ಕವಿರಾಜಮಾರ್ಗ ಕನ್ನಡ ಸಾಹಿತ್ಯಕ್ಕೆ ಬುನಾದಿ:ಬರಗೂರು

KannadaprabhaNewsNetwork |  
Published : Dec 19, 2023, 01:45 AM IST
ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ ವಿವಿಯ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಆಯೋಜಿಸಿದ್ದ ‘ಶ್ರೀ ವಿಜಯ ವಿರಚಿತ ಕವಿರಾಜಮಾರ್ಗ-125’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಸೋಮವಾರ ಉದ್ಘಾಟಿಸಿದರು.ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಡಾ.ಪ್ರಕಾಶ್ ಎಂ.ಶೇಟ್, ಡಾ.ವೆಂಕಟರೆಡ್ಡಿ ರಾಮರೆಡ್ಡಿ, ಡಾ.ನಾಗಭೂಷಣ ಬಗ್ಗನಡುಇದ್ದಾರೆ. | Kannada Prabha

ಸಾರಾಂಶ

ಕವಿರಾಜಮಾರ್ಗವು ಹಳೆಗನ್ನಡದ ಮೆರುಗನ್ನು ವ್ಯಕ್ತಪಡಿಸುವ ಏಕೈಕ ಕೃತಿಯಾಗಿದೆ ಎಂದು ಹಿರಿಯ ಸಾಹಿತಿ, ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.

‘ಶ್ರೀ ವಿಜಯ ವಿರಚಿತ ಕವಿರಾಜಮಾರ್ಗ-125’ ರಾಷ್ಟ್ರೀಯ ವಿಚಾರ ಸಂಕಿರಣ । ಸಾಹಿತಿ, ಪ್ರೊ. ಬರಗೂರು ರಾಮಚಂದ್ರಪ್ಪ ಉದ್ಘಾಟನೆ

ಕನ್ನಡಪ್ರಭ ವಾರ್ತೆ ತುಮಕೂರು

26 ವರ್ಷಗಳ ಹಿಂದೆ ಕೆ.ಬಿ. ಪಾಠಕ್‌ ಅವರು ಕ್ರಮವಾಗಿ ಸಂಪಾದಿಸಿ, ಪರಿಷ್ಕರಿಸಿ ಹೊರತಂದ ಶ್ರೇಷ್ಠ ಮೀಮಾಂಸೆ ಕವಿರಾಜ ಮಾರ್ಗವು ಕನ್ನಡ ಸಾಹಿತ್ಯ ನೆಲೆಯನ್ನು ಕಟ್ಟಿಕೊಡುವ ಕೆಲಸವನ್ನು ಈಗಲೂ ಮಾಡುತ್ತಿದೆ ಎಂದು ಹಿರಿಯ ಸಾಹಿತಿ, ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.

ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗವು ವಿವಿಯ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಆಯೋಜಿಸಿದ್ದ ‘ಶ್ರೀ ವಿಜಯ ವಿರಚಿತ ಕವಿರಾಜಮಾರ್ಗ-125’ ರಾಷ್ಟ್ರೀಯ ವಿಚಾರ ಸಂಕೀರಣವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಂಥ ಸಂಪಾದನೆ ಎನ್ನುವುದು ಯಾವುದೇ ಪ್ರಕಾರದ ಸಾಹಿತ್ಯ ನೆಲೆಯನ್ನು ಕಟ್ಟಿಕೊಡುವ ಕೆಲಸವಾಗಬೇಕು. ಕವಿರಾಜಮಾರ್ಗ ಕನ್ನಡ ಕಟ್ಟುವ, ಸಂಸ್ಕೃತದ ನೆಲೆಯಿಂದ ತನ್ನನ್ನು ವಿಭಜಿಸಿಕೊಂಡು, ಸಾಮಾಜಿಕ ಬಲಾಢ್ಯತೆಯಿಂದ ಹಳೆಗನ್ನಡದ ಓದನ್ನು ಕುಗ್ಗಿಸದೆ, ಪರಧರ್ಮ ಸಹಿಷ್ಣುತೆ, ಸಾಮಾಜಿಕ ಪರಂಪರೆಯನ್ನು ಸಾರುವ ಜನ ಸಾಮಾನ್ಯರ ಕೃತಿಯಾಗಿ, ತಾತ್ವಿಕ ಬೀಜ ಬಿತ್ತುವುದರ ಮೂಲಕ ಇಂದಿಗೂ ತನ್ನ ಸತ್ವಪ್ರಶಂಸೆಯನ್ನು ಸಾರುತ್ತಿದೆ ಎಂದು ತಿಳಿಸಿದರು.

