ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಪರಿಚಾರಕ ಸಂಸ್ಥೆಯಷ್ಟೇ. ಅದು ಜಿಲ್ಲಾಡಳಿತಕ್ಕಿಂತ ದೊಡ್ಡದೇನಲ್ಲ. ಸ್ಮರಣಸಂಚಿಕೆ ಕುರಿತ ಸಮಾಲೋಚನಾ ಸಭೆಗೆ ಬರುವುದಕ್ಕೆ ಹೆದರಿಕೆ ಏಕೆ. ಮಂಡ್ಯದವರೇನು ಕೊಲೆಗಡುಕರಾ. ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಗಳು ಹಾಗೂ ಇತರೆ ಯಾವುದೇ ಅಧಿಕಾರಿಗಳು ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರು ಕರೆದಿರುವ ಸಭೆಗೆ ಹೋಗದಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾಧಿಕಾರಿಗಳು ಕರೆದಿದ್ದ ಸ್ಮರಣಸಂಚಿಕೆ ಸಮಾಲೋಚನಾ ಸಭೆಗೆ ಜೋಶಿ ಬರಬೇಕಿತ್ತು. ಬರದೇ ರಾಜಧಾನಿಯಲ್ಲೇ ಉಳಿದುಕೊಂಡಿದ್ದೇಕೆ. ಸಚಿವರು, ಜಿಲ್ಲಾಡಳಿತಕ್ಕಿಂತ ಜೋಶಿ ದೊಡ್ಡವರಾ?. ಸಚಿವ ಎನ್.ಚಲುವರಾಯಸ್ವಾಮಿ ಅವರು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದಾರೆ. ಪರಿಷತ್ತಿನಿಂದ ಬರಬೇಕಾದ ಎರಡು ಫೋಟೋಗೆ ಕಾದು ಕೂರುವ ಅಗತ್ಯವಿಲ್ಲ. ಜೋಶಿ ಬರದಿದ್ದರೂ ಸ್ಮರಣಸಂಚಿಕೆಯನ್ನು ಇನ್ನೊಂದು ವಾರದೊಳಗೆ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿರುವುದಾಗಿ ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ತು, ಕಾರ್ಯಕಾರಿ ಸಮಿತಿ, ಜೋಶಿ ಅವರ ಬಗ್ಗೆ ನಮಗೆ ಯಾವುದೇ ದ್ವೇಷವಿಲ್ಲ. ಅವರ ನಡವಳಿಕೆಗಳು, ಧೋರಣೆಗಳ ಬಗ್ಗೆಯಷ್ಟೇ ನಮ್ಮ ಹೋರಾಟವಿದೆ. ಪ್ರಜಾಪ್ರಭುತ್ವದ ಹಾದಿ ಬಿಟ್ಟು ಅಧ್ಯಕ್ಷರು ನಡೆಯುತ್ತಿರುವುದಕ್ಕೆ ಸೀಮಿತವಾಗಿ ಚಳವಳಿ ನಡೆಸಲಾಗುತ್ತಿದೆ. ೧೧೦ ವರ್ಷದ ಕನ್ನಡ ಸಾಹಿತ್ಯ ಪರಿಷತ್ತಿನ ಹಾದಿಯಲ್ಲಿ ಯಾವೊಬ್ಬ ಅಧ್ಯಕ್ಷರೂ ಇಂತಹ ಧೋರಣೆಯನ್ನು ತಳೆದಿರಲಿಲ್ಲ ಎಂದರು.
ಜೋಶಿ ವಿರುದ್ಧ ಮಂಡ್ಯದಿಂದ ಆರಂಭಗೊಂಡಿರುವ ಹೋರಾಟ ರಾಜ್ಯಾದ್ಯಂತ ನಿಧಾನವಾಗಿ ವಿಸ್ತರಣೆಗೊಳ್ಳುತ್ತಿದೆ. ಎಲ್ಲಾ ಕಡೆಯಿಂದಲೂ ಜೋಶಿ ವಿರುದ್ಧ ಕೂಗು ಕೇಳಿಬರುತ್ತಿದೆ. ಮೇ ೧೭ರಂದು ನಡೆಯಲಿರುವ ಜನಚಳವಳಿ ಸಮಾವೇಶದಲ್ಲಿ ದೇವನೂರು ಮಹಾದೇವ, ಹಿ.ಶಿ.ರಾಮಚಂದ್ರೇಗೌಡ ಸೇರಿದಂತೆ ಹಲವಾರು ಹಿರಿಯ ಸಾಹಿತಿಗಳು ಭಾಗವಹಿಸುತ್ತಿದ್ದಾರೆ. ಎಲ್ಲಾ ಸಾಹಿತಿಗಳು ಜೋಶಿ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದರು.
- ಮೀರಾ ಶಿವಲಿಂಗಯ್ಯ, ಮಾಜಿ ಅಧ್ಯಕ್ಷರು, ಜಿಲ್ಲಾ ಕಸಾಪಸಮ್ಮೇಳನದ ಆರಂಭದಿಂದ ಹಿಡಿದು ಸಮ್ಮೇಳನ ಮುಗಿದ ನಂತರವೂ ಕಸಾಪ ರಾಜ್ಯಾಧ್ಯಕ್ಷರ ನಡವಳಿಕೆ ಬಗ್ಗೆಯೇ ಚರ್ಚೆಗಳಾಗುತ್ತಿವೆ. ಹಾಗಾದರೆ ಜೋಶಿ ಅವರಿಗೆ ಯಾರ ಅಂಕುಶವೂ ಇಲ್ಲವೇ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಪರಿಷತ್ತಿನ ವಿವಾದಕ್ಕೆಲ್ಲಾ ತೆರೆ ಎಳೆಯಬೇಕು. ಗೊಂದಲಗಳನ್ನು ನಿವಾರಿಸಿ ಪರಿಷತ್ತು ಕನ್ನಡಪರವಾಗಿ ಕೆಲಸ ಮಾಡುವಂತೆ ಮಾಡಬೇಕು.
- ಪ್ರೊ.ಜಿ.ಟಿ.ವೀರಪ್ಪ, ಮಾಜಿ ಅಧ್ಯಕ್ಷರು, ಜಿಲ್ಲಾ ಕಸಾಪ