ಸಚಿವರ ವಿರುದ್ಧ ಕಸಾಪ ಸದಸ್ಯರ ಅಸಮಾಧಾನ

KannadaprabhaNewsNetwork |  
Published : Nov 02, 2026, 03:30 AM IST
ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರ ಜತೆ ಚರ್ಚಿಸಿದ ಕಸಾಪ ಪದಾಧಿಕಾರಿಗಳು. | Kannada Prabha

ಸಾರಾಂಶ

ಪ್ರತಿವರ್ಷ ಸಚಿವರು ಮೊದಲು ಕನ್ನಡಾಂಬೆಯ ಸ್ತಬ್ಧಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಯಲ್ಲಿ ಪಾಲ್ಗೊಂಡ ಬಳಿಕ ಧ್ವಜಾರೋಹಣ ನೆರವೇರಿಸುವುದು ವಾಡಿಕೆಯಾಗಿತ್ತು. ಆದರೆ ಈ ಬಾರಿ ಸಚಿವರು ಮೆರವಣಿಗೆಯಲ್ಲಿ ಪಾಲ್ಗೊಂಡಿಲ್ಲವಾಗಿದ್ದು, ಮೆರವಣಿಗೆ ಪೊಲೀಸ್ ಪರೇಡ್ ಮೈದಾನಕ್ಕೆ ಆಗಮಿಸುವ ಮುನ್ನವೇ ಧ್ವಜಾರೋಹಣ ನೆರವೇರಿಸಿದ್ದರಿಂದ ವಿವಾದ ಉಂಟಾಯಿತು.

ಕಾರವಾರ: ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ಸ್ತಬ್ಧಚಿತ್ರ ಆಗಮಿಸುವ ಮುನ್ನವೇ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಧ್ವಜಾರೋಹಣ ನೆರವೇರಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.ಪ್ರತಿವರ್ಷ ಸಚಿವರು ಮೊದಲು ಕನ್ನಡಾಂಬೆಯ ಸ್ತಬ್ಧಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಯಲ್ಲಿ ಪಾಲ್ಗೊಂಡ ಬಳಿಕ ಧ್ವಜಾರೋಹಣ ನೆರವೇರಿಸುವುದು ವಾಡಿಕೆಯಾಗಿತ್ತು. ಆದರೆ ಈ ಬಾರಿ ಸಚಿವರು ಮೆರವಣಿಗೆಯಲ್ಲಿ ಪಾಲ್ಗೊಂಡಿಲ್ಲವಾಗಿದ್ದು, ಮೆರವಣಿಗೆ ಪೊಲೀಸ್ ಪರೇಡ್ ಮೈದಾನಕ್ಕೆ ಆಗಮಿಸುವ ಮುನ್ನವೇ ಧ್ವಜಾರೋಹಣ ನೆರವೇರಿಸಿದ್ದರಿಂದ ವಿವಾದ ಉಂಟಾಯಿತು.ವೇದಿಕೆಯತ್ತ ತೆರಳಲು ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಕಸಾಪ ಸದಸ್ಯರು ವೇದಿಕೆಯ ಮುಂಭಾಗದಲ್ಲೇ ನೆಲದ ಮೇಲೆ ಕುಳಿತು ಧರಣಿ ನಡೆಸಿದರು.ಪ್ರತಿಭಟನಾಕಾರರ ಆಕ್ರೋಶ ಅರಿತ ಸಚಿವ ಲಕ್ಷ್ಮಣ ಸವದಿ ಅವರು ವೇದಿಕೆಯಿಂದ ಕೆಳಗಿಳಿದು ಬಂದು ಅವರೊಂದಿಗೆ ಮಾತನಾಡಿದರು. ನಾನು ಕೂಡ ಗಡಿ ಭಾಗದಿಂದ ಬಂದವನು. ಅಲ್ಲಿಂದ ಒಂದು ಹೆಜ್ಜೆ ಇಟ್ಟರೆ ಸಾಕು ಮಹಾರಾಷ್ಟ್ರ ಸಿಗುತ್ತದೆ. ಹೀಗಾಗಿ ಕನ್ನಡದ ಬಗ್ಗೆ ನನಗೂ ಅಪಾರ ಅಭಿಮಾನವಿದೆ.

