ಕೆಡಿಸಿಸಿ ಬ್ಯಾಂಕ್ ಗೆ 16.70 ಕೋಟಿ ರು. ಲಾಭ

KannadaprabhaNewsNetwork |  
Published : Sep 06, 2025, 01:01 AM IST
ಚಿತ್ರ : 5ಎಂಡಿಕೆ6 : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ  ಕೊಡಂದೇರ ಪಿ.ಗಣಪತಿ ಮಾತನಾಡಿದರು.  | Kannada Prabha

ಸಾರಾಂಶ

ಕೊಡಗು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 100ನೇ ವಾರ್ಷಿಕ ಮಹಾಸಭೆ ಮಡಿಕೇರಿಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 2024-25ನೇ ಸಾಲಿನ 100ನೇ ವಾರ್ಷಿಕ ಮಹಾಸಭೆಯು ಮಡಿಕೇರಿಯಲ್ಲಿರುವ ಕೇಂದ್ರ ಕಚೇರಿಯ “ಉನ್ನತಿ ಭವನ”ದ ದಿ:ಪಂದ್ಯಂಡ.ಐ.ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಲಾಭದಲ್ಲಿ ಮುಂದುವರೆಯುತ್ತಿರುವ ಬ್ಯಾಂಕ್ 2025ರ ಮಾರ್ಚ್ ಅಂತ್ಯಕ್ಕೆ 16.70 ಕೋಟಿ ರು. ಲಾಭ ಗಳಿಸಿರುವುದಾಗಿ ತಿಳಿಸಿದ ಅಧ್ಯಕ್ಷರಾದ ಗಣಪತಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಆರ್.ಬಿ.ಐ. ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕಿನಿಂದ ನೀಡಲ್ಪಡುವ ಆರ್ಥಿಕ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದು, ಇಂದು ರಾಜ್ಯದಲ್ಲಿರುವ ಜಿಲ್ಲಾ ಸಹಕಾರ ಬ್ಯಾಂಕಿಗಳ ಪೈಕಿ 3ನೇ ಪ್ರಮುಖ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಎಂದು ಗುರುತಿಸಲ್ಪಟ್ಟಿದೆ ಎಂದು ಹೇಳಿದರು.

ತೃತೀಯ ಬಹುಮಾನ:

2024-25ನೇ ಸಾಲಿನ ಲೀಡ್ ಬ್ಯಾಂಕ್ ತ್ರೈಮಾಸಿಕ ಸಭೆಯ ವರದಿಯಂತೆ ಜಿಲ್ಲೆಯಲ್ಲಿನ ವಿವಿಧ 23 ಖಾಸಗಿ ಹಾಗೂ ವಾಣಿಜ್ಯ ಬ್ಯಾಂಕುಗಳಿಗೆ ಹೋಲಿಸಿದಲ್ಲಿ ಪೈಪೋಟಿ ನಡೆಸಿ ಠೇವಣಾತಿ ಸಂಗ್ರಹಣೆಯಲ್ಲಿ ಶೇ. 27.12ರಷ್ಟು ಪಾಲು ಪ್ರಥಮ ಸ್ಥಾನ ಹಾಗೂ ಸಾಲ ನೀಡುವಿಕೆಯಲ್ಲಿ ಶೇ. 24.62 ರಷ್ಟು ಪಾಲಿನೊಂದಿಗೆ ಬ್ಯಾಂಕು ದ್ವಿತೀಯ ಸ್ಥಾನ ಹೊಂದಿದ್ದು, ಜಿಲ್ಲೆಯ ಆದ್ಯತಾ ವಲಯದ ಸಾಲ ನೀಡುವಿಕೆಯಲ್ಲಿ ಶೇ.22.20 ರಷ್ಟು ಪಾಲು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಾಧನೆಯಾಗಿದ್ದು, 2024-25ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಇದೇ ಮೊದಲ ಬಾರಿಗೆ 96 ರಷ್ಟು ಅಂಕ ಪಡೆದು. ಬ್ಯಾಂಕು ಕಳೆದ ಹಲವು ವರ್ಷಗಳಿಂದ ಆಡಿಟ್‌ನಲ್ಲಿ “ಎ” ವರ್ಗೀಕರಣ ಇರುತ್ತದೆ. ಇದು ಬ್ಯಾಂಕಿನ ಆಂತರಿಕ ನಿಯಂತ್ರಣ ವ್ಯವಸ್ಥೆಗೆ ಮಾದರಿಯಾಗಿರುತ್ತದೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನಿಂದ, 2023-24 ನೇ ಸಾಲಿಗೆ ಅತ್ಯುತ್ತಮ ಕಾರ್ಯ ನಿರ್ವಹಣೆಗೆ ಡಿಸಿಸಿ ಬ್ಯಾಂಕಿಗೆ ಆ. 13 ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ತೃತೀಯ ಬಹುಮಾನ ದೊರತಿದೆ ಎಂದೂ ಗಣಪತಿ ಮಹಾಸಭೆಗೆ ಮಾಹಿತಿ ನೀಡಿದರು.

