ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆ.ಸಿ.ನಾರಾಯಣಗೌಡರ ಅಭಿಮಾನಿ ಬಳಗದ ಮುಖಂಡರು, ಕಟ್ಟಹಳ್ಳಿ ಏತ ನೀರಾವರಿ ಯೋಜನೆ ಲೋಕಾರ್ಪಣೆ ಸಮಾರಂಭಕ್ಕೆ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರನ್ನು ಆಹ್ವಾನಿಸದಿರುವುದನ್ನು ಖಂಡಿಸಿದರು.
ಎರಡು ಅವಧಿಗೆ ಜೆಡಿಎಸ್ ಪಕ್ಷದ ಶಾಸಕರಾಗಿದ್ದರೂ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರದ ಅಭಿವೃದ್ಧಿಗೆ ನಯಾಪೈಸೆ ಅನುದಾನವನ್ನೂ ನೀಡಲಿಲ್ಲ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆ.ಸಿ.ನಾರಾಯಣಗೌಡರು ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುವ ಮುನ್ನ ಬಿ.ಎಸ್.ಯಡಿಯೂರಪ್ಪ ಬಳಿ ಮಾತುಕತೆ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಗ್ಯಾರಂಟಿ ಪಡೆದುಕೊಂಡಿದ್ದರು ಎಂದರು.ಇದರ ಪರಿಣಾಮವಾಗಿಯೇ 265 ಕೋಟಿ ರು. ಅಂದಾಜು ವೆಚ್ಚದ ಕಟ್ಟಹಳ್ಳಿ ಏತ ನೀರಾವರಿ ಯೋಜನೆ, 220 ಕೋಟಿ ರು. ವೆಚ್ಚದ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ, ಪಟ್ಟಣದಲ್ಲಿ ಹೈಟೆಕ್ ಒಳಾಂಗಣ ಕ್ರೀಡಾಂಗಣ, ಕೆರೆಗಳ ಅಭಿವೃದ್ಧಿ ಸೇರಿ ಹಲವು ಅಭಿವೃದ್ಧಿ ಕಾರ್ಯಗಳು ಚಾಲನೆಗೆ ಬಂದಿವೆ ಎಂದು ತಿಳಿಸಿದರು.
ಯೋಜನೆ ಯಶಸ್ವಿ ರೂವಾರಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರನ್ನು ಕಡೆಗಣಿಸಿರುವುದು ಸರಿಯಲ್ಲ. ಕ್ಷೇತ್ರದಲ್ಲಿ ಸೋತಿದ್ದರೂ ಅವರ ಕಾರ್ಯಕ್ರಮಗಳಿಗೆ ಸೋಲಿಲ್ಲ. ಅವು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲಿವೆ. ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಸಚಿವರನ್ನು ಆಹ್ವಾನಿಸುವ ಮೂಲಕ ಜಿಲ್ಲಾಡಳಿತ ಅವರಿಗೆ ಗೌರವ ಸೂಚಿಸಬೇಕು ಎಂದು ಮನವಿ ಮಾಡಿದರು.
ಸುದ್ಧಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಶೀಳನೆರೆ ಅಂಬರೀಶ್, ತಾಪಂ ಮಾಜಿ ಅಧ್ಯಕ್ಷ ಬೂಕನಕೆರೆ ಬಿ.ಜವರಾಯಿಗೌಡ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೇಶ್, ಪುರಸಭೆ ಸದಸ್ಯರಾದ ಕೆ.ಎಸ್.ಸಂತೋಷ್ ಕುಮಾರ್, ಕೆ.ಎಸ್.ಪ್ರಮೋದ್ ಕುಮಾರ್, ಮುಖಂಡರಾದ ಚಲುವರಾಜು, ಮಿತ್ರ ಗಿರೀಶ್, ಕೆ.ವಿನೋದ್ ಕುಮಾರ್, ಕೆಸಿಎನ್ ಆಪ್ತ ಸಹಾಯಕ ದಯಾನಂದ ಸೇರಿ ಹಲವರು ಇದ್ದರು.