ಮೊಬೈಲ್‌ನಿಂದ ಮಕ್ಕಳನ್ನು ದೂರವಿರಿಸಿ: ಕೋಮಲ್‌ಕುಮಾರ್

KannadaprabhaNewsNetwork |  
Published : Jan 05, 2026, 01:30 AM IST
೪ಕೆಎಂಎನ್‌ಡಿ-೧ಮಂಡ್ಯದ ನೂರಡಿ ರಸ್ತೆಯಲ್ಲಿರುವ ಅರುವಿ ಟ್ರಸ್ಟ್ ಮತ್ತು ವೀನಸ್ ಅಕಾಡೆಮಿ ವತಿಯಿಂದ ನಡೆದ ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. | Kannada Prabha

ಸಾರಾಂಶ

ಪೋಷಕರು ಮಕ್ಕಳಿಗೆ ಮೊಬೈಲ್ ಕೊಟ್ಟು ತಾವು ಬೇರೆ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ. ಮೊಬೈಲ್ ಕೊಡುವುದರಿಂದ ಮಕ್ಕಳ ಕಣ್ಣಿನ ಮೇಲೆ ಪರಿಣಾಮ ಬೀರುವುದಲ್ಲದೆ, ಅವರ ಮನಸ್ಸು ಬೇರೆಡೆಗೆ ಸೆಳೆಯುವಂತೆ ಮಾಡುತ್ತದೆ. ಅದಕ್ಕಾಗಿ ಪೋಷಕರು ಮಕ್ಕಳಿಗೆ ಹೆಚ್ಚಿನ ಸಮಯ ಕೊಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಕ್ಕಳು ಗಲಾಟೆ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಪೋಷಕರು ಮಕ್ಕಳಿಗೆ ಮೊಬೈಲ್ ಕೊಡುವುದನ್ನು ರೂಢಿ ಮಾಡಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಮಕ್ಕಳನ್ನು ಮೊಬೈಲ್ ಗೀಳಿಗೆ ಒಳಪಡಿಸದಂತೆ ಹಿರಿಯ ನಾಗರಿಕರ ಹಾಗೂ ಅಂಗವಿಕಲ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್ ಸಲಹೆ ನೀಡಿದರು.

ಅರುವಿ ಟ್ರಸ್ಟ್ ಮತ್ತು ವೀನಸ್ ಅಕಾಡೆಮಿ ವತಿಯಿಂದ ನಗರದ ನೂರಡಿ ರಸ್ತೆಯಲ್ಲಿರುವ ಅಕಾಡೆಮಿ ಆವರಣದಲ್ಲಿ ನಡೆದ ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪೋಷಕರು ಮಕ್ಕಳಿಗೆ ಮೊಬೈಲ್ ಕೊಟ್ಟು ತಾವು ಬೇರೆ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ. ಮೊಬೈಲ್ ಕೊಡುವುದರಿಂದ ಮಕ್ಕಳ ಕಣ್ಣಿನ ಮೇಲೆ ಪರಿಣಾಮ ಬೀರುವುದಲ್ಲದೆ, ಅವರ ಮನಸ್ಸು ಬೇರೆಡೆಗೆ ಸೆಳೆಯುವಂತೆ ಮಾಡುತ್ತದೆ. ಅದಕ್ಕಾಗಿ ಪೋಷಕರು ಮಕ್ಕಳಿಗೆ ಹೆಚ್ಚಿನ ಸಮಯ ಕೊಡಬೇಕು. ಅವರು ಏನು ಮಾಡುತ್ತಿದ್ದಾರೆ, ಹೇಗೆ ಓದುತ್ತಿದ್ದಾರೆ ಎಂಬ ಬಗ್ಗೆಯೂ ಗಮನಹರಿಸಬೇಕು. ಪ್ರಸ್ತುತ ಪ್ರತಿಯೊಂದು ಮಗುವಿನ ಭವಿಷ್ಯವೂ ಪೋಷಕರ ಕೈಯ್ಯಲ್ಲಿದೆ ಎಂಬುದನ್ನು ಯಾರೂ ಮರೆಯಬಾರದು ಎಂದರು.

ಮಕ್ಕಳು ಆಟವಾಡುವುದಕ್ಕೆ ಹಿಂದೆಲ್ಲಾ ಮಕ್ಕಳಿಗೆ ಆಟಿಕೆಗಳನ್ನು ಕೊಡುತ್ತಿದ್ದರು. ಈಗ ಪುಟ್ಟ ಮಕ್ಕಳು ಊಟ ಮಾಡುವುದಿಲ್ಲ ಎಂದರೂ ಮೊಬೈಲ್ ಕೊಡುವಂತಹ ಪ್ರವೃತ್ತಿ ಹೆಚ್ಚಾಗಿದೆ. ಇದು ಚಿಕ್ಕ ವಯಸ್ಸಿನಲ್ಲೇ ಚಟವಾಗಿ ಪರಿಣಮಿಸುತ್ತದೆ. ಮಕ್ಕಳಿಗೆ ಮೊಬೈಲ್ ಕೊಡದಿದ್ದರೆ ಅವರು ಹಠಕ್ಕೆ ಬೀಳುತ್ತಾರೆ. ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಅರವಿ ಟ್ರಸ್ಟ್, ವೀನಸ್ ಅಕಾಡೆಮಿ ಮಕ್ಕಳ ಬೌದ್ಧಿಕ, ಮಾನಸಿಕ, ಸಾಂಸ್ಕೃತಿಕ ಜ್ಞಾನ ಹಾಗೂ ಕೌಶಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಇದೇ ರೀತಿ ಎಲ್ಲ ಶಿಕ್ಷಣ ಮತ್ತು ಇತರೆ ಸಂಸ್ಥೆಗಳೂ ಸಹ ಮಕ್ಕಳಿಗೆ ಹೆಚ್ಚು ಹೆಚ್ಚಾಗಿ ಆಟಗಳತ್ತ ಗಮನ ಸೆಳೆಯುವುದರಿಂದ ಮೊಬೈಲ್‌ನಿಂದ ದೂರ ಇಡಲು ಸಹಕಾರಿಯಾಗುತ್ತದೆ ಎಂದರು.

