ಕಾಶಿ ವಿಶ್ವೇಶ್ವರನ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

KannadaprabhaNewsNetwork | Published : Nov 26, 2024 12:47 AM

ಸಾರಾಂಶ

ನಗರದ ಬಸ್ ನಿಲ್ದಾಣದ ಸಮೀಪ ಭಕ್ತಾಧಿಗಳಿಗೆ ಸುಸ್ವಾಗತ ಕೋರುವ ಬೃಹತ್ ಕಮಾನುಗಳೊಂದಿಗೆ ಇಡೀ ಪ್ರದೇಶ ಕೇಸರೀಮಯವಾಗಿದ್ದು, ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಬಜರಂಗದಳದ ಬೃಹತ್ ಕಮಾನುಗಳು, ಬಂಟಿಂಗ್‌ಗಳು, ಭಗವಧ್ವಜಗಳೊಂದಿಗೆ ಇದೇಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಕೋಲಾರ

ದಕ್ಷಿಣ ಕಾಶಿ ಎಂದೇ ಖ್ಯಾತಿಯಾದ ನಗರದ ಅಂತರಗಂಗೆಯ ವಿಶ್ವೇಶ್ವರ ಸನ್ನಿಧಿಯಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ವಿಶೇಷ ಪೂಜೆ ನಡೆದಿದ್ದು, ಜಿಲ್ಲೆ, ರಾಜ್ಯ,ಹೊರರಾಜ್ಯಗಳಿಂದ ಬೃಹತ್ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಲ್ಲಿನ ಬಸವನ ಬಾಯಿಂದ ಬರುವ ಪವಿತ್ರ ಜಲ ಪ್ರೋಕ್ಷಣೆ ಮಾಡಿಕೊಂಡು ಪುನೀತರಾದರು. ಬಜರಂಗದಳ, ವಿಶ್ವಹಿಂದೂಪರಿಷತ್‌ನಿಂದ ಉಚಿತ ಸಾರಿಗೆ ಸೇವೆ ನಗರದ ಬಸ್ ನಿಲ್ದಾಣದ ಸಮೀಪದಿಂದ ವ್ಯವಸ್ಥೆ ಮಾಡಿದ್ದು, ಸಾರಿಗೆ ಸೇವೆಗೆ ಚಾಲನೆ ನೀಡಿದ ಬಜರಂಗದಳ ಮುಖಂಡರಾದ ಬಾಲಾಜಿ, ಬಾಬು, ಅಪ್ಪಿಆನಂದ್ ಮತ್ತಿತರರು ೫೦ ಸಾವಿರಕ್ಕೂ ಹೆಚ್ಚು ಭಕ್ತರು ನಗರದಿಂದ ಅಂತರಗಂಗೆಗೆ ಹೋಗಲು ನೆರವಾದರು.ಕಲ್ಲಿನ ಬಸವನ ಬಾಯಿಂದ ಬರುವ ನೀರು ಪವಿತ್ರ ಗಂಗಾನದಿಯಿಂದಲೇ ಬರುತ್ತಿದೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದಾಗಿದ್ದು, ಮುಂಜಾನೆಯ ಚಳಿಯಲ್ಲೂ ಭಕ್ತರು ಅಂತರಗಂಗೆ ಬೆಟ್ಟದತ್ತ ದಾಪುಗಾಲು ಹಾಕಿದ್ದರು.ಎಲ್ಲೆಲ್ಲೂ ಕೇಸರಿಮಯ:ನಗರದ ಬಸ್ ನಿಲ್ದಾಣದ ಸಮೀಪ ಭಕ್ತಾಧಿಗಳಿಗೆ ಸುಸ್ವಾಗತ ಕೋರುವ ಬೃಹತ್ ಕಮಾನುಗಳೊಂದಿಗೆ ಇಡೀ ಪ್ರದೇಶ ಕೇಸರೀಮಯವಾಗಿದ್ದು, ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಬಜರಂಗದಳದ ಬೃಹತ್ ಕಮಾನುಗಳು, ಬಂಟಿಂಗ್‌ಗಳು, ಭಗವಧ್ವಜಗಳೊಂದಿಗೆ ಇದೇಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.ಗಂಗೆಯನ್ನು ಶಿರದಲ್ಲಿ ಧರಿಸಿರುವ ಗಂಗಾಧರ ಇಲ್ಲಿ ಕಾಶಿವಿಶ್ವೇಶ್ವರನಾಗಿದ್ದಾನೆ. ಜಲಕಂಠೇಶ್ವರ ಸನ್ನಿಧಿಯೂ ಇಲ್ಲಿದೆ. ಒಟ್ಟಾರೆ ಅಂತರಗಂಗೆ ಅಸಂಖ್ಯಾತ ಭಕ್ತರ ಪಾಲಿಗೆ ದಕ್ಷಿಣ ಕಾಶಿಯೆಂದೇ ನಾಡಿನಾದ್ಯಂತ ಖ್ಯಾತಿ ಪಡೆದುಕೊಂಡಿದೆ.

