ಕೋಟ: ಸರಕಾರಿ ಶಾಲೆ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗಿಂತ ಪರಿಣಾಮಕಾರಿಯಾಗಿ ಸಾಧನೆ ಮಾಡಬಲ್ಲರು ಎಂದು ಪ್ರಸಿದ್ಧ ಮನೋವೈದ್ಯ ಡಾ. ಪ್ರಕಾಶ್ ಸಿ. ತೋಳಾರ್ ಹೇಳಿದರು.ಅವರು ಇಲ್ಲಿನ ಕೋಟತಟ್ಟು ಪಡುಕರೆ ಶಾಲೆ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಬ್ರಹ್ಮಾವರ ವಲಯ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟತಟ್ಟು ಸಹಭಾಗಿತ್ವದಲ್ಲಿ 2025- 26ನೇ ಸಾಲಿನ ಕಾರ್ಕಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಗೆ ನಿಲ್ಲುತ್ತಾರೆ. ಕಷ್ಟ ಏನೆಂಬುವುದನ್ನು ಅವರುಗಳು ಅರ್ಥೈಸಿಕೊಳ್ಳುತ್ತಾರೆ ಎಂದರಲ್ಲದೆ ಕನ್ನಡ ಮಾಧ್ಯಮ ಶಾಲಾ ಮಕ್ಕಳ ಸಾಧನೆ ಹೆಚ್ಚು ಕಾಣಲು ಸಾಧ್ಯ. ವಿದ್ಯಾರ್ಥಿಗಳೇ ಈ ದೇಶದ ಬೆನ್ನೆಲು. ಅದಕ್ಕಾಗಿ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಗುರಿ ಇರಿಸಿ ಕನಸು ಕಾಣುವುದಲ್ಲದೆ ಅದನ್ನು ನನಾಸಾಗಿಸಲು ಪ್ರಯತ್ನಿಸಿ ಮೊಬೈಲ್ ಬಳಕೆಯಿಂದ ದೂರ ಇರಿ ಎಂದು ಸಲಹೆ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಸುಲೇಮಾನ್ ವಹಿಸಿದ್ದರು. ಅಭ್ಯಾಗತರಾಗಿ ಕೆಎಂಎಫ್ ನಿರ್ದೇಶಕ ಶಿವಮೂರ್ತಿ ಕೆ., ಮನಸ್ಮಿತಾ ಫೌಂಡೇಶನ್ ನಿರ್ದೇಶಕಿ ಸವಿತಾ ಪಿ. ತೋಳಾರ್, ಕೋಟತಟ್ಟು ಗ್ರಾಪಂ ಸದಸ್ಯೆ ವಿದ್ಯಾ ಸಂದೇಶ್ ಸಾಲಿಯಾನ್, ಶಾಲಾ ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಹುಸೈನ್ ಸಾಹೇಬ್, ಉಪಾಧ್ಯಕ್ಷೆ ಸುನಂದಾ, ತಾಯಂದಿರ ಸಮಿತಿಯ ಅಧ್ಯಕ್ಷೆ ಗಿರಿಜ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಜಾನಕಿ ಭಟ್ ಸ್ವಾಗತಿಸಿದರು. ಸಿಆರ್ ಪಿ ಮಾಲತಿ ಪ್ರಾಸ್ತಾವನೆ ಸಲ್ಲಿಸಿದರು. ಶಾಲಾ ಶಿಕ್ಷಕಿ ಸಂಗೀತ ಕೋಟ್ಯಾನ್ ನಿರೂಪಿಸಿದರು.