ಕನ್ನಡಪ್ರಭ ವಾರ್ತೆ ಇಂಡಿ
ಪಕ್ಷಕ್ಕೆ ನಿಷ್ಠಾವಂತ ಶಾಸಕರು ಆಯ್ಕೆಯಾಗುವ ಅವಶ್ಯಕತೆ ಇದೆ. ಪಕ್ಷವನ್ನು ರಾಜಕೀಯವಾಗಿ ಬಳಸಿಕೊಂಡು, ಉನ್ನತ ಸ್ಥಾನಮಾನ, ಹುದ್ದೆಗಳನ್ನು ಪಡೆದು ಚುನಾವಣೆಯಲ್ಲಿ ಗೆಲುವು ಸಾಧಿಸಿ, ಪಕ್ಷದ ವರಿಷ್ಠರಿಗೆ, ನಂಬಿದ ನಿಷ್ಠಾವಂತ ಕಾರ್ಯಕರ್ತರಿಗೆ ವಂಚಿಸಿ ಮತ್ತೊಂದು ಪಕ್ಷಕ್ಕೆ ಹೋಗುವವರು ಇದ್ದಾರೆ. ಅಂತವರನ್ನು ದೂರ ಇಡಬೇಕಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಪಟ್ಟಣದ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕರ್ತರು ಪಕ್ಷ ಸಂಘಟನೆ, ಬಲವರ್ಧನೆಗೆ ಶ್ರಮಿಸಬೇಕು. ಪಕ್ಷ ಹಾಗೂ ಬಿ.ಡಿ.ಪಾಟೀಲರಿಗೆ ಶಕ್ತಿ ತುಂಬಬೇಕು. ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಂಪರ್ಕ ನಿರಂತರವಾಗಿ ಇಟ್ಟುಕೊಳ್ಳುವ ಬಯಕೆಯಿಂದ ನಿಮ್ಮ ಬಳಿಗೆ ಬಂದಿದ್ದೇನೆ. ಜನರ ಧ್ವನಿಯಾಗಿರುವ, ಪಕ್ಷ ಕಟ್ಟಲು ಶ್ರಮಿಸುವ ನಿಷ್ಠಾವಂತರನ್ನು ಹುಡುಕಿ ಕಾರ್ಯಕರ್ತರ ಸಮಕ್ಷಮ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು.ಇಂಡಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಬಿ.ಡಿ.ಪಾಟೀಲ ಹಣಕಾಸಿನಲ್ಲಿ ಶ್ರೀಮಂತ ಇಲ್ಲದಿದ್ದರೂ, ಹೃದಯ ಶ್ರೀಮಂತಿಕೆ ಹೊಂದಿದ್ದಾರೆ. ಜೆಡಿಎಸ್ ಯಾವತ್ತು ಅವರ ಹಿಂದೆ ಇರುತ್ತದೆ. ಅವರು ಧೃತಿಗೆಡುವ ಅವಶ್ಯಕತೆ ಇಲ್ಲ. ಮುಂದೊಂದು ದಿನ ನಿಮಗೆ ಅವಕಾಶ ಸಿಕ್ಕೇ ಸಿಗುತ್ತದೆ. ದೇವರ ಕೃಪೆಯಾಗುತ್ತದೆ ಎಂದು ಭರವಸೆ ನೀಡಿದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಕಿಲ್ ಕುಮಾರಸ್ವಾಮಿ ಅವರು ಹಮ್ಮಿಕೊಂಡ ಜೆಡಿಎಸ್ ಸದಸ್ಯತ್ವ ಅಭಿಯಾನದ ಕಾರ್ಯಕ್ರಮಕ್ಕೆ ಜನರು ಅಭೂತಪೂರ್ವ ಬೆಂಬಲ ನೀಡುತ್ತಿರುವುದು ಗಮನಿಸಿದರೆ, ಇದು ಮುಂದಿನ ಚುನಾವಣೆಯ ದಿಕ್ಸೂಚಿ ತೊರಿಸುತ್ತದೆ. ಬದಲಾವಣೆಯ ಗಾಳಿ ತೋರುತ್ತಿದೆ. ವಿಜಯಪುರ ಜಿಲ್ಲೆಗೆ ನೀರಾವರಿ ಯೋಜನೆಯ ಕೊಡುಗೆ ನೀಡಿದ್ದು ಜೆಡಿಎಸ್ ಪಕ್ಷ ಎಂದು ಹೇಳಿದರು.ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಮಾತನಾಡಿ, ಪ್ರೀತಿ, ವಾತ್ಸಲ್ಯ ಭಾವನೆಯಿಂದ ನನ್ನನ್ನು ತಾಲೂಕಿನ ಜನರು ರಾಜಕಾರಣದಲ್ಲಿ ಬೆಳೆಸುತ್ತಿದ್ದಾರೆ. ನನ್ನ ಬಳಿ ಹಣ ನೋಡಲಿಲ್ಲ. ಇವನೊಬ್ಬ ಬಡವನೆಂದು ಕರುಣೆಯಿಂದ ಮತ ನೀಡಿದ್ದಾರೆ. 2028 ಕ್ಕೆ ಮತ್ತೆ ಶಕ್ತಿ ತುಂಬಿ ನಿಮ್ಮ ಸೇವೆಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿಕೊಂಡರು. ಈ ಭಾಗದ ಸಮಸ್ಯೆಗಳನ್ನು ಬೆಳಕು ಚೆಲ್ಲಲು ಅಮರಣ ಉಪವಾಸ ಸತ್ಯಾಗ್ರಹ, ರಕ್ತದಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ನನ್ನ ಉಸಿರು ಇರುವವರೆಗೂ ತಾಲೂಕಿನ ಜನತೆಯ ಸೇವೆ ಮಾಡುವುದಾಗಿ ಹೇಳಿದರು.
ಪಂಚಪ್ಪ ಕಲಬುರ್ಗಿ, ಬಿ.ಜಿ.ಪಾಟೀಲ, ವೆಂಕಟಗೌಡ ನಾಡಗೌಡ ಮಾತನಾಡಿದರು. ಅಪ್ಪುಗೌಡ ಪಾಟೀಲ, ವೀರಭದ್ರಪ್ಪ, ರೇಶ್ಮಾ, ಕನ್ಯಾಕುಮಾರಿ, ಪೂರ್ಣಿಮಾ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ, ಬಸವರಾಜ ಹೊನವಾಡ, ಮರೆಪ್ಪ ಗಿರಣಿವಡ್ಡರ, ಮುತ್ತಪ್ಪ ಪೊತೆ, ಅಯುಬ ನಾಟೀಕಾರ, ನಾಗೇಶ ತಳಕೇರಿ, ವಿಜಯಕುಮಾರ ಭೋಸಲೆ, ಶಿವು ದೇವರ, ಸಿದ್ದು ಡಂಗಾ, ಶ್ರೀಶೈಲಗೌಡ ಪಾಟೀಲ, ಹಣಮಂತ ಪೂಜಾರಿ, ಯುವರಾಜ ಪಾಟೀಲ, ಜಗನ್ನಾಥ ಇಂಡಿ, ಮಹಿಬೂಬ ಬೇನೂರ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು. ಸ್ಟೇಷನ್ ರಸ್ತೆಯ ಅಮರ ಹೊಟೇಲನಿಂದ ಕಾರ್ಯಕ್ರಮದ ವೇದಿಕೆವರೆಗೆ ಬೈಕ್ ರ್‍ಯಾಲಿ ಮೂಲಕ ನಿಖಿಲ್ ಕುಮಾರಸ್ವಾಮಿಯವರನ್ನು ಸ್ವಾಗತಿಸಲಾಯಿತು.------
ಕೋಟ್ಕುರ್ಚಿ ಉಳಿಸಿಕೊಳ್ಳಲು, ಕುರ್ಚಿ ಭದ್ರಪಡಿಸಿಕೊಳ್ಳಲು, ಅಧಿಕಾರ ಪಡೆಯಲು ಕಿತ್ತಾಟ ಮಾಡುವುದೇ ರಾಜ್ಯ ಸರ್ಕಾರದ ಸಾಧನೆಯಾಗಿದೆ. ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ 4 ಸ್ಥಾನದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು. ಅದಕ್ಕಾಗಿ ಕಾರ್ಯಕರ್ತರು ಇಂದಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಕುರ್ಚಿ ತಿಕ್ಕಾಟದಲ್ಲಿ ಯಾವಾಗ ಬೇಕಾದರೂ ಚುನಾವಣೆ ಬರಬಹುದು.
- ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