ಕಾರವಾರ: ಕೇಂದ್ರ ಪರಿಸರ ಇಲಾಖೆಯು ಕಸ್ತೂರಿರಂಗನ್ ವರದಿಯ 7ನೇ ಅಧಿಸೂಚನೆ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ತುರ್ತು ಗ್ರಾಮಸಭೆ ಕರೆದು ಜನಾಭಿಪ್ರಾಯ ಸಂಗ್ರಹಿಸಬೇಕು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲಾಡಳಿತವನ್ನು ಆಗ್ರಹಿಸಿದೆ.ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದ ನಿಯೋಗವು ಬುಧವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿತು.
ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವುದರಿಂದ ಸ್ಥಳೀಯ ಜನರ ಬದುಕು, ಕೃಷಿ, ಭೂಮಿ ಹಾಗೂ ಜೀವನೋಪಾಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಉದ್ದೇಶಿಸಿರುವ ಪ್ರದೇಶಗಳಲ್ಲಿ ಜನಸಾಮಾನ್ಯರ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಜಿಲ್ಲಾಡಳಿತ ಸಮಗ್ರ ಅಧ್ಯಯನ ನಡೆಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವಾಸ್ತವಾಂಶಗಳನ್ನು ಒಳಗೊಂಡ ಸಮಗ್ರ ವರದಿ ಸಲ್ಲಿಸಬೇಕು ಎಂದು ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ನಿಯೋಗದಲ್ಲಿ ಜಿಲ್ಲಾ ಸಂಚಾಲಕ ರಾಜೇಶ್ ಮಿತ್ರ ನಾಯ್ಕ ತೆಂಗಿನಕೇರಿ, ಕುಮಟಾ ತಾಲೂಕು ಅಧ್ಯಕ್ಷ ಮಂಜುನಾಥ ಮರಾಠಿ, ಮಾದೇವ ನಾಯ್ಕ, ಸಂಚಾಲಕ ವಿಜು ಪಿಳ್ಳೆ, ಉದಯ ಗುನಗಾ, ಶಂಕರ್ ನಾಯ್ಕ ಹೊಸಗದ್ದೆ, ಸಂದೇಶ ನಾಯ್ಕ ಬ್ರಹ್ಮೂರು, ಶಂಕರ ಕೊಡಿಯಾ ಅಚವೆ, ಮಾಬ್ಲೇಶ್ವರ ಶೆರುಗಾರ, ವಿಘ್ನೇಶ ಬೋರಳ್ಳಿ ಸೇರಿದಂತೆ ಮತ್ತಿತರರು ಇದ್ದರು.