ಶಾಸಕರೇ ಕೊಟ್ಟ ಅಧಿಕಾರವನ್ನು ಹಿಡಿತದಲ್ಲಿಟ್ಟುಕೊಳ್ಳಿ: ರೈತ ಸಂಘ ಸಲಹೆ

KannadaprabhaNewsNetwork | Published : Aug 26, 2024 1:35 AM

ಸಾರಾಂಶ

ರೈತ ಸಂಘದಲ್ಲಿ ಗುಂಪುಗಾರಿಗೆ ಶುರುವಾಗಿ, ಒಬ್ಬಕಾರ್‍ಯಕರ್ತ ಮತ್ತೊಬ್ಬ ಕಾರ್‍ಯಕರ್ತನನ್ನು ಮಾತನಾಡಿಸದ ಸ್ಥಿತಿಗೆ ಎದುರಾಗಿದೆ. ಕಳೆದ ನಾಲ್ಕು ವರ್ಷಗಳ ಕಾಲ ಯಾವುದೇ ಮುಂಚೂಣಿ ನಾಯಕರು ಇಲ್ಲದಿದ್ದರೂ ಹೋರಾಟ ಮಾಡಿ ಸಂಘಟಿಸಿದ್ದೇವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮೇಲುಕೋಟೆ ಕ್ಷೇತ್ರದಲ್ಲಿ ಶಾಸಕರು ಒಬ್ಬರ ಅಥವಾ ಇಬ್ಬರು ಇದ್ದಾರಾ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಕೊಟ್ಟ ಅಧಿಕಾರವನ್ನು ಶಾಸಕರು ಹಿಡಿತದಲ್ಲಿ ಇಟ್ಟುಕೊಂಡು ಜನ ಸಾಮಾನ್ಯರ ಕೆಲಸ ಮಾಡಬೇಕು ಎಂದು ರೈತ ಸಂಘದ ಕಾರ್‍ಯಕರ್ತ ತುಳಿಸಿದಾಸ್ ಶಾಸಕ ದರ್ಶನ್‌ ಪುಟ್ಟಣ್ಣಯ್ಯರಿಗೆ ಸಲಹೆ ನೀಡಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಪಕ್ಷ ಸಂಘಟನೆ ವಿಚಾರವಾಗಿ ನಡೆದ ಬೃಹತ್‌ ರೈತಸಂಘದ ಕಾರ್‍ಯಕರ್ತರ ಸಭೆಯಲ್ಲಿ ದೂರಿನ ಸುರಿ ಮಳೆಗೈದರು. ಈ ಹಿಂದೆ ರೈತಸಂಘ ಕ್ಷೇತ್ರದಲ್ಲಿ ಸಾಕಷ್ಟು ಬಲಿಷ್ಠವಾಗಿತ್ತು. ಈಗ ಅಷ್ಟು ಬಲಿಷ್ಟವಾಗಿಲ್ಲ ಎಂದರು.

ಅಧಿಕಾರಿಗಳು ರೈತ ಸಂಘದ ಕಾರ್‍ಯಕರ್ತರನ್ನು ಕಂಡರೆ ಭಯಪಡುವ ವಾತಾವರಣವಿತ್ತು. ಈಗ ರೈತ ಸಂಘಟನೆಯ ಸಾಮರ್ಥ್ಯ ಕುಸಿದಂತೆ ಕಾಣುತ್ತಿದೆ. ಜನತೆ ನಿಮ್ಮನ್ನು ಚುನಾವಣೆಯಲ್ಲಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಜನರುಕೊಟ್ಟ ಅಧಿಕಾರ ನಿಮ್ಮ ಹಿಡಿತದಲ್ಲಿ ಇರಬೇಕೆ ಹೊರತು ನಿಮ್ಮ ಕುಟುಂಬದವರ ಕೈಯಲಲ್ಲ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ಸೋದರನ ವಿರುದ್ಧ ಆಕ್ರೋಶ ಹೊರಹಾಕಿದರು.

