ಕಾಪು: ಭೀಕರ ರಸ್ತೆ ಅಪಘಾತ, ಐವರು ಸಾವು

KannadaprabhaNewsNetwork |  
Published : Dec 01, 2025, 02:45 AM IST
30ಕಾಪು | Kannada Prabha

ಸಾರಾಂಶ

ರಾಹೆ 66ರ ಕೋತ್ತಲಕಟ್ಟೆ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಿನಿ ಟೆಂಪೋ ಪಲ್ಟಿಯಾಗಿ 5 ಮಂದಿ ಮೃತಪಟ್ಟು 7 ಮಂದಿ ತೀವ್ರ ಗಾಯಗೊಂಡ ಘಟನೆ ಭಾನುವಾರ ಘಟಿಸಿದೆ.

ಕಾಪು: ಇಲ್ಲಿನ ರಾಹೆ 66ರ ಕೋತ್ತಲಕಟ್ಟೆ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಿನಿ ಟೆಂಪೋ ಪಲ್ಟಿಯಾಗಿ 5 ಮಂದಿ ಮೃತಪಟ್ಟು 7 ಮಂದಿ ತೀವ್ರ ಗಾಯಗೊಂಡ ಘಟನೆ ಭಾನುವಾರ ಘಟಿಸಿದೆ. ಮೃತರು ಅಸ್ಸಾಂನ ಪಪ್ಪು ರವಿದಾಸ್ (28) ಮತ್ತು ಹರೀಶ್ (27), ತ್ರಿಪುರಾದ ಗಪೂನಾಥ್ (50), ಪಶ್ಚಿಮ ಬಂಗಾಳದ ಕಮಲ್ (30) ಮತ್ತು ಸಮರೇಶ್ (47) ಎಂದು ತಿಳಿದು ಬಂದಿದೆ. ಕಾಪುವಿನ ಪ್ರಸನ್ನ ಎಂಬವರ ಮಾಲಕತ್ವದ ಈವೆಂಟ್ ಮ್ಯಾಮೇಜ್‌ಮೆಂಟ್ ಸಂಸ್ಥೆಯ ಈ ಟೆಂಪು ಕಾಪುವಿನಿಂದ ಮಲ್ಪೆಗೆ ತೆರಳುತ್ತಿದ್ದಾಗ ಬಿಕ್ಕೊ ಕಂಪನಿಯ ಮುಂಭಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ಅಲ್ಲಿಂದ ಸರ್ವಿಸ್ ರಸ್ತೆಗೆ ಮುಗುಚಿ ಬಿದ್ದಿದೆ. ಇದರ ಪರಿಣಾಮ ಟೆಂಪೋದಲ್ಲಿದ್ದ ಎಲ್ಲರೂ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದಾರೆ.

ಗಾಯಾಳುಗಳ ಪೈಕಿ ಇಬ್ಬರು ಘಟನಾ ಸ್ಥಳದಲ್ಲಿಯೇ ಉಳಿದ ಮೂವರು ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ. ಕೋತ್ತಲಕಟ್ಟೆ ನಿವಾಸಿ ಚಾಲಕ ರಂಜಿತ್ ಪೂಜಾರಿ ಹಾಗೂ ಮತ್ತು ಇನ್ನಿಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ. ಉಳಿದ ಐವರು ಸಣ್ಣ ಪುಟ್ಟ ಗಾಯಗೊಂಡು ಚಿಕಿತ್ಸೆಯಲ್ಲಿದ್ದಾರೆ.

ಉಡುಪಿ ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯರು ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಆಸ್ಪತ್ರೆ ಸಾಗಿಸುವಲ್ಲಿ ಸಹಕರಿಸಿದ್ದಾರೆ. ಆಸ್ಪತ್ರೆಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಭೇಟಿ ಗಾಯಾಳುಗಳ ಸಂಬಂಧಿಕರಿಗೆ ಸಾಂತ್ವನ ಹೇಳಿದ್ದಾರೆ. ಕಾಪು ವೃತ್ತ ನಿರೀಕ್ಷಕ ಅಜ್ಜತ್ ಅಲಿ, ಕಾಪು ಎಸೈ ತೇಜಸ್ವಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