ಹಾವೇರಿ: ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೋಳಿ ಜ್ವರ ಪ್ರಕರಣಗಳು ಕಂಡುಬಂದಿಲ್ಲ. ಆದಾಗ್ಯೂ ಕೋಳಿ ಜ್ವರ ನಿಯಂತ್ರಣಕ್ಕೆ ಹಾಗೂ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಕೋಳಿ ಫಾರ್ಮ್‌ಗಳ ಮೇಲೆ ನಿಗಾ ವಹಿಸಬೇಕು ಎಂದು ಪಶು ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಂಗಣದಲ್ಲಿ ಜರುಗಿದ ಕೋಳಿ ಜ್ವರ ನಿಯಂತ್ರಣ ಕುರಿತ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಶು ವೈದ್ಯಾಧಿಕಾರಿಗಳು ಪ್ರತಿದಿನ ಕೋಳಿ ಫಾರ್ಮ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕೋಳಿಗಳು ಅಕಾಲಿಕ ಮರಣ ಹೊಂದಿದರೆ ಕೂಡಲೇ ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡಲು ಕೋಳಿ ಫಾರ್ಮ್ ಮಾಲೀಕರಿಗೆ ತಿಳಿಸಬೇಕು ಎಂದರು. ಮರಣೋತ್ತರ ಪರೀಕ್ಷೆ: ಅರಣ್ಯ ಪ್ರದೇಶದಲ್ಲಿ ಹಕ್ಕಿಗಳು ಮರಣ ಹೊಂದಿದರೆ ಕೂಡಲೇ ಹತ್ತಿರ ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮರಣ ಹೊಂದಿದ ಹಕ್ಕಿಗಳ ಮರಣೋತ್ತರ ಪರೀಕ್ಷೆಗೆ ಕಳುಹಿಸಬೇಕು ಹಾಗೂ ಮರಣ ಹೊಂದಿದ ಹಕ್ಕಿಗಳ ವಿಲೇವಾರಿ ಮಾರ್ಗಸೂಚಿ ಅನುಸಾರ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೋಳಿ ಜ್ವರದ ಲಕ್ಷಣಗಳು, ಮುಂಜಾಗ್ರತಾ ಕ್ರಮಗಳ, ಹಸಿ ಮಾಂಸ ಹಾಗೂ ಹಸಿ ಮೊಟ್ಟೆ ಉಪಯೋಗಿಸದಂತೆ ರ್ವಜನಿಕರಿಗೆ ಅರಿವು ಮೂಡಿಸಬೇಕು. ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಆರೋಗ್ಯ ಇಲಾಖೆ ಹಾಗೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.ಬೇರೆ ಪ್ರದೇಶಗಳಿಂದ ಬರುವ ಮೊಟ್ಟೆ ಅಥವಾ ಕೋಳಿ ವಾಹನಗಳನ್ನು ಸ್ಯಾನಿಟೈಜೇಷನ್ ಮಾಡಬೇಕು. ಕೋಳಿ ಫಾರ್ಮ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಮಾಲೀಕರು ಅಗತ್ಯ ರಕ್ಷಾಕವಚನಗಳನ್ನು ಉಪಯೋಗಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.ಹೊರ ಜಿಲ್ಲೆಗೆ ಹಾಗೂ ಹೊರರಾಜ್ಯಗಳಿಂದ ಬರುವ ಕೋಳಿ ಮೊಟ್ಟೆ ಹಾಗೂ ಕೋಳಿ ಮರಿಗಳ ವಾಹನಗಳ ಮಾಹಿತಿಯನ್ನು ಪಶು ಸಂಗೋಪನಾ ಇಲಾಖೆ ನೀಡಬೇಕು ಎಂದು ಪ್ರಾದೇಶಿಕ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಎಸ್ ವಿ. ಸಂತಿ ಮಾತನಾಡಿ, ಬ್ಯಾಡಗಿ ತಾಲೂಕಿನಲ್ಲಿ ೧೭, ಹಾನಗಲ್ಲ- ೫, ಹಾವೇರಿ- ೨೦, ಹಿರೇಕೆರೂರು- ೧೧, ರಾಣಿಬೆನ್ನೂರು- ೮೬, ರಟ್ಟೀಹಳ್ಳಿ ಹಾಗೂ ಸವಣೂರು ತಾಲೂಕಿನಲ್ಲಿ ತಲಾ ೧೩ ಮತ್ತು ಶಿಗ್ಗಾಂವಿ ತಾಲೂಕಿನಲ್ಲಿ ೧೪ ಸೇರಿ ಒಟ್ಟು ೧೭೯ ಕೋಳಿ ಫಾರ್ಮ್‌ಗಳಿವೆ. ಕೋಳಿ ಜ್ವರ ನಿಯಂತ್ರಣಕ್ಕೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜತೆಗೆ ತಾಲೂಕು ಮಟ್ಟದಲ್ಲಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯೊಳಗೊಂಡ ನಾಲ್ಕು ಜನರ ರ‍್ಯಾಪಿಡ್ ರೆಸ್ಪಾನ್ಸ್ ಟೀಂ(ಆರ್‌ಆರ್‌ಟಿ) ತಂಡವನ್ನು ಎಲ್ಲ ತಾಲೂಕುಗಳಿಗೆ ನಿಯೋಜಿಸಲಾಗಿದೆ ಎಂದರು.ಆರೋಗ್ಯ ಇಲಾಖೆ ಡಾ. ಜಗದೀಶ ಪಾಟೀಲ ಮಾತನಾಡಿ, ಕೋಳಿ ಜ್ವರ ವೈರಲ್‌ನಿಂದ ಹರಡುವುದರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇದ್ದು, ಸಂಶಯಾಸ್ಪದ ಪ್ರಕರಣಗಳ ಪತ್ತೆಗೆ ಆರೋಗ್ಯ ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪಿಪಿಇ ಕಿಟ್, ಮಾಸ್ಕ್, ಅಗತ್ಯ ಔಷಧಿಗಳ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದರು. ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಕಿರಣ ಕೊಪ್ಪದ, ಎಲ್ಲ ತಾಲೂಕಿನ ಸಹಾಯಕ ನಿರ್ದೇಶಕರು, ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳು ಅಧಿಕಾರಿಗಳು ಉಪಸ್ಥಿತರಿದ್ದರು.