ರೋಲ್ ಕಾಲ್ ಪತ್ರಕರ್ತರನ್ನು ದೂರವಿಡಿ

KannadaprabhaNewsNetwork |  
Published : Apr 07, 2026, 01:15 AM IST
ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಆರಂಭವಾದ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಹಾಗೂ 2025-28 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿದ ಶಾಸಕ ಎಸ್. ಆರ್. ಶ್ರೀನಿವಾಸ್ | Kannada Prabha

ಸಾರಾಂಶ

ವೃತ್ತಿ ಧರ್ಮ ಪಾಲಿಸುವ ಪತ್ರಕರ್ತರಿಗೆ ಗೌರವ ಸಿಗಬೇಕಾದಲ್ಲಿ ಮೊದಲು ರೋಲ್ ಕಾಲ್ ಪತ್ರಕರ್ತರನ್ನು ದೂರವಿಡಬೇಕು ಎಂದು ಶಾಸಕ ಎಸ್. ಆರ್. ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ವೃತ್ತಿ ಧರ್ಮ ಪಾಲಿಸುವ ಪತ್ರಕರ್ತರಿಗೆ ಗೌರವ ಸಿಗಬೇಕಾದಲ್ಲಿ ಮೊದಲು ರೋಲ್ ಕಾಲ್ ಪತ್ರಕರ್ತರನ್ನು ದೂರವಿಡಬೇಕು ಎಂದು ಶಾಸಕ ಎಸ್. ಆರ್. ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಆರಂಭವಾದ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಹಾಗೂ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಬಿಂಬಿಸುವ ಪತ್ರಕರ್ತರ ನಡವಳಿಕೆ ಬರವಣಿಗೆ ಮೂಲಕ ಸಮಾಜವನ್ನು ತಿದ್ದಬೇಕು. ಆದರೆ ರೋಲ್ ಕಾಲ್ ಪತ್ರಕರ್ತರ ಸಂಖ್ಯೆ ಹೆಚ್ಚಾಗಿ ನೈಜ ಪತ್ರಕರ್ತರಿಗೂ ಕೆಟ್ಟ ಹೆಸರು ಬಂದಿದೆ ಎಂದು ವಿಷಾದಿಸಿದರು.ರಾಜಕಾರಿಣಿಗಳು ಹಾಗೂ ಪತ್ರಕರ್ತರ ಕೆಲಸ ಎರಡೂ ಸಮಾಜಸೇವೆಯಾಗಿವೆ. ಇತ್ತೀಚಿಗೆ ವಸೂಲಿ ಮಾಡುವವರ ಬಗ್ಗೆ ದೂರುಗಳು ಬಂದ ಹಿನ್ನಲೆ ತಾಲೂಕಿನ ಅಧಿಕಾರಿ ವರ್ಗಕ್ಕೆ ಬೆಂಬಲವಾಗಿ ನಿಂತು ಕೆಲಸ ಮಾಡಲು ಅನುವು ಮಾಡಿದ್ದೇನೆ. ಬಡವರ ಪರ, ಕಾನೂನು ಪ್ರಕಾರ ಕೆಲಸ ಮಾಡುವ ಅಧಿಕಾರಿಗಳಿಗೆ ಬೆದರಿಸುವ ಪ್ರವೃತ್ತಿಯ ಪತ್ರಕರ್ತರ ಬಗ್ಗೆ ಸಂಘ ಕೂಡಾ ಗಂಭೀರ ಕ್ರಮ ಕೈಗೊಳ್ಳಬೇಕು. ಅಧಿಕೃತ ಕಾರ್ಡ್ ವಿತರಣೆ ಮಾಡುವಾಗಲೇ ಎಲ್ಲವನ್ನೂ ಗಮನಿಸಬೇಕಿದೆ. ಪ್ರಾಮಾಣಿಕ ಅಧಿಕಾರಿಗಳನ್ನು ಬೆದರಿಸುವವರ ವಿರುದ್ಧ ಸಂಘವೇ ಕ್ರಮ ಕೈಗೊಳ್ಳಬೇಕು. ತಾಲೂಕು ಸಂಘದ ಪತ್ರಿಕಾ ಭವನ ನಿರ್ಮಾಣಕ್ಕೆ ಸಿಎ ಸೈಟ್ ನೀಡಲು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಈ ಜೊತೆಗೆ ನಿವೇಶನರಹಿತ ಪತ್ರಕರ್ತರಿಗೆ ಸೈಟ್ ಮಂಜೂರು ಆಯಾ ಗ್ರಾಮದಲ್ಲಿಯೇ ಮಾಡಲು ಸರ್ಕಾರ ಜೊತೆ ಮಾತನಾಡುತ್ತೇನೆ. ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿಮ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕೋದ್ಯಮ ಬದ್ಧತೆಯಲ್ಲಿ ಸಾಗಬೇಕಿದೆ. ನೈಜ ವರದಿ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಸರ್ಕಾರದ ಯಾವುದೇ ಕಾರ್ಯಕ್ರಮ ಹಾಗೂ ಯೋಜನೆ ಸಫಲವಾಗಲು ಪತ್ರಕರ್ತರ ಸಹಕಾರ ಅಗತ್ಯವಿದೆ. ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸರ್ಕಾರದ ಉದ್ದೇಶವನ್ನು ತಿಳಿಸುವ ಪತ್ರಿಕಾ ಕ್ಷೇತ್ರ ಗ್ರಾಮೀಣ ಭಾಗದಲ್ಲಿ ಹರಡಿದೆ. ಈಗ ಸಾಮಾಜಿಕ ಜಾಲತಾಣ ಸಹ ಹೆಚ್ಚಾಗಿ ಕೆಲಸ ಮಾಡುತ್ತಿದೆ. ಆದರೆ ವಾಸ್ತವ ಸತ್ಯವನ್ನು ಪತ್ರಿಕೆಗಳು ಮಾತ್ರ ಬಿಂಬಿಸುತ್ತವೆ ಎಂದರು. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಮಾತನಾಡಿ ರಾಜ್ಯ ಸರ್ಕಾರ ಹಿರಿಯ ಪತ್ರಕರ್ತರಿಗೆ ಪಿಂಚಣಿ ವ್ಯವಸ್ಥೆಯನ್ನು ಮಾಡಿದೆ. ರಾಜ್ಯದಲ್ಲಿ ಹತ್ತು ಸಾವಿರ ಮಂದಿ ಈ 15 ಸಾವಿರ ಪಿಂಚಣಿ ಪಡೆಯುತ್ತಿದ್ದಾರೆ. ಈ ಜೊತೆಗೆ ಸ್ಮಾರ್ಟ್ ಕಾರ್ಡ್ ಪಡೆದ ಪತ್ರಕರ್ತರಿಗೆ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರ ಈ ಬಾರಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ನೈಜ ಫಲಾನುಭವಿಗಳ ಆಯ್ಕೆಗೆ ರಚಿಸಿದ್ದ ನಿಯಮ ಸರಳೀಕರಣಕ್ಕೆ ಒತ್ತಾಯವಿದೆ. ಸದ್ಯದಲ್ಲೇ ಕ್ರಮ ಕೈಗೊಳ್ಳಲಿದ್ದಾರೆ ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಲ್.ಯೋಗೇಶ್ ಮಾತನಾಡಿ, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ನಮ್ಮ ಸಂಘ ಅರ್ಹ, ಪ್ರಾಮಾಣಿಕ ಪತ್ರಕರ್ತರನ್ನು ಗುರುತಿಸಿ ಸಂಘದ ಸದಸ್ಯತ್ವ ನೀಡಿದೆ. ಜಿಲ್ಲೆಯ ಹತ್ತು ತಾಲೂಕಿನಲ್ಲಿ ನೈಜ ಪತ್ರಕರ್ತರನ್ನು ಸಂಘ ಒಗ್ಗೂಡಿಸಿಕೊಂಡು ಸಾಗಿದೆ. ಹೊಸ ಸದಸ್ಯತ್ವ ಬಗ್ಗೆ ಸಹ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಪ್ರತಿ ತಾಲೂಕಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಸ್ಥಳೀಯ ಆಡಳಿತ ಸಹಕಾರ ನೀಡಬೇಕು. ಜನಪ್ರತಿನಿಧಿಗಳ ಸಹಾಯ ಕೂಡಾ ಅಗತ್ಯವಿದೆ ಎಂದರು. ಸಂಘದ ನೂತನ ಕಾರ್ಯಾಲಯವನ್ನು ಎಲ್ಲಾ ಗಣ್ಯರು ಉದ್ಘಾಟಿಸಿದರು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಿದ ಜಿಲ್ಲಾಧ್ಯಕ್ಷ ಎಲ್.ಯೋಗೇಶ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಸಂಘದ ಅಧ್ಯಕ್ಷ ಡಿ.ಮಂಜುನಾಥ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ತಹಸೀಲ್ದಾರ್ ಆರತಿ. ಬಿ, ತಾಪಂ ಇಒ ರಂಗನಾಥ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ದೊಡ್ಡಗುಣಿ, ರಂಗಧಾಮಯ್ಯ, ಜಿಲ್ಲಾ ಕಾರ್ಯದರ್ಶಿ ಸತೀಶ್ ಹಾರೋಗೆರೆ, ಜಿಲ್ಲಾ ನಿರ್ದೇಶಕರಾದ ಯೋಗೀಶ್ ಮೆಳೆಕಲ್ಲಹಳ್ಳಿ, ಜಗನ್ನಾಥ್ , ಮಾರುತಿ, ಕಣಿಮಯ್ಯ, ಪುರುಷೋತ್ತಮ್, ಮಂಜುನಾಥ್ , ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಸಂಜಯ್, ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಿರ್ದೇಶಕ ಆಂಜಿನಪ್ಪ ಸೇರಿದಂತೆ ಜಿಲ್ಲಾ ನಿರ್ದೇಶಕರು, ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರ ಕಡಿದು ಮಹಿಳಾ ಕಾಲೇಜು ಕಟ್ಟಲು ಅವಕಾಶ ಕೊಡಲ್ಲ
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವುದಕ್ಕೆ ಹೆಮ್ಮೆಪಡಿ