮದುವೆ, ಹೋಟೆಲ್‌ಗಳಲ್ಲಿ ರೈಸ್‌ ಬದಲು ಅನ್ನ ಪದ ಬಳಸಬೇಕು. ಕನ್ನಡ ಭಾಷೆ ಉಳಿಸುವ ಕೆಲಸ ಮಾಡುತ್ತಿದ್ದೇವೆ. ಕನ್ನಡಕ್ಕೆ ಉಳಿಗಾಲ ಇಲ್ಲದಂತಾಗಿದೆ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ಪಾಲಕರು ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಮುಂದಾಗಬೇಕು. ಮನೆ-ಮನಗಳಲ್ಲಿ ಕನ್ನಡ ಉಳಿಯಬೇಕಿದೆ ಎಂದು ಹೇಳಿದರು.

ಕಸಾಪ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಾಟೀಲ ಪಾಂಡು, ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸೀಮಪೀರ್‌ ವಾಲೀಕಾರ, ಬಾಗಲಕೋಟೆ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಕಸಾಪದ ಸಂಘ ಸಂಸ್ಥೆಗಳ ಅಧ್ಯಕ್ಷ ಪ.ಪಂಗಡಗಳ ಅಧ್ಯಕ್ಷ ಗುರುನಾಥ ತಳವಾರ, ತಾಲೂಕು ಅಧ್ಯಕ್ಷ ಸಂತೋಷ ತಳಕೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