ರೈತ ಮುಖಂಡ ಚಿಕ್ಕಾಡೆ ಹರೀಶ್ ಮಾತನಾಡಿ, ರೈತ ಸಂಘದಲ್ಲಿ ಗುಂಪುಗಾರಿಗೆ ಶುರುವಾಗಿ, ಒಬ್ಬಕಾರ್‍ಯಕರ್ತ ಮತ್ತೊಬ್ಬ ಕಾರ್‍ಯಕರ್ತನನ್ನು ಮಾತನಾಡಿಸದ ಸ್ಥಿತಿಗೆ ಎದುರಾಗಿದೆ. ಕಳೆದ ನಾಲ್ಕು ವರ್ಷಗಳ ಕಾಲ ಯಾವುದೇ ಮುಂಚೂಣಿ ನಾಯಕರು ಇಲ್ಲದಿದ್ದರೂ ಹೋರಾಟ ಮಾಡಿ ಸಂಘಟಿಸಿದ್ದೇವೆ ಎಂದರು.

ತಾಲೂಕು ಕಮಿಟಿ ಪುನರ್ ವಿಂಗಡೆ ಮಾಡದೆ ಕಳೆದ ಒಂದೂವರೆ ವರ್ಷದಿಂದಲೂ ಕಾಲಹರಣ ಮಾಡಿದ್ದೀರಾ. ಅಧಿಕಾರ ಇದ್ದಾಗ ಸಾಕಷ್ಟು ಜನ ಬರುತ್ತಾರೆ. ಅಧಿಕಾರ ಇಲ್ಲದೆ ಇರುವಾಗ ನಿಮ್ಮೊಂದಿಗೆ ಎಷ್ಟು ಮಂದಿ ಇದ್ದರು ಎನ್ನುವುದನ್ನು ಶಾಸಕರು ಅಥೈಸಿಕೊಳ್ಳಬೇಕು. ಗುಂಪುಗಾರಿಕೆಗೆ ಅವಕಾಶ ನೀಡಬೇಡಿ ಎಂದು ಆಗ್ರಹಿಸಿದರು.ಕ್ಷೇತ್ರದಲ್ಲಿ ಅಧಿಕಾರಿಗಳನ್ನು ಹಿಡಿತಕ್ಕೆ ಹಿಡಿದುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಾ. ಅಧಿಕಾರಿಗಳು ಶಾಸಕರ ಮಾತಿಗೆ ಕಿಮ್ಮತ್ತು ಬೆಲೆ ಕೊಡುತ್ತಿಲ್ಲ. ತಾಲೂಕು ಕಚೇರಿ, ತಾಪಂ, ಪುರಸಭೆ ಸೇರಿದಂತೆ ಎಲ್ಲಾ ಕಡೆ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರು.

ಸತ್ತ ವ್ಯಕ್ತಿಯ ಹೆಸರಿನಲ್ಲಿ ಛಾಪಕಾಗ ತೆಗೆದು ಆರ್‌ಟಿಸಿ ರದ್ದು ಮಾಡುವ ಅಧಿಕಾರಿಗಳಿದ್ದಾರೆ. ಇದನ್ನು ಪ್ರಶ್ನಿಸಿದರೆ ನಮ್ಮೊಬ್ಬರನ್ನು ಯಾಕೆ ಪ್ರಶ್ನಿಸುತ್ತೀರಾ ಬಹುತೇಕ ಅಧಿಕಾರಿಗಳು ಲಂಚ ಪಡೆದು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳೇ ನೇರವಾಗಿ ಹೇಳುತ್ತಾರೆ ಎಂದರು.

ಲಂಚಕೊಡದೆ ಸರ್ಕಾರಿ ಕಚೇರಿಯಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ. ಶಾಸಕರಾದ ನೀವುಗಳು ಶಾಸಕಾಂಗದ ಕೆಲಸ ಮಾಡಬೇಕೆ ಹೊರತು ಅಧಿಕಾರಿಗಳು ಮಾಡುವ ಕಾರ್‍ಯಾಂಗದ ಕೆಲಸ ಮಾಡಬೇಡಿ. ಅಮೆರಿಕಾ ಶೈಲಿಯಲ್ಲಿ ನೀವು ಅಧಿಕಾರಿಗಳಿಗೆ ಗೌರವಕೊಟ್ಟು ಅಧಿಕಾರ ನಡೆಸಲು ಆಗೋದಿಲ್ಲ. ಅಧಿಕಾರಿಗಳು ಜಡ್ಡು ಕಂಡಿದ್ದಾರೆ ಎಂದರು.

ನಿಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯರಂತೆ ಹೆದರಿಸಿ ಜನರ ಕೆಲಸ ಮಾಡದೆ ಹೋದರೆ ಅಧಿಕಾರಿಗಳು ಹಿಡಿತಕ್ಕೆ ಸಿಗೋದಿಲ್ಲ. ತಾಲೂಕಿನಲ್ಲಿ ಸಾಕಷ್ಟು ಸರ್ಕಾರಿ ಭೂಮಿ ಕಬಳಿಕೆ ಮಾಡಿದ್ದಾರೆ. ಅವುಗಳ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಬೇಕು. ಶಾಸಕರು ರೈತಸಂಘದಲ್ಲಿ ಇರುವ ಗುತ್ತಿಗೆದಾರರು ಹಾಗೂ ಹೋರಾಟಗಾರರನ್ನು ಬೇರ್ಪಡಿಸಿ ಕೆಲಸ ಮಾಡಬೇಕು. ಮಸ್ಯೆ ಹೊತ್ತು ಬರುವ ಜನಸಾಮಾನ್ಯ ಕೈಗೆ ಸಿಗಬೇಕು ಎಂದರು.

ಚುನಾವಣೆಯಲ್ಲಿ ದುಡಿದ ಕಾರ್‍ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಮೊದಲು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ ಕೆಲಸ ಮಾಡಿ ಬಹುತೇಕಕಾರ್‍ಯಕರ್ತರು ಶಾಸಕ ದರ್ಶನ್‌ಪುಟ್ಟಣ್ಣಯ್ಯರನ್ನು ಪ್ರಶ್ನಿಸಿ ಹಲವು ಸಲಹೆ ನೀಡಿದರು.

ಒಗ್ಗಟ್ಟಿನಿಂದ ಸಂಘಟನೆ ಬಲಪಡಿಸಿ:

ನಂತರ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ಸಾವಿರಾರು ಹೋರಾಟಗಾರರ ಶ್ರಮದ ಫಲವಾಗಿ ರೈತ ಸಂಘಟನೆ ಹುಟ್ಟಿಕೊಂಡಿದೆ. ಎಲ್ಲರೂ ಒಗ್ಗಟ್ಟಿನಿಂದ ರೈತಸಂಘವನ್ನು ಕಟ್ಟಿಬೆಳೆಸುವ ಜತೆಗೆ ರಾಜ್ಯ, ಜಿಲ್ಲಾ, ತಾಲೂಕು ಕಮಿಟಿಗಳನ್ನು ಬದಲಾಗಿಸಿ ಹೊಸ ಕಮಿಟಿ ರಚಿಸಲಾಗುವುದು, ಹೋಬಳಿ, ಗ್ರಾಮ ಮಟ್ಟದಲ್ಲೂ ಕಮಿಟಿ ತೆರೆದು ಸಂಘಟನೆಗೆ ಬಲ ತುಂಬಲಾಗುವುದು ಎಂದರು.

ನಾನು ಮೊದಲು ಹೇಳಿದಂತೆ ನನ್ನ ಆದ್ಯತೆ ಸಂಘಟನೆ, ಕೆಲವು ವೈಯುಕ್ತಿಕ ಸಮಸ್ಯೆಗಳಿಂದಾಗಿ ನಾನು ಅಮೆರಿಕಾಗೆ ಹೋಗಿ ಬರುತ್ತೇನೆ ಅಷ್ಟೆ. ಮುಂದಿನ ದಿನಗಳಲ್ಲಿ ಹೋರಾಟ ಶಕ್ತಿ, ಧ್ವನಿಯನ್ನು ಹೆಚ್ಚಿಸಿ ಕೆಲಸ ಮಾಡುತ್ತೇನೆ ಎಂದರು.

ರೈತರ ಸಮಸ್ಯೆಗಳಾದ ಬೆಲೆ ನಿಗಧಿ, ಪರಿಹಾರ, ಮೈಸೂರು ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು, ರೈತರಿಗೆ ತರಬೇತಿ, ಆಯ್ಕೆ ಶಾಲೆಗಳ ಅಭಿವೃದ್ದಿ, ಸರಕಾರಿ ಆಸ್ಪತ್ರೆಯಲ್ಲಿ ಐಸಿಯು ಘಟಕ ನಿರ್ಮಾಣ ಸೇರಿದಂತೆ ಕ್ಷೇತ್ರದ ಅಭಿವೃದ್ದಿ ಹಲವು ಕಾರ್‍ಯಕ್ರಮ ರೂಪಿಸಿಕೊಂಡಿದ್ದೇನೆ ಎಂದರು.

ಸಭೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ನಾಗರಾಜು, ಕೆ.ಎಸ್.ದಯಾನಂದ್, ಕೆ.ಟಿ.ಗೋವಿಂದಗೌಡ, ಜಯರಾಮು ಹಾಜರಿದ್ದರು.

Share this article