ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಆಮಂತ್ರಣ ಪತ್ರಿಕೆ ವಿತರಣೆ ಸಭೆ

KannadaprabhaNewsNetwork |  
Published : Feb 14, 2025, 12:32 AM IST
32 | Kannada Prabha

ಸಾರಾಂಶ

ಕಾಪು ಸಾವಿರ ಸೀಮೆಯ ಒಡತಿ ಶ್ರೀ ಮಾರಿಯಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಿಂದ ಹೊರೆಕಾಣಿಕೆ ಸಮರ್ಪಣೆ ಹಾಗೂ ಆಮಂತ್ರಣ ಪತ್ರಿಕೆ ವಿತರಣೆಗೆ ಸಂಬಂಧಿಸಿ ತಾಲೂಕು ಸಮಿತಿಯ ಪ್ರಮುಖರ ಸಮಾಲೋಚನಾ ಸಭೆ ಗುರುವಾರ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಕಚೇರಿಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಉಚ್ಚಂಗೀ ಸಹಿತ ಕಾಪು ಸಾವಿರ ಸೀಮೆಯ ಒಡತಿ ಶ್ರೀ ಮಾರಿಯಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಿಂದ ಹೊರೆಕಾಣಿಕೆ ಸಮರ್ಪಣೆ ಹಾಗೂ ಆಮಂತ್ರಣ ಪತ್ರಿಕೆ ವಿತರಣೆಗೆ ಸಂಬಂಧಿಸಿ ತಾಲೂಕು ಸಮಿತಿಯ ಪ್ರಮುಖರ ಸಮಾಲೋಚನಾ ಸಭೆ ಗುರುವಾರ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಕಚೇರಿಯಲ್ಲಿ ನಡೆಯಿತು.

ಬ್ರಹ್ಮಕಲಶೋತ್ಸವದ ದ.ಕ.ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಚಂದ್ರಹಾಸ ಡಿ.ಶೆಟ್ಟಿ ಮಾತನಾಡಿ, ಬ್ರಹ್ಮಕಲಶದ ಹಿನ್ನೆಲೆ ನಡೆದ ನವದುರ್ಗಾ ಲೇಖನ ಯಜ್ಞದಲ್ಲಿ ಜಿಲ್ಲೆಯಿಂದ 9,999 ಮಂದಿ ಪಾಲ್ಗೊಂಡಿದ್ದು, ಬಂಟ್ವಾಳದಿಂದ 1200 ಮಂದಿ ಪಾಲ್ಗೊಂಡಿದ್ದಾರೆ. ಸುಮಾರು 99 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಕಾಪು ಕ್ಷೇತ್ರವು ದಕ್ಷಿಣ ಭಾರತದಲ್ಲೇ ವಿಶೇಷವಾಗಿದೆ. 20 ಕೆ.ಜಿ. ಬಂಗಾರದ ಸ್ವರ್ಣ ಗದ್ದುಗೆಗೆ ಕೇವಲ 2 ತಿಂಗಳಲ್ಲಿ ಭಕ್ತರು ಬಂಗಾರ ಸಮರ್ಪಣೆ ಮಾಡಿದ್ದು, 150 ಕೆಜಿ ಬೆಳ್ಳಿಯ ರಥ, ಅಯೋಧ್ಯೆಯ ಬಳಿಕ 2ನೇ ಅತಿ ದೊಡ್ಡ ಗಂಟೆಯ 40 ಲಕ್ಷ ರೂ.ವೆಚ್ಚದಲ್ಲಿ ಸಿದ್ಧಗೊಂಡಿದ್ದು, ಅದನ್ನು ಒಮ್ಮೆ ಬಾರಿಸಿದರೆ 5 ಕಿ.ಮೀ.ಕಂಪನಗೊಳ್ಳುತ್ತದೆ. ಹೀಗೆ ಹಲವು ವಿಶೇಷತೆಗಳಿರುವ ಕ್ಷೇತ್ರದ ಬ್ರಹ್ಮಕಲಶ 9 ದಿನಗಳ ಕಾಲ ನಡೆಯಲಿದ್ದು, ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವ ನಿಟ್ಟಿನಲ್ಲಿ ತಾಲೂಕು ಸಮಿತಿಯವರು ಪ್ರಯತ್ನಿಸಬೇಕಿದೆ ಎಂದರು.