ಪ್ರೊಟೋಕಾಲ್ ಪ್ರಕಾರ 9 ಗಂಟೆಗೆ ಸರಿಯಾಗಿ ಧ್ವಜಾರೋಹಣ ನೆರವೇರಿಸಬೇಕಾಗಿದ್ದರಿಂದ ಸ್ತಬ್ಧಚಿತ್ರ ಆಗಮನಕ್ಕಾಗಿ ಕಾಯುವುದು ಸಾಧ್ಯವಾಗಿಲ್ಲ. ಈ ಬಾರಿ ನನ್ನಿಂದ ತಪ್ಪಾಗಿದೆ. ದಯವಿಟ್ಟು ಕ್ಷಮಿಸಿ. ಮುಂದಿನ ದಿನಗಳಲ್ಲಿ ಇಂತಹ ತಪ್ಪಾಗದಂತೆ ಎಚ್ಚರವಹಿಸುತ್ತೇನೆ ಎಂದರು. ಸಚಿವರು ಬಹಿರಂಗವಾಗಿ ಕ್ಷಮೆಯಾಚಿಸಿದ ಬಳಿಕ ಕಸಾಪ ಸದಸ್ಯರು ಪ್ರತಿಭಟನೆಯನ್ನು ಹಿಂಪಡೆದರು.

ಕನ್ನಡಕ್ಕಾಗಿ ಹೋರಾಡುವ ಸ್ಥಿತಿ ಬೇಸರದ ಸಂಗತಿ

ಕುಮಟಾ: ಭಾಷಾ ವೈವಿಧ್ಯತೆಯ ನಡುವೆಯೂ ಪರಸ್ಪರ ಗೌರವ, ಆತ್ಮೀಯತೆಗೆ ಕನ್ನಡ ಸಂಸ್ಕೃತಿ ಸೇತುವೆಯಾಗಿ ಉಳಿದುಕೊಂಡಿದೆ. ಆದರೆ ನಮ್ಮದೇ ರಾಜ್ಯದಲ್ಲಿ ಮಾತೃಭಾಷೆ ಕನ್ನಡಕ್ಕಾಗಿ ಪದೇ ಪದೇ ಧ್ವನಿ ಎತ್ತಬೇಕಾದ ಸ್ಥಿತಿ ಎದುರಿಸುವುದು ಬೇಸರದ ಸಂಗತಿ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಪಟ್ಟಣದ ಮಣಕಿ ಮೈದಾನದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡಾಂಬೆಗೆ ಪೂಜೆ ಸಲ್ಲಿಸಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಮಾತನಾಡಿ, ಕನ್ನಡ ರಾಜ್ಯೋತ್ಸವನ್ನು ನಾಡು, ನುಡಿ, ಸಂಸ್ಕೃತಿ ಹೆಮ್ಮೆಯ ಸಂಕೇತವಾಗಿ ಆಚರಿಸಲಾಗುತ್ತಿದೆ. ಹಂಚಿಹೋಗಿದ್ದ ಕನ್ನಡ ಭಾಷಿಕರು ಒಂದಾದ ಸಂಭ್ರಮವೂ ಇದರಲ್ಲಿದೆ. ಪ್ರತಿಯೊಬ್ಬರೂ ಕನ್ನಡ ಹೆಚ್ಚೆಚ್ಚು ಮಾತಾಡಿದಷ್ಟು ರಾಜ್ಯೋತ್ಸವ ಅರ್ಥಪೂರ್ಣವಾಗುತ್ತದೆ ಎಂದರು.ವೇದಿಕೆಯಲ್ಲಿ ಸಿಪಿಐ ಕುಸುಮಾಧರ ಕೆ., ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಬಿಇಒ ಉದಯ ನಾಯ್ಕ, ನೌಕರರ ಸಂಘದ ಅಧ್ಯಕ್ಷ ವಿನಾಯಕ ದೇಶಭಂಡಾರಿ, ಪಿಎಸ್‌ಐ ಖಾದರ ಭಾಷಾ ಇತರರು ಇದ್ದರು. ತಾಪಂ ಇಒ ರಾಜೇಂದ್ರ ಎಲ್. ಭಟ್ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಕನ್ನಡಾಂಬೆಯ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ಞಾನೇಶ್ ಕುಮಾರ್‌ ಜೈಲಿಗಟ್ಟುತ್ತೇವೆ : ರಾಹುಲ್‌ ಗುಡುಗು
ಕನ್ನಡ ಬಾವುಟಕ್ಕೆ ನಾಡಧ್ವಜ ಸ್ಥಾನಮಾನ: ಸಿಎಂ