35.91 ಕೋಟಿ ರು. ಷೇರು ಬಂಡವಾಳ ಸಂಗ್ರಹ

ಒಟ್ಟು 289 ಸಹಕಾರ ಸಂಘಗಳು ಬ್ಯಾಂಕಿನ ಸದಸ್ಯತ್ವವನ್ನು ಪಡೆದಿದ್ದು, ಎ, ಬಿ, ಸಿ ವರ್ಗದ ಸದಸ್ಯರಿಂದ ಒಟ್ಟು 35.91 ಕೋಟಿ ರು. ಷೇರು ಬಂಡವಾಳ ಸಂಗ್ರಹಿಸಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ 4.45 ಕೋಟಿ ರು. ಪಾಲು ಬಂಡವಾಳದಲ್ಲಿ ಹೆಚ್ಚಳವಾಗಿರುತ್ತದೆ ಎಂದು ತಿಳಿಸಿದ ಪಿ. ಗಣಪತಿ, ಷೇರು ಬಂಡವಾಳ, ಶಾಸನಬದ್ಧ ಮೀಸಲು ನಿಧಿಗಳು ಹಾಗೂ ಬಟವಾಡೆಯಾಗದ ಲಾಭಾಂಶದ ಮೊತ್ತವನ್ನು ಒಳಗೊಂಡಂತೆ ಒಟ್ಟು 137.59 ಕೋಟಿ ರು. ಮೊತ್ತದ ಸ್ವಂತ ಬಂಡವಾಳವನ್ನು ಹೊಂದಿದ್ದು, ಬ್ಯಾಂಕಿನ ನೆಟ್‌ವರ್ತ್ ಪ್ರಮಾಣ 139.91 ಕೋಟಿ ರು. ಇದ್ದು 2024-25ನೇ ಸಾಲಿನಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರವು 3372.12 ಕೋಟಿ ರು. ಯಾಗಿದ್ದು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿರುತ್ತದೆ ಎಂದು ಅವರು ಹೆಮ್ಮೆಯಿಂದ ತಿಳಿಸಿದರು.

ಹೆಚ್ಚು ಲಾಭ ಗಳಿಸುವುದರೊಂದಿಗೆ ಸಹಕಾರ ಸಂಘಗಳಿಗೆ ಶೇ.13 ಡಿವಿಡೆಂಡ್ ಘೋಷಿಸಿದ್ದು ರಾಜ್ಯದಲ್ಲೇ ಅತೀ ಹೆಚ್ಚು ಡಿವಿಡೆಂಡ್ ನೀಡುತ್ತಿರುವ ಬ್ಯಾಂಕು ಆಗಿದೆ ಎಂದೂ ಅವರು ಹೇಳಿದರು. ಮಹಾ ಸಭೆಯಲ್ಲಿ 239 ಸಹಕಾರ ಸಂಘಗಳ ಅಧ್ಯಕ್ಷರು, ಬ್ಯಾಂಕಿನ ಉಪಾಧ್ಯಕ್ಷ ಕೆ ಎಸ್ ಪೂವಯ್ಯ, ಆಡಳಿತ ಮಂಡಳಿಯ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ, ಪ್ರಧಾನ ವ್ಯವಸ್ಥಾಪಕರು ಹಾಗು ಬ್ಯಾಂಕಿನ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.

----------------------------------------

ಸಂಘಗಳಿಗೆ ಪ್ರಶಸ್ತಿ

2024-25 ನೇ ಸಾಲಿಗೆ ಉತ್ತಮ ಕಾರ್ಯನಿರ್ವಹಣೆ ಮಾಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಪ್ರಶಸ್ತಿ ನೀಡಲಾಯಿತು.

ಮಡಿಕೇರಿ ತಾಲೂಕಿನ ಪೆರಾಜೆ (ಪ್ರಥಮ), ಪ್ರಾ.ಕೃ.ಪ.ಸ.ಸಂಘ ನಾಪೋಕ್ಲು (ದ್ವಿತೀಯ), ಪಯಶ್ವಿನಿ ಪ್ರಾ.ಕೃ.ಪ.ಸ.ಸಂಘ ಸಂಪಾಜೆ (ತೃತೀಯ)

ವಿರಾಜಪೇಟೆ ತಾಲೂಕು - ಹಾತೂರು ಪ್ರಾ.ಕೃ.ಪ.ಸ.ಸಂಘ ( ಪ್ರಥಮ) , ನಾಲ್ಕೇರಿ ಪ್ರಾ.ಕೃ.ಪ.ಸ.ಸಂಘ (ದ್ವಿತೀಯ), ಟಿ. ಶೆಟ್ಟಿಗೇರಿ ಪ್ರಾ.ಕೃ.ಪ.ಸ.ಸಂಘ (ತೃತೀಯ)

ಸೋಮವಾರಪೇಟೆ ತಾಲೂಕು - ಐಗೂರು.ಪ್ರಾ.ಕೃ.ಪ.ಸ. ಸಂಘ (ಪ್ರಥಮ) ರಾಮೇಶ್ವರ ಕೂಡುಮಂಗಳೂರು ಪ್ರಾ.ಕೃ.ಪ.ಸ.ಸಂಘ (ದ್ವಿತೀಯ) ಗೌಡಳ್ಳಿ ಪ್ರಾ.ಕೃ.ಪ.ಸ.ಸಂಘ (ತೃತೀಯ)

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್