ಫೆ. 22ರಂದು ದಕ್ಷಿಣ ವಾಹಿನಿ ಹೆಸರಿನಲ್ಲಿ ದ.ಕ. ಜಿಲ್ಲೆಯಿಂದ ಹೊರೆಕಾಣಿಕೆ ಸಮರ್ಪಣೆಗೊಳ್ಳಲಿದ್ದು, ಬಂಟ್ವಾಳದ ಪ್ರತಿ ಭಾಗದಿಂದಲೂ ಹೊರೆಕಾಣಿಕೆ ಸಮರ್ಪಣೆಯಾಗಬೇಕಿದೆ. ತಾಲೂಕಿನ ಪ್ರಮುಖರು ಪ್ರತಿಯೊಂದು ಧಾರ್ಮಿಕ ಕ್ಷೇತ್ರದ ಜತೆಗೆ ಭಕ್ತರಲ್ಲಿ ವಿನಂತಿಸಬೇಕಿದ್ದು, ಮೊದಲೇ ಸಮರ್ಪಣೆ ಮಾಡುವವರು ಬಿ.ಸಿ.ರೋಡಿನ ಹೊಟೇಲ್‌ ರಂಗೋಲಿ ಕಚೇರಿಯಲ್ಲಿ ನೀಡಬಹುದಾಗಿದೆ. ಅಕ್ಕಿ ಸಮರ್ಪಣೆ ಮಾಡುವವರು ಸ್ವಸ್ತಿಕ್ ಬ್ರಾಂಡ್‌ಗೆ ಆದ್ಯತೆ ನೀಡಬೇಕಿದ್ದು, ಇಲ್ಲದೇ ಇದ್ದರೆ ಡಾಲರ್, ಟೈಗರ್ ಬ್ರಾಂಡ್ ನೀಡಬಹುದು. ಜತೆಗೆ ಬ್ರಹ್ಮಕಲಶದ ಸೇವಾ ಕಾರ್ಯದಲ್ಲೂ ಭಾಗವಹಿಸಲು ಅವಕಾಶವಿದೆ ಎಂದರು.

ಬಂಟ್ವಾಳ ತಾಲೂಕು ಸಂಚಾಲಕ ತೇವು ತಾರಾನಾಥ ಕೊಟ್ಟಾರಿ ಆಮಂತ್ರಣ ಹಂಚಿಕೆಯ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಸಮಿತಿ ಪ್ರಮುಖರಾದ ಗಣೇಶ್ ಸುವರ್ಣ, ಕರುಣೇಂದ್ರ ಪೂಜಾರಿ, ಉಮೇಶ್ ಸಾಲ್ಯಾನ್ ಬೆಂಜನಪದವು, ಸೀತಾರಾಮ ಶೆಟ್ಟಿ, ಶಂಕರ ಶೆಟ್ಟಿ, ಸತೀಶ್ ಶೆಟ್ಟಿ ಮೊಡಂಕಾಪು, ಭಾರತಿ ಚೌಟ, ಪುಷ್ಪರಾಜ್ ಶೆಟ್ಟಿ, ವಸಂತಿ ಎಲ್.ಶೆಟ್ಟಿ, ಹರೀಶ್ ಪೆದಮಲೆ, ಜಗನ್ನಾಥ ರೈ ಮೇರಾವು, ನವೀನ್ ಕೊಡ್ಮಾಣ್, ಮಣಿಮಾಲಾ ಶೆಟ್ಟಿ, ಉಮಾ ಚಂದ್ರಶೇಖರ ತುಂಬೆ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