ಡಿಪೌಲ್ ಅಕಾಡೆಮಿ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ
ರೋಣ: ಕಲಿಕಾ ಹಂತದಲ್ಲಿ ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಬೇಕು. ಇಲ್ಲವಾದಲ್ಲಿ ಮಕ್ಕಳ ಕಲಿಕೆಗೆ ಅಡ್ಡಿಯಾಗುವುದು ಎಂದು ರೋಣ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಸಿ. ಚಿನ್ನಸ್ವಾಮಿ ಹೇಳಿದರು.ಅವರು ಶುಕ್ರವಾರ ಸಂಜೆ ಪಟ್ಟಣದ ಡಿಪೌಲ್ ಅಕಾಡೆಮಿ ಸಿಬಿಎಸ್‌ಸಿ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಾರ್ಷಿಕ ಹಬ್ಬ -2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್‌ಗೆ ಅಂಟಿಕೊಳ್ಳುತ್ತಿದ್ದಾರೆ. ಮೊಬೈಲ್ ಬಳಕೆ ಮಕ್ಕಳಿಗೆ ಉಪಯುಕ್ತಕ್ಕಿಂತ ತೊಂದರೆಯೇ ಹೆಚ್ಚಾಗುತ್ತದೆ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಲು ಕ್ರಮ ಕೈಗೊಳ್ಳಬೇಕು. ಮೊಬೈಲ್ ಬಳಕೆಯಿಂದ ಅನೇಕ ಅವಘಡಗಳು ಸಂಭವಿಸುತ್ತವೆ. ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಲು, ಆಟ, ಪಾಠಗಳಲ್ಲಿ ತೊಡಗಿಸಬೇಕು. ಮಕ್ಕಳೆದರು ಪಾಲಕರು ಟಿ.ವಿ ನೋಡುವುದಾಗಲಿ, ಮೊಬೈಲ್‌ನಲ್ಲಿ ತೊಡಗುವುದಾಗಲಿ ಮಾಡಬಾರದು. ಹೀಗೆ ಮಾಡಿದಲ್ಲಿ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಪಾಲಕರನ್ನು ಮಕ್ಕಳು ಪಾಲಕರನ್ನು ಅನುಕರಿಸುತ್ತಾರೆ. ಆದ್ದರಿಂದ ಮಕ್ಕಳೊಂದಿಗೆ ಪಾಲಕರ ಪಾಲ್ಗೊಳ್ಳುವಿಕೆ ಅತ್ಯಂತ ಜವಾಬ್ದಾರಿಯುತವಾಗಿರುತ್ತದೆ ಎಂದರು. ಡಿವೈಎಸ್ಪಿ ಪ್ರಭುಗೌಡ ಕೆ ಮಾತನಾಡಿ, ಅಪರಾಧ ಕೃತ್ಯಗಳಲ್ಲಿ ಮಕ್ಕಳನ್ನು ತೊಡಗದಂತೆ ಪಾಲಕರ ಜವಾಬ್ದಾರಿ ಮುಖ್ಯವಾಗಿದೆ. ಮಕ್ಕಳ ಚಟುವಟಿಕೆಯನ್ನು ಪಾಲಕರು ಗಮನಿಸಿ, ದಾರಿ ತಪ್ಪುವದು ಕಂಡು ಬಂದ ತಕ್ಷಣವೇ ತಿದ್ದಬೇಕು. ಮಕ್ಕಳ ಭವಿಷ್ಯದ ಜೀವನ ಉಜ್ವಲಗೊಳ್ಳಲು ಸನ್ಮಾರ್ಗ ತೋರಬೇಕು.ಈ ದಿಶೆಯಲ್ಲಿ ಪೂರಕ ವಾತಾವರಣ ಕಲ್ಪಿಸಬೇಕು. ಮಾತಾಡುವ ಭಾಷೆ ಯಾವುದೇ ಇರಲಿ, ಭಾವನೆ ಅತೀ ಮುಖ್ಯ. ಭಾಷೆ ವ್ಯಕ್ತಿ, ವ್ಯಕ್ತಿಗಳ ಮಧ್ಯೆ ಇರುವ ಮಾಧ್ಯಮವಾಗಿದೆ. ಆದ್ದರಿಂದ ಉತ್ತಮ ಪರಸ್ಪರ ಪ್ರೀತಿ, ವಾತ್ಸಲ್ಯ, ಮಮತೆಯಿಂದ ಜೀವನ ಸಾಗಿಸಬೇಕು ಎಂದರು. ತಹಸೀಲ್ದಾರ್ ನಾಗರಾಜ ಕೆ. ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಸಮಾಜಕ್ಕೆ ಮಾದರಿಯಾಗುವಂತ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಶಾಲೆ ಮತ್ತು ಮನೆ ಪಾತ್ರ ಪ್ರಮುಖವಾಗಿದೆ. ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ಮಕ್ಕಳನ್ನು ಭವಿಷ್ಯದ ಜವಾಬ್ದಾರಿಯುತ ನಾಗರಿಕರಾಗಿ ನಿರ್ಮಿಸುವಂತಿರಬೇಕು ಎಂದರು. 2021-22 ರಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಇರ್ಫಾನ ಕೊಲ್ಕಾರ, 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಕಲಾವತಿ ಸುಂಕದ ಹಾಗೂ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಚಿಕ್ಕಮಣ್ಣೂರ ಗ್ರಾಪಂ ಅಧ್ಯಕ್ಷೆ ಮಂಜುಳಾ ಪಾಟೀಲ,ಫಾದರ ಅಜೋಶ ಜೋಶ, ಡಿಪೌಲ್ ಆಕಾಡೆಮಿ ನಿರ್ದೇಶಕ ಫಾದರ ಜೋಮೇಶ ಜಾಹ್ಣ, ಫಾದರ ಜಾಕೂಬ ಅಂಟೋನಿ ಮುಂತಾದವರು ಉಪಸ್ಥಿತರಿದ್ದರು. ಪ್ರಿನ್ಸಿಪಾಲ ಜೋಮೇಶ ಸ್ವಾಗತಿಸಿದರು. ಫಾದರ್ ಬೆಬಿನ್ ಥಾಮಸ್ ವಂದಿಸಿದರು.