ನಾಡು, ನುಡಿ, ಸಂಸ್ಕೃತಿಗೆ ಕಸಾಪ ಕೊಡುಗೆ ಅಪಾರ

KannadaprabhaNewsNetwork | Published : May 10, 2024 11:46 PM

ಸಾರಾಂಶ

ಕಸಾಪ ದೇಶ, ವಿದೇಶಗಳಲ್ಲಿ ಕನ್ನಡವನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಅನೇಕ ಸಂಘ ಸಂಸ್ಥೆಗಳು ಕನ್ನಡ ಪರವಾಗಿ ಹೋರಾಟ ಮಾಡುತ್ತಿದ್ದರೂ, ಕ.ಸಾ.ಪ ಕೊಡುಗೆ ವಿಭಿನ್ನವಾಗಿದೆ. ಕಸಾಪ ನಾಲ್ವಡಿ ಕೃಷ್ಣರಾಜ ಒಡೆಯರ್ 1915ರಲ್ಲಿ ಸ್ಥಾಪಿಸಿದ ಸಂಸ್ಥೆ

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಕನ್ನಡನಾಡು ನುಡಿಗೆ ಕನ್ನಡ ಸಾಹಿತ್ಯ ಪರಿಷತ್ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಹೇಳಿದರು.

ನಗರದ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 110 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಭಾಷೆ, ಸಂಸ್ಕೃತಿ, ನಾಡ ರಕ್ಷಣೆ

ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ರವರ ಚಿತ್ರಪಟಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕಸಾಪ ದೇಶ, ವಿದೇಶಗಳಲ್ಲಿ ಕನ್ನಡವನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಅನೇಕ ಸಂಘ ಸಂಸ್ಥೆಗಳು ಕನ್ನಡ ಪರವಾಗಿ ಹೋರಾಟ ಮಾಡುತ್ತಿದ್ದರೂ, ಕ.ಸಾ.ಪ ಕೊಡುಗೆ ವಿಭಿನ್ನವಾಗಿದೆ. ಕಸಾಪ ನಾಲ್ವಡಿ ಕೃಷ್ಣರಾಜ ಒಡೆಯರ್ 1915ರಲ್ಲಿ ಸ್ಥಾಪಿಸಿದ ಕನ್ನಡಿಗರ ಸಂಸ್ಥೆಯಾಗಿದೆ. ಈ ಸಂಸ್ಥೆ ಕನ್ನಡ ನಾಡಿನ ನೆಲ, ಜಲ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆ ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದು ದೊಡ್ಡ ಸಾಧನೆ ಎಂದರು.ಪ್ರಾಂಶುಪಾಲ ವಿ.ವೆಂಕಟೇಶ್ ಮಾತನಾಡಿ, ಕನ್ನಡ ನಾಡು ನುಡಿ ನೆಲ ಜಲದ ಪ್ರಶ್ನೆ ಬಂದಾಗ ಪರಿಷತ್ತು ಮುಂಚೂಣಿಯಲ್ಲಿ ನಿಂತು ಕನ್ನಡಿಗರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿದೆ. ಕನ್ನಡಿಗರೆಲ್ಲ ಪರಿಷತ್ತಿನ ಸದಸ್ಯರಾಗುವ ಮೂಲಕ ಶಕ್ತಿಯನ್ನು ದ್ವಿಗುಣಗೊಳಿಸುವ ಕಾರ್ಯ ಮಾಡಬೇಕಿದೆ ಹಾಗೂ ಕನ್ನಡ ಶಾಲೆಗಳ ಸಬಲೀಕರಣ ಪ್ರಥಮ ಆದ್ಯತೆಯಾಗಬೇಕು ಎಂದು ಹೇಳಿದರು.ಗೀತ ಗಾಯನ ಕಾರ್ಯಕ್ರಮ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಸ್.ವಿ ನಾಗರಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಲಾವಿದರಾದ ನಾಗಭೂಷಣ್, ಶಿಕ್ಷಕ ಹರೀಶ್ ಹಾಗೂ ಶ್ರೀನಿವಾಸ್ ವಿಶ್ವಕರ್ಮ ರವರಿಂದ ಕನ್ನಡದ ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಷಫಿ ಅಹಮದ್, ಡಾ. ಮುರಳಿ ಆನಂದ್, ಡಾ.ವಿಜಯೇಂದ್ರ, ನಿವೃತ್ತ ಶಿಕ್ಷಕರಾದ ಎನ್. ಸುಂದರ್, ಶಿಕ್ಷಕ ಶ್ರೀನಿವಾಸರೆಡ್ಡಿ, ಅಂಬಾರಿ ಮಂಜುನಾಥ್, ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ, ಕೃ.ನಾ .ಶ್ರೀನಿವಾಸ್, ಶಂಕರಣ್ಣ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Share this article