ಹೊನ್ನಾವರ: ತೆಂಕು- ಬಡಗು ತಿಟ್ಟಿನ ಅಗ್ರಮಾನ್ಯ ಯಕ್ಷಗಾನ ಭಾಗವತ ಮತ್ತು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ದಿ. ಕಡತೋಕಾ ಮಂಜುನಾಥ ಭಾಗವತ ಅವರ ಸಂಸ್ಮರಣೆಯ ಕಡತೋಕಾ ಕೃತಿ- ಸ್ಮೃತಿ ಯಕ್ಷರಂಗೋತ್ಸವವು ತಾಲೂಕಿನ ಕಡತೋಕಾದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಎರಡು ದಿನಗಳ ಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಾಭಿಮಾನಿಗಳ ಸಹಕಾರದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಯಕ್ಷರಂಗೋತ್ಸವಕ್ಕೆ ಸಿದ್ದಾಪುರದ ಹಿರಿಯ ನ್ಯಾಯವಾದಿ ಹಾಗೂ ಸಹಕಾರಿ ಧುರೀಣ ಆರ್.ಎಂ. ಹೆಗಡೆ ಚಾಲನೆ ನೀಡಿ, ಕಡತೋಕಾ ಅವರ ವ್ಯಕ್ತಿತ್ವದ ವಿಶಿಷ್ಟತೆಯನ್ನು ಕಂಡ ಸಂದರ್ಭಗಳನ್ನು ವರ್ಣಿಸಿ ಅವರ ನೆನಪಿನ ಯಕ್ಷರಂಗೋತ್ಸವವು ಯಶಸ್ವಿಯಾಗಲೆಂದು ಹಾರೈಸಿದರು.ಖ್ಯಾತ ಅರ್ಥಧಾರಿ ಉಜರೆ ಅಶೋಕ ಭಟ್ಟ ಮಾತನಾಡಿ, ಕಡತೋಕಾ ಭಾಗವತರು ಯಕ್ಷಗಾನ ಭಾಗವತಿಕೆಯ ಒಂದು ವಿಸ್ಮಯವಾಗಿದ್ದರು ಎಂದು ಅವರ ಗುಣಗಾನವನ್ನು ಮಾಡಿದರು.
ಹಿರಿಯ ಮದ್ದಳೆಗಾರರಾದ ಮಂಜುನಾಥ ಭಂಡಾರಿ ಕಡತೋಕಾ ಹಾಗೂ ಕುಮಟಾದ ಆಂಜನೇಯ ಖ್ಯಾತಿಯ ಕಲಾವಿದ ಗಣಪತಿ ನಾಯ್ಕ ಅವರನ್ಮು ಸನ್ಮಾನಿಸಲಾಯಿತು. ಶಿರಸಿಯ ನ್ಯಾಯವಾದಿ ಜಿ.ಎನ್. ಹೆಗಡೆ ಮುರೇಗಾರ್ , ಯಕ್ಷರಂಗೋತ್ಸವ ಸಂಘಟನೆಯ ಮುಂದಾಳು ಕಡತೋಕಾ ಶಿವಾನಂದ ಹೆಗಡೆ ಮಾತನಾಡಿದರು. ಕಡತೋಕಾ ಗ್ರಾಮ ಪಂಚಾಯತ ಅಧ್ಯಕ್ಷೆ ಸಾವಿತ್ರಿ ಭಟ್ ಅಧ್ಯಕ್ಷತೆ ವಹಿಸಿದ್ದರು.ನಂತರ ಯಕ್ಷಗಾನ ರಂಗಭೂಮಿಯ ಅಗ್ರಮಾನ್ಯ ಕಲಾವಿದರಿಂದ ಕರ್ಣಪರ್ವ ತಾಳಮದ್ದಳೆ ನಡೆಯಿತು. ಎರಡನೆ ದಿನದ ಕಾರ್ಯಕ್ರಮದಲ್ಲಿ ಯಕ್ಷರಂಗೋತ್ಸವದ ಭಾಗವಾಗಿ ‘ಅರ್ಥಾಂತರಂಗ’ ಎಂಬ ಕಾರ್ಯಕ್ರಮ ನಡೆಯಿತು. ಖ್ಯಾತ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರ ಅಧ್ಯಕ್ಷತೆಯಲ್ಲಿ, ತಾಳಮದ್ದಳೆಯ ಕುರಿತು ಅಮೂಲಾಗ್ರವಾದ ಸಂಶೋಧನೆ ಕೈಗೊಂಡ ಹಿರಿಯ ಸಂಶೋಧಕಿ ಶಿರಸಿಯ ಡಾ. ವಿಜಯನಳಿನಿ ರಮೇಶ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಅರ್ಥಧಾರಿಗಳಾದ ರಾಧಾಕೃಷ್ಣ ಕಲ್ಚಾರ್ ಹಾಗೂ ವಾಸುದೇವ ರಂಗಾ ಭಟ್ ಅವರು ಭಾಗವಹಿಸಿ ವಿವಿಧ ತಂತ್ರಾಂಶಗಳ ಕುರಿತು ವಿಸ್ತಾರವಾದ ಚರ್ಚೆಯನ್ನು ಮಾಡಿದರು. ನಂತರ ಸಾಗರದ ಪುರಪ್ಪೆಮನೆಯ ಸಾಕೇತ ಕಲಾವಿದರಿಂದ ರಾಮನಿರ್ಯಾಣ ಎಂಬ ಆಟ ಪ್ರದರ್ಶನಗೊಂಡಿತು.
ಸಮಾರೋಪ: ಯಕ್ಷರಂಗೋತ್ಸವದ ಎರಡನೆ ದಿನ ಕೆಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಕಡತೋಕಾ ಶಿವಾನಂದ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಹಿರಿಯ ಯಕ್ಷಗಾನ ಸಾಧಕರಾದ ವಿರೂಪಾಕ್ಷ ಹೆಗಡೆ ಶೀಗೇಹಳ್ಳಿ ಹಾಗೂ ಕೆ.ಜಿ.ರಾ ಮರಾವ್ ಪುರಪ್ಪೆಮನೆ ಅವರನ್ನು ಸನ್ಮಾನಿಸಲಾಯಿತು. ಗಣ್ಯರಾದ ಪ್ರೊ. ಎಸ್. ಶಂಭು ಭಟ್, ಹವ್ಯಕ ಮಹಾಮಂಡಳದ ಅಧ್ಯಕ್ಷ ಮೋಹನ ಹೆಗಡೆ ಹೆರವಟ್ಟ, ಮೂರೂರಿನ ವಿದ್ಯಾನಿಕೇತನ ಪ್ರೌಢಶಾಲೆಯ ಕಾರ್ಯಾಧ್ಯಕ್ಷ ಆರ್.ಜಿ. ಭಟ್ ಕಲ್ಲಾರೆಮನೆ, ಕಡ್ಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೋವಿಂದ ಗೌಡ, ಆರ್.ಜಿ.ಪಿ.ಆರ್.ಎಸ್.ನ ಜಿಲ್ಲಾ ಸಂಚಾಲಕ ವಿನೋದ ನಾಯ್ಕ್ ಹಾಗೂ ವಿನಾಯಕ ಹೆಗಡೆ ಸಿ.ಎ. ಕೂಜಳ್ಳಿ ಉಪಸ್ಥಿತರಿದ್ದರು. ನಂತರ ತಾಳಮದ್ದಳೆ ಭೀಷ್ಮ ವಿಜಯ ನಡೆಯಿತು.