ಕಾವೇರಿ ನದಿ ಐತಿಹಾಸಿಕ ಪ್ರಮಾದಗಳನ್ನು ಈಗ ಸರಿಪಡಿಸಲು ಸಾಧ್ಯವಿಲ್ಲ: ಪ್ರೊ.ವಿ.ಕೆ. ನಟರಾಜ್

KannadaprabhaNewsNetwork | Updated : May 27 2024, 12:44 PM IST

ಸಾರಾಂಶ

ಸಿ.ಚಂದ್ರಶೇಖರ್ ಅವರು ತಮ್ಮ ಕೃತಿಯಲ್ಲಿ ಕಾವೇರಿ ವಿವಾದವನ್ನು ಅಧಿಕೃತ ದಾಖಲೆಗಳಿಂದ ರಚಿಸಿದ್ದಾರೆ. ಆದರೆ, ಇತಿಹಾಸದ ತಪ್ಪುಗಳನ್ನು ತಿದ್ದುವವರು ಯಾರು? ತಪ್ಪಿಗೆ ಯಾರು ಕ್ಷಮೆ ಕೇಳಬೇಕು? ಮುಂದೆ ಏನು ಪ್ರಶ್ನೆ ಬರುತ್ತದೆ. ಆ ಬಗ್ಗೆ ಆಲೋಚಿಸುವುದು ಮುಖ್ಯವಾಗುತ್ತದೆ. 

 ಮೈಸೂರು :  ಕಾವೇರಿ ನದಿ ವಿಚಾರದಲ್ಲಿ ಆಗಿರುವಂತಹ ಐತಿಹಾಸಿಕ ಪ್ರಮಾದಗಳನ್ನು ಈಗ ಸರಿಪಡಿಸಲು ಸಾಧ್ಯವಿಲ್ಲ ಎಂದು ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಮದರಾಸು ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ.ವಿ.ಕೆ. ನಟರಾಜ್ ತಿಳಿಸಿದರು.

ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಅಭಿರುಚಿ ಪ್ರಕಾಶನವು ಭಾನುವಾರ ಆಯೋಜಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಸಿ. ಚಂದ್ರಶೇಖರ್ ಅವರ ಕಾವೇರಿ ವಿವಾದ- ಒಂದು ಐತಿಹಾಸಿಕ ಹಿನ್ನೋಟ ಪುಸ್ತಕವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಕಾವೇರಿ ವಿವಾದದ ಸಮಸ್ಯೆಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರು ಸರಿಪಡಿಸಲಾಗದು. ಎರಡು ರಾಜ್ಯಗಳ ರೈತರು ಕುಳಿತು ಚರ್ಚಿಸುವುದು ಅಗತ್ಯ. ಕಾವೇರಿ ನೀರು ವ್ಯರ್ಥವಾಗದಂತೆ ಬಳಕೆ ಪರಿಸರ ಸಂರಕ್ಷಣೆಗೆ ಆದ್ಯತೆ ಕೊಡುವುದು ಜರೂರು. ಎರಡೂ ರಾಜ್ಯಗಳ ಜನರು ಕಾವೇರಿ ನದಿ ನೀರು ವ್ಯರ್ಥವಾಗುವುದನ್ನು ತಪ್ಪಿಸಿ, ಪ್ರತಿ ಹನಿ ನೀರು ಬಳಕೆಗೆ ಗಮನಹರಿಸುವುದು ವಿವೇಕ ಎಂದು ಅವರು ಸಲಹೆ ನೀಡಿದರು.

ಸಿ.ಚಂದ್ರಶೇಖರ್ ಅವರು ತಮ್ಮ ಕೃತಿಯಲ್ಲಿ ಕಾವೇರಿ ವಿವಾದವನ್ನು ಅಧಿಕೃತ ದಾಖಲೆಗಳಿಂದ ರಚಿಸಿದ್ದಾರೆ. ಆದರೆ, ಇತಿಹಾಸದ ತಪ್ಪುಗಳನ್ನು ತಿದ್ದುವವರು ಯಾರು? ತಪ್ಪಿಗೆ ಯಾರು ಕ್ಷಮೆ ಕೇಳಬೇಕು? ಮುಂದೆ ಏನು ಪ್ರಶ್ನೆ ಬರುತ್ತದೆ. ಆ ಬಗ್ಗೆ ಆಲೋಚಿಸುವುದು ಮುಖ್ಯವಾಗುತ್ತದೆ. ಮೈಸೂರು- ಮದ್ರಾಸ್ವಿವಾದ ಅನೇಕ ಪದರಗಳಲ್ಲಿದೆ. ತಾಂತ್ರಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಸಮಸ್ಯೆಗಳಿವೆ. ಲೇಖಕರೂ ರಾಜಕೀಯ ನೆಲೆಯಿಂದಲೂ ನೋಡಬಹುದಾಗಿತ್ತು. ಕಾವೇರಿ ಕುಟುಂಬದ ಬಗ್ಗೆ ಇನ್ನೂ ಸ್ವಲ್ಪ ಚರ್ಚೆ ಮಾಡಬಹುದಿತ್ತು ಎಂದು ಅವರು ಹೇಳಿದರು.