ಕವಿರಾಜಮಾರ್ಗವು ಕಾವ್ಯಾಲಂಕಾರವೂ ಹೌದು, ಲಾಕ್ಷಣಿಕ ಗ್ರಂಥವೂ ಹೌದು. ನಿರ್ವಚನಗೊಳಿಸುವ ಕೃತಿ ಎಂದೇ ಹೇಳಬಹುದು. ಚಾರಿತ್ರಿಕ ಮಹತ್ವ, ಸಮಕಾಲೀನ ದೃಷ್ಟಿಯಿಂದ ನೋಡಿದಾಗ ಸಾಹಿತ್ಯ ಕೃತಿಗೆ, ಕಾವ್ಯಕ್ಕೆ ಇರಬೇಕಾದ ಎಲ್ಲ ಅಂಶಗಳನ್ನು ಸಾರುವ, ಹಳೆಗನ್ನಡದ ಮೆರುಗನ್ನು ವ್ಯಕ್ತಪಡಿಸುವ ಏಕೈಕ ಕೃತಿಯಾಗಿದೆ. ಭಾಷಿಕ, ಧಾರ್ಮಿಕ, ಸಾಮಾಜಿಕ ವಿಮೋಚನೆಯ ಹೊಸ ಹಾದಿ ತೆರೆದ ಕೃತಿಯಾಗಿದೆ ಎಂದರು.

ಕನ್ನಡದ ಜಾಯಮಾನಕ್ಕೆ ಹೊಂದಿಕೊಳ್ಳುವ ಸಂಸ್ಕೃತ ಪದಗಳನ್ನು ಬಳಸಬಹುದು. ಭಾಷಾ ಸೌಂದರ್ಯವನ್ನು ಹೆಚ್ಚಿಸಲು ಪದ ಬಳಕೆ ಸಹಜ ಹೊಂದಾಣಿಕೆಯಾದಾಗ ಇತರೆ ಭಾಷಾ ಪದಗಳನ್ನು ಅಳವಡಿಸಿಕೊಂಡಾಗ ಆಧುನಿಕ ವಿವೇಕ ಹೊಂದಿ, ಭಾಷೆಯ, ಸಮಾಜದ ಮೇಲಿನ ಗೌರವ ಬಹುತ್ವರೂಪು ಪಡೆದು ಬಹುತ್ವದ ಪರಿಕಲ್ಪನೆ ನೆಲೆಗೊಳ್ಳುತ್ತದೆ. ಆಗ ಭಾಷೆಯು ಸಾಮಾಜಿಕ ಉತ್ಪನ್ನದ ಪ್ರಾದೇಶಿಕ, ಸಾಂಸ್ಕೃತಿಕ ಕುರಿತು ಮಾತನಾಡುತ್ತದೆ ಎಂದು ಹೇಳಿದರು.

ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ವಿಶ್ವವಿದ್ಯಾನಿಲಯಗಳ ಬಲವನ್ನು ನಿರೂಪಿಸಲು ಸಾಧ್ಯವಾಗುವುದು ಕನ್ನಡ ವಿಭಾಗದ ಮಹತ್ವದಿಂದ. ಕನ್ನಡ ವಿಭಾಗಗಳು ಪ್ರಾದೇಶಿಕತೆಯನ್ನು ಕಟ್ಟುವ, ಸಾರುವ ಪ್ರತಿನಿಧಿಗಳಾಗಬೇಕು ಎಂದರು.

ಕವಿರಾಜಮಾರ್ಗ ಕುರಿತು ವಿವಿಧ ಗೋಷ್ಠಿಗಳು ನಡೆದವು. ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ.ಶೇಟ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೆಂಕಟರೆಡ್ಡಿ ರಾಮರೆಡ್ಡಿ, ರಾಷ್ಟ್ರೀಯ ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ನಾಗಭೂಷಣ ಬಗ್ಗನಾಡು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