ಅರವಿ ಟ್ರಸ್ಟ್ ಹಾಗೂ ವೀನಸ್ ಅಕಾಡೆಮಿ ಸಂಸ್ಥಾಪಕಿ ಅರುಣಾ ಈಶ್ವರ್ ಮಾತನಾಡಿ, ಮಕ್ಕಳಿಗೆ ಅನಗತ್ಯವಾದ ವಸ್ತುಗಳು, ಬಟ್ಟೆಗಳು ಇತ್ಯಾದಿಗಳನ್ನು ಅಗತ್ಯವಿಲ್ಲದಿದ್ದರೂ ನಾವು ಕೊಡಿಸುತ್ತೇವೆ. ಮಕ್ಕಳನ್ನು ಪ್ರೀತಿಸಬೇಕು. ಆದರೆ, ಅತಿಯಾದ ಪ್ರೀತಿ ಒಳ್ಳೆಯದಲ್ಲ. ಅವರ ಸುಂದರ ಭವಿಷ್ಯ ನಿರ್ಮಾಣಕ್ಕೆ ಅಗತ್ಯವಿರುವ ಶಿಕ್ಷಣಕ್ಕೆ ಪೂರಕವಾಗಿರುವ ಕೌಶಲ್ಯ ಮತ್ತು ಜ್ಞಾನವನ್ನು ಕೊಡಿಸುವ ಲೆಕ್ಕಾಚಾರ ಮಾಡಬೇಕು. ಇದರ ಪರಿಣಾಮ ಮಕ್ಕಳಿಗೆ ಒಳ್ಳೆಯ ಭವಿಷ್ಯ ಕಟ್ಟಿಕೊಡುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಕಲಿಯುವ ವಯಸ್ಸಿನಲ್ಲಿ ಕಲಿಸಬೇಕಾದದ್ದನ್ನು ಕಲಿಸುವ ಮೂಲಕ ಮಕ್ಕಳಿಗೆ ಜವಾಬ್ದಾರಿಗಳನ್ನು ಹೊರುವ, ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಹಿಂದೆಂದಿಗಿಂತಲೂ ಇಂದು ಅತ್ಯಂತ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಂಡ್ಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಲಿಂಗು ಮಾತನಾಡಿ, ದಿನಗಳು ಕಳೆದಂತೆ ಪೋಷಕರು ಮಕ್ಕಳ ಬಾಂಧವ್ಯಗಳು ಗಟ್ಟಿತನ ಕಳೆದುಕೊಳ್ಳುತ್ತಿವೆ ಇದಕ್ಕೆ ನೈತಿಕ ಶಿಕ್ಷಣದ ಅಗತ್ಯವಿದೆ ಎಂದರು,

ಲೇಖಕಿ ಶುಭಶ್ರೀ ಪ್ರಸಾದ್ ಮಾತನಾಡಿ, ನಮ್ಮ ತಲೆಮಾರಿನವರಲ್ಲಿ ಇದ್ದ ಪ್ರೀತಿ ಸ್ನೇಹ ಬಾಂಧವ್ಯ ಅಭಿಮಾನ ಆತ್ಮೀಯತೆ ನಂಬಿಕೆಗಳು ಈಗಿನ ಈಗಿನ ತಲೆಮಾರಿನವರಲ್ಲಿ ಅಷ್ಟಕ್ಕಷ್ಟೇ ಎಂದೆನಿಸುತ್ತದೆ. ಇದು ಖಂಡಿತ ಮಕ್ಕಳ ತಪ್ಪಲ್ಲ. ಮಕ್ಕಳಿಗೆ ನಾವು ಕಲಿಸಿರುವ, ತಿಳಿಸಿರುವ, ತಿಳಿಸುತ್ತಿರುವ ರೀತಿ ತಪ್ಪಾಗಿದೆ. ಇದರಿಂದ ಮಕ್ಕಳು ಹಾಗೂ ಪೋಷಕರು ಇಬ್ಬರು ಸಹ ಕಷ್ಟ ನೋವುಗಳನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಿರಿಯ ವಕೀಲರಾದ ಸೀತಾರಾಮ್, ಖ್ಯಾತ ಕೀಲು ಮತ್ತು ಮೂಳೆ ತಜ್ಞ ಡಾ.ರವಿಕುಮಾರ್ ಶ್ರೀಕಿಡ್ಸ್ ಸಂಸ್ಥಾಪಕ ರಕ್ಷಿತ್‌ರಾಜ್, ವೀನಸ್ ಅಕಾಡೆಮಿ ಶಿಕ್ಷಕರಾದ ಮಹದೇವು, ದೀಪಶ್ರೀ, ಯಶೋದಾ, ಚಂದನ್‌ರಾವ್, ಪ್ರೀತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