ಅಂತರಗಂಗೆ ಅದ್ಧೂರಿ ಜಾತ್ರೆ

ಅಂತರಗಂಗೆಯ ದಕ್ಷಿಣ ಕಾಶಿ ಕ್ಷೇತ್ರದಲ್ಲಿ ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರದಂದು ವಿಶೇಷ ಪೂಜೆ, ಅಭಿಷೇಕ ನಡೆಯುತ್ತಿದೆ. ಕಾರ್ತಿಕ ಮಾಸದ ಕೊನೆ ಸೋಮವಾರವಾದ ಇಂದು ವಿಶ್ವ ಹಿಂದೂ ಪರಿಷತ್ ಸಹಕಾರ ಹಾಗೂ ಭಜರಂಗದಳದ ನೇತೃತ್ವದಲ್ಲಿ ನಡೆಯುವ ಜಾತ್ರೆಯಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಳ್ಳುವುದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಬಜರಂಗದಳ ಹಾಗೂ ವಿಹಿಂಪ ಕಳೆದ ೨೫ ವರ್ಷಗಳಿಂದ ಭಕ್ತರಿಗೆ ಉಚಿತ ಬಸ್ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತಿದೆ. ಕಾರ್ತಿಕ ಮಾಸದ ಕೊನೆಸೋಮವಾರ ಅಂತರಗಂಗೆ ಶ್ರೀ ಕಾಶಿವಿಶ್ವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ದ ಪ್ರಯುಕ್ತ ಶ್ರೀ ಸ್ವಾಮಿ ಯವರಿಗೆ ಪ್ರಾತಃ ಕಾಲದಲ್ಲಿ ವಿಶೇಷ ಫಲ ಪಂಚಾಮೃತ ಅಭಿಷೇಕ ರುದ್ರಭಿಷೇಕ ವಿಶೇಷ ಅಲಂಕಾರ ಅರ್ಚನೆ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮಗಳು ದೇವಾಲಯದ ಪ್ರಧಾನ ಅರ್ಚಕರಾದ ಡಾ.ಕೆ.ಎಸ್.ಮಂಜುನಾಥ ದೀಕ್ಷಿತ್ ಹಾಗೂ ವೆಂಕಟೇಶ್ ದೀಕ್ಷಿತ್ ನೆರವೇರಿಸಿದರು.

ಸ್ವಯಂ ಸೇವಕರ ನೆರವು

ಶಿವಲಿಂಗ ದರ್ಶನಕ್ಕೆ ಸುಗಮ ವ್ಯವಸ್ಥೆ ಮಾಡಿಕೊಡಲು ಹಲವು ಸ್ವಯಂ ಸೇವಕರು ಕಾರ್ಯನಿರ್ವಹಿಸಿದರು. ಸಿದ್ದತಾ ಕಾರ್ಯದಲ್ಲಿ ಬಜರಂಗದಳ ಮುಖಂಡರಾದ ಬಾಲಾಜಿ, ಬಾಬು ಅಪ್ಪಿ, ವಿಶ್ವನಾಥ್, ವಿಹಿಂಪದ ಡಾ.ಶಿವಣ್ಣ ಮತ್ತಿತರರು ಉಪಸ್ಥಿತರಿದ್ದು, ಜಾತ್ರೆಯ ಯಶಸ್ಸಿಗೆ ಸಹಕರಿಸಿದ ವಿವಿಧ ಸಂಘ ಸಂಸ್ಥೆಗಳು, ದಾನಿಗಳು, ಪೊಲೀಸ್ ಇಲಾಖೆ, ಸ್ವಚ್ಚತಾ ಕಾರ್ಯ ನಡೆಸಿದ ನಗರಸಭೆಗೆ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಜರಂಗದಳ ಮುಖಂಡ ಬಾಲಾಜಿ, ಬಾಬು,ಅಪ್ಪಿ, ಕೆಯುಡಿಎ ಮಾಜಿ ಅಧ್ಯಕ್ಷರಾದ ಓಂಶಕ್ತಿ ಚಲಪತಿ, ವಿಜಯಕುಮಾರ್, ಬಿಜೆಪಿ ನಗರಘಟಕ ಯುವಮೋರ್ಚಾ ಅಧ್ಯಕ್ಷ ಸಾಯಮಾಳಿ, ವಿಶ್ವನಾಥ್, ಮಂಜು, ದೀಪು, ಸಾಯಿಸುಮನ್, ಸಾಯಿಮೌಳಿ, ರಾಜೇಶ್,ಭವಾನಿ, ವೆಂಕಿ, ಯಶ್, ವಿಶಾಖ, ಕೊಂಡೇ, ಮಹೇಶ್, ಸಾಯಿಕುಮಾರ್, ಪ್ರವೀಣ್, ಪ್ರಸನ್ನ, ಗೌತಮ್, ಹರೀಶ್, ಗಿರಿ, ಕಿರಣ್, ಸೋಮಶೇಖರ್, ಆನಂದ್, ಅರ್ಜುನ್, ಸುಧಾಕರ್, ಮೋಹನ್, ನಿತಿನ್, ಪವನ್, ನಿಥುನ್, ಸೋಮು, ಗೌತಮ್, ಮುರಳಿ, ದರ್ಶನ್, ಜಗದೀಶ್, ವಿನಯ್,ಲೋಹಿತ್,ರಾಮು, ನಾಮಲ ಮಂಜು,ಸಾಮಾಬಾಬು, ಮತ್ತಿತರರು ಸ್ವಯಂಸೇವಕರಾಗಿ ಕಾಶಿ ವಿಶ್ವೇಶ್ವರನ ದರ್ಶನಕ್ಕೆ ಭಕ್ತರಿಗೆ ನೆರವಾದರು.

Share this article