ಕನ್ನಡಪ್ರಭ ವಾರ್ತೆ ಮೂಲ್ಕಿ
ಮಂಗಳವಾರ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಥಮ ಜರ್ಜೆ ಕಾಲೇಜಿನ ಸಭಾಭವನದಲ್ಲಿ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಹಯೋಗದಲ್ಲಿ ಹಮ್ಮಿಕೊಂಡ 2 ದಿನಗಳ ಯಕ್ಷಗಾನ ತಾಳಮದ್ದಲೆ ಕಮ್ಮಟದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಕ್ಷಗಾನ ನಮ್ಮ ಮಣ್ಣಿನ ಕಲೆ. ಇದು ಅನ್ಯ ಕಲಾಪ್ರಕಾರಗಳ ಹಾಗೆ ಅಲ್ಲ. ಯಕ್ಷಗಾನ ಕೇವಲ ಮನೋರಂಜನೆಗಾಗಿ ಅಲ್ಲ. ಇದು ಸುಸಂಸ್ಕೃತ ಸಮಾಜವನ್ನು ಕಟ್ಟಿಕೊಡಬಲ್ಲ ಶಕ್ತಿ ಹೊಂದಿದೆ. ಯಕ್ಷಗಾನ ಕಲಿತ ಮಕ್ಕಳು ಗುರುಹಿರಿಯರಿಗೆ ಗೌರವ ಕೊಡುವುದು ಸೇರಿದಂತೆ ತಮ್ಮಲ್ಲಿ ನೈತಿಕ ಮೌಲ್ಯಗಳನ್ನು ಸಮಾಜದ ನೈಜ ಆಸ್ತಿಯಾಗಬಲ್ಲರು. ಹೀಗಾಗಿ ಯಕ್ಷಗಾನ ಅಕಾಡೆಮಿ ಮಕ್ಕಳ ಮೇಳಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ ಎಂದು ಅವರು ತಿಳಿಸಿದರು.ಹಿಂದೆ ಕಲೆಗಳಿಗೆ ರಾಜಾಶ್ರಯ ಸಿಕ್ಕಿದಂತೆ ಇಂದು ನಮ್ಮ ಶೃದ್ಧಾಕೇಂದ್ರಗಳಾಗಿರುವ ದೇವಳಗಳಿಂದ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರುವುದು ಸಂತೋಷದ ವಿಚಾರ. ಇಂದು ಕಟೀಲು ದೇವಳದಿಂದ 6 ಮೇಳಗಳು, ಮಂದಾರ್ತಿ ದೇವಳದಿಂದ 5 ಮೇಳಗಳು ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ 40ಕ್ಕೂ ಅಧಿಕ ಯಕ್ಷಗಾನ ಮೇಳಗಳಿಂದು ಕಾರ್ಯಾಚರಿಸುತ್ತಿವೆ. ಯಕ್ಷಗಾನ ಅಕಾಡೆಮಿ ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರಿಗೆ ನಿರಂತರ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.
ಅಕಾಡೆಮಿ ಸದಸ್ಯ ರಾಜೇಶ್ ಕುಳಾಯಿ, ಸಿವಿಲ್ ಎಂಜಿನಿಯರ್ ದೊಡ್ಡಯ್ಯ ಮೂಲ್ಯ, ಕಟೀಲು ಕೊಂಡೆಲ್ತಾಯ ದೇವಳದ ಮೊಕ್ತೇಸರ ಲೋಕಯ್ಯ ಸಾಲ್ಯಾನ್, ಕಾಲೇಜಿನ ಪ್ರಾಂಶುಪಾಲ ಡಾ.ವಿಜಯ, ಕಸಾಪ ಮುಲ್ಕಿ ತಾಲೂಕು ಅಧ್ಯಕ್ಷ ಮಿಥುನ್ ಉಡುಪ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಕೃತ ಅಧ್ಯಾಪಕ ಶ್ರೀವತ್ಸ ಎಸ್.ಆರ್. ನಿರೂಪಿಸಿದರು.