ದೃಶ್ಯ ಮಾಧ್ಯಮದಿಂದ ಮಕ್ಕಳನ್ನು ದೂರವಿಡಿ: ನಾಗತಿಹಳ್ಳಿ ಚಂದ್ರಶೇಖರ್

KannadaprabhaNewsNetwork | Published : Jan 16, 2024 1:47 AM

ಸಾರಾಂಶ

ದೃಶ್ಯ ಮಾಧ್ಯಮಕ್ಕೆ 2 ನೂರು ವರ್ಷಗಳ ಇತಿಹಾಸವಿಲ್ಲ ದೃಶ್ಯ ಮಾಧ್ಯಮದ ಅತಿಯಾದ ವ್ಯಸನದಿಂದ ಭವಿಷ್ಯದ ದೃಷ್ಟಿಯಿಂದ ಮಕ್ಕಳನ್ನು ದೂರವಿಡಬೇಕು ಎಂದು ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಸನದ ನುಗ್ಗೇಹಳ್ಳಿಯಲ್ಲಿ ಮಾತನಾಡಿದರು.

ಚಲನಚಿತ್ರ ನಿರ್ದೇಶಕ, ಸಾಹಿತಿ ಅಭಿಮತ । ಕೋಟೆ ಮನೆ ಕಲೋತ್ಸವ 2024 ಕಾರ್ಯಕ್ರಮ । ಮಕ್ಕಳಿಗೆ ಪುಸ್ತಕ ನೀಡಬೇಕು

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಸಾಹಿತ್ಯ ಕ್ಷೇತ್ರಕ್ಕೆ 4 ಸಾವಿರ ವರ್ಷಗಳ ಇತಿಹಾಸವಿದೆ ನಾವು ನೀವು ಮೆಚ್ಚಿ ಆನಂದಿಸುವ ದೃಶ್ಯ ಮಾಧ್ಯಮಕ್ಕೆ 2 ನೂರು ವರ್ಷಗಳ ಇತಿಹಾಸವಿಲ್ಲ ದೃಶ್ಯ ಮಾಧ್ಯಮದ ಅತಿಯಾದ ವ್ಯಸನದಿಂದ ಭವಿಷ್ಯದ ದೃಷ್ಟಿಯಿಂದ ಮಕ್ಕಳನ್ನು ದೂರವಿಡಬೇಕು ಎಂದು ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.

ದೃಶ್ಯ ಮಾಧ್ಯಮಕ್ಕೆ 2 ನೂರು ವರ್ಷಗಳ ಇತಿಹಾಸವಿಲ್ಲ ದೃಶ್ಯ ಮಾಧ್ಯಮದ ಅತಿಯಾದ ವ್ಯಸನದಿಂದ ಭವಿಷ್ಯದ ದೃಷ್ಟಿಯಿಂದ ಮಕ್ಕಳನ್ನು ದೂರವಿಡಬೇಕು ಎಂದು ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಸನದ ನುಗ್ಗೇಹಳ್ಳಿಯಲ್ಲಿ ಮಾತನಾಡಿದರು. ಹೋಬಳಿಯ ಹೊನ್ನ ಮಾರನಹಳ್ಳಿ ಬಳಿ ಇರುವ ಕೋಟೆಮನೆ ಇಂಟರ್‌ನ್ಯಾಷನಲ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ ಕೋಟೆ ಮನೆ ಕಲೋತ್ಸವ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪೋಷಕರು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮನೆಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ತರಲು ಎಷ್ಟು ಆಸಕ್ತಿ ವಹಿಸುತ್ತಾರೆಯೋ ಅದೇ ರೀತಿ ಮನೆಗೆ ಒಂದು ಕನ್ನಡ ದಿನಪತ್ರಿಕೆ ತರಿಸಬೇಕು. ಒಂದು ಪುಟ್ಟ ಗ್ರಂಥಾಲಯವನ್ನು ತೆರೆದು ಮಕ್ಕಳು ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಿದರೆ ಅವರಲ್ಲಿ ಜ್ಞಾನಾರ್ಜನೆಯ ಜತೆಗೆ ಮಾನವೀಯ ಮೌಲ್ಯಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ ಎಂದು ಸಲಹೆ ನೀಡಿದರು.

‘ನಮ್ಮ ದೇಶದ ಸುಂದರ ಸಂವಿಧಾನವನ್ನು ವಿಶ್ವ ವ್ಯಾಪಿ ಆವರಿಸಿಕೊಂಡರೆ ಕಲಹಗಳು ನಿಲ್ಲಲಿವೆ. ನಾನು ಓದಿದ ಹುಟ್ಟೂರಿನ ಕನ್ನಡ ಮಾಧ್ಯಮ ಶಾಲೆ ಮುಚ್ಚುವ ಹಂತದಲ್ಲಿತ್ತು. ಇಂಗ್ಲಿಷ್ ಮಾಧ್ಯಮ ತೆರೆಯುವ ಮೂಲಕ ಶಾಲೆ ಉಳಿದಿದೆ. ಮಕ್ಕಳಿಗಿಂತ ಪೋಷಕರಲ್ಲಿರುವ ಅತಿಯಾದ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಶಾಲೆಗಳು ಮುಚ್ಚಲು ಕಾರಣವಾಗಿದೆ. ಪ್ರತಿ ವರ್ಷದ ಯುಗಾದಿ ದಿನದಂದು ನನ್ನ ಹುಟ್ಟೂರು ನಾಗತಿಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಸಂಸ್ಕೃತಿ ಉತ್ಸವವನ್ನು ನಡೆಸುತ್ತ ಬಂದಿದ್ದು ಈ ವರ್ಷದ ಯುಗಾದಿಗೆ 20ನೇ ವರ್ಷ ಪೂರೈಸಲಿದೆ’ ಎಂದು ತಿಳಿಸಿದರು.

ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯವನ್ನು ಸ್ವಚ್ಛಗೊಳಿಸುವುದು ತಪ್ಪು ಆದರೆ ಅದೇ ಶಾಲೆ ಆವರಣದಲ್ಲಿ ಗಿಡಮರಗಳನ್ನು ಬೆಳೆಸುವುದರಿಂದ ಮಕ್ಕಳಿಗೆ ಶುದ್ಧ ಗಾಳಿಯ ಜೊತೆಗೆ ಸಿಹಿಯಾದ ಹಣ್ಣುಗಳು ಕೂಡ ಸಿಗುತ್ತವೆ ಎಲ್ಲಾ ಕೆಲಸದಲ್ಲೂ ತಪ್ಪು ಹುಡುಕುವುದನ್ನು ನಾವು ಬಿಡಬೇಕು ಎಂದರು.

ಶಾಸಕ ಸಿಎನ್ ಬಾಲಕೃಷ್ಣ ಮಾತನಾಡಿ, ಕೋಟೆಮನೆ ಇಂಟರ್ ನ್ಯಾಷನಲ್ ಸ್ಕೂಲ್ ಕಳೆದ 2 ವರ್ಷಗಳ ಹಿಂದೆ ಪ್ರಾರಂಭಗೊಂಡಿದೆ. ತನ್ನ ಕಡಿಮೆ ಅವಧಿಯಲ್ಲೇ ಮಕ್ಕಳ ಹಾಗೂ ಪೋಷಕರ ವಿಶ್ವಾಸ ಗಳಿಸಿದೆ. ತಾಲೂಕಿನಲ್ಲಿ ಕಲೆ ಸಾಹಿತ್ಯ ಜನಪದ ಸಾಂಸ್ಕೃತಿಕ ಕ್ಷೇತ್ರಕ್ಕೆ ತಾವು ಹೆಚ್ಚು ಒತ್ತು ನೀಡುವ ಮೂಲಕ ಉಳಿಸಿ ಬೆಳೆಸುವ ಕೆಲಸವನ್ನು ಮಾಡಲಾಗುತ್ತಿದೆ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಅವರ ಒಂದೊಂದು ಚಲನಚಿತ್ರಗಳು ಮನುಷ್ಯನ ಒಂದೊಂದು ಭಾವನೆಗಳನ್ನು ತೋರುವ ಚಿತ್ರಗಳಾಗಿವೆ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದದ್ದು ಅವರ ಸೇವೆಯನ್ನು ಸರ್ಕಾರ ಗುರುತಿಸಬೇಕು ಎಂದು ಒತ್ತಾಯಿಸಿದರು.

ಪ್ರೊಫೆಸರ್ ಲೋಲಾಕ್ಷಿ ಮತ್ತು ಶಾಸಕ ಸಿಎನ್ ಬಾಲಕೃಷ್ಣ ಅವರನ್ನು ಕೋಟೆಮನೆ ಎಜುಕೇಶನ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಪ್ರಸ್ತುತ ಎಲ್ ಕೆ ಜಿ ಇಂದ 5ನೇ ತರಗತಿವರೆಗೆ ಓದುತ್ತಿರುವ ಉತ್ತಮ ವಿದ್ಯಾರ್ಥಿಗಳಿಗೆ ನೀಡುವ ಪ್ರಶಸ್ತಿಯನ್ನು 2023 -24ನೇ ಶೈಕ್ಷಣಿಕ ವರ್ಷದ ಶ್ರೇಷ್ಠ ವಿದ್ಯಾರ್ಥಿಗಳಾದ ಉಚಿತ್ ಚೌದ್ರಿ, ಭೂಮಿಕಾ, ಜ್ಞಾನಶ್ರೀ, ದಿಶಾ, ಗುಣ ಶ್ರೀ, ಕನಕಲಕ್ಷ್ಮಿ, ಧನ್ಯ, ಚಿರಂತ್, ರಚನಾ ಕೋಟೆಮನೆ, ದೀಕ್ಷಿತ್ ಅವರಿಗೆ ವಿಶೇಷ ಬಹುಮಾನ ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಲಾಯಿತು.

ಪ್ರೊಫೆಸರ್ ಲೋಲಾಕ್ಷಿ, ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಗಂಗಾಧರೇಗೌಡ, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದೊರೆಸ್ವಾಮಿ, ಬೆಂಗಳೂರು ಇಎಸ್ಐ ಆಸ್ಪತ್ರೆ ಮೆಡಿಕಲ್ ಆಫೀಸರ್ ಡಾ. ಎಚ್ ಬಿ ನಾಗೇಶ್, ಕೋಟೆಮನೆ ಇಂಟರ್ ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ ಮಧು ಕುಮಾರ್, ಪ್ರಾಂಶುಪಾಲೆ ಪವಿತ್ರಾ ಮಧು ಕುಮಾರ್, ಉದ್ಯಮಿ ಸಿಬಿ ಶಂಕರ್, ಲಕ್ಷ್ಮಣ್, ಗೌಡಕಿ ಮಂಜು ಹಾಜರಿದ್ದರು.ಕೋಟೆ ಮನೆ ಕಲೋತ್ಸವ 2024 ಕಾರ್ಯಕ್ರಮವದಲ್ಲಿ ಸಾಹಿತಿ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

Share this article