ಹಿಂದಿನಿಂದಲೂ ಕರ್ನಾಟಕಕ್ಕೆ ಅನ್ಯಾಯ:

ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಕಾವೇರಿ ಎರಡು ರಾಜ್ಯಗಳಲ್ಲಿ ಹರಿಯದೇ ಕರ್ನಾಟಕದಲ್ಲಿಯೇ ಹರಿದಿದ್ದರೆ ಜಿಲ್ಲೆಗಳ ನಡುವೆ ಕಿತ್ತಾಟ ಇರುತ್ತಿತ್ತು. ಪ್ರಕೃತಿಗೆ ಗಡಿರೇಖೆಗಳಿಲ್ಲ. ಮನುಷ್ಯ ಅಹಂಕಾರಕ್ಕೆ ಗಡಿರೇಖೆ ಇರುತ್ತೆ. ವಿವಾದಗಳು ನಮ್ಮ ಅನುಕೂಲಕ್ಕಾಗಿ ಮತ್ತು ಅಹಂಕಾರಕ್ಕಾಗಿ ಸೃಷ್ಟಿಯಾದವು. ಸರಿಯಾಗಿ ನೀರು ಹಂಚಿಕೊಳ್ಳದ ವಿವಾದ ಮಾಡಿಕೊಂಡಿದ್ದೇವೆ ಎಂದರು.

ನದಿ ನೀರು ಹಂಚಿಕೆಯಲ್ಲಿ ಹಿಂದಿನಿಂದಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕೇಂದ್ರದ ನಾಯಕತ್ವ ತಮಿಳುನಾಡು ಕೆರಳುವುದನ್ನು ತಡೆಯಲು ಮತ್ತು ಕರ್ನಾಟಕವನ್ನು ಹ್ಯಾಂಡಲ್ ಮಾಡಬಹುದು ಎಂಬ ಮನಸ್ಥಿತಿಯಿಂದ ಅನ್ಯಾಯವಾಗುತ್ತಲೇ ಇದೆ. ಬ್ರಿಟಿಷರು ಮತ್ತು ಭಾರತದ ಆಡಳಿತಗಾರರ ಸಾಮ್ರಾಜ್ಯಶಾಹಿ ಮನಸ್ಥಿತಿ ಕರ್ನಾಟಕದ ಮೇಲೆ ದಬ್ಬಾಳಿಕೆ ಮಾಡುತ್ತ ಬಂದಿದೆ ಎಂದರು.

ಮುಂಬರುವ ದಿನಗಳಲ್ಲಿ ಹೋರಾಟಗಳ ಕಷ್ಟ. ಏಕೆಂದರೆ ಈಗ ಬಹುತೇಕ ಸಾರ್ವಜನಿಕರು ಪಕ್ಷದ ಕಾರ್ಯಕರ್ತರಾಗಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಹೋರಾಟಗಳಿಗೆ ಜನ ಸಿಗದಿರುವ ದಿನ ಬರಬಹುದು. ಒಂದು ಪಕ್ಷದ ಕಾರ್ಯಕರ್ತರಾದವರು ಹೈಕಮಾಂಡ್ಆದೇಶವನ್ನು ಮಾತ್ರ ಚರ್ಚಿಸುತ್ತಾರೆ ಎಂದರು.

ಕಾವೇರಿ ನದಿ ನೀರು ಹಂಚಿಕೆ ಕುರಿತಾಗಿ ಟ್ರಿಬ್ಯುನಲ್ಲೆಕ್ಕಚಾರಗಳು ಉಳಿಯುವುದಿಲ್ಲ. ಈಗ ನೀರನ್ನು ವಿವೇಕದಿಂದ ಬಳಸುವ ಹೊಸ ಪದ್ಧತಿ ಆರಂಭವಾಗಬೇಕಿದೆ. ಶಕ್ತಿ ತೋರಿಸಿ ನೀರು ಕಿತ್ತುಕೊಂಡೆ ಎಂಬ ಅಹಂಕಾರವನ್ನು ಬಿಟ್ಟು ತೀರ್ಮಾನಕ್ಕೆ ಬರಬೇಕಿದೆ ಎಂದರು.

ಬರಹಗಾರ ಪ್ರೊ.ಪಿ.ವಿ. ನಂಜರಾಜ ಅರಸ್, ಲೇಖಕ ಸಿ.ಚಂದ್ರಶೇಖರ್, ಜೆ.ಬಿ.ರಂಗಸ್ವಾಮಿ, ಪ್ರಕಾಶಕ ಅಭಿರುಚಿ ಗಣೇಶ್‌ ಇತರರು ಇದ್ದರು.

ಕಾವೇರಿ ವಿವಾದ ಜೀವಂತವಾಗಿಟ್ಟರೆ ತಮಿಳುನಾಡು ಸರ್ಕಾರಕ್ಕೆ ಬಲ. ಆದರೆ, ನೀರು ನಮ್ಮ ಬದುಕಿನ ಪ್ರಶ್ನೆ. ಒಂದು ದೇಶದ ಜನರಾದ ತಮಿಳುನಾಡು ಮತ್ತು ಕರ್ನಾಟಕದ ಜನತೆ ಒಟ್ಟಾಗಿ ಕೂತು ಚರ್ಚಿಸಬೇಕು. ಕಾವೇರಿ ಕುರಿತು ಅಧ್ಯಯನ ಮಾಡುವವರಿಗೆ ಚಂದ್ರಶೇಖರ್‌ ಅವರ ಕಾವೇರಿ ವಿವಾದ ಕೃತಿಯೂ ಪರಾಮರ್ಶನ ಗ್ರಂಥವಾಗಿದೆ.

- ಪ್ರೊ.ಎಂ.ಕೃಷ್ಣೇಗೌಡ, ವಾಗ್ಮಿ

Share this article