- ಡೆಂಘೀ ದಿನಾಚರಣೆ: ಜಾಗೃತಿ ಜಾಥಾಕ್ಕೆ ಚಾಲನೆ - - - ಕನ್ನಡಪ್ರಭ ವಾರ್ತೆ ಹರಿಹರ
ಸಾರ್ವಜನಿಕರು ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿದಾಗ ಮಾತ್ರವೇ ಸೊಳ್ಳೆ ಕಡಿತದಿಂದ ಪಾರಾಗಿ, ಡೆಂಘೀಜ್ವರ ಹಾಗೂ ಚಿಕೂನ್ ಗುನ್ಯಾದಂಥ ಮಹಾಮಾರಿಗಳಿಂದ ಮುಕ್ತರಾಗಲು ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಖಾದರ್ ಹೇಳಿದರು.ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಹರ್ಲಾಪುರದಲ್ಲಿ ರಾಷ್ಟ್ರೀಯ ಡೆಂಘೀ ದಿನ ಅಂಗವಾಗಿ ನಡೆದ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಮಳೆಗಾಲ ಪ್ರಾರಂಭವಾಗಿದ್ದು, ಮಳೆ ನೀರು ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಲ್ಲದಂತೆ ಗಮನಹರಿಸಬೇಕು. ಡೆಂಘೀಬಾಧೆ ನಿವಾರಣೆಗೆ ಇದು ಅತ್ಯಂತ ಮುಖ್ಯವಾಗಿದೆ. ಘನತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡಲ್ಲಿ ಡೆಂಘೀಜ್ವರದಿಂದ ಪಾರಾಗಲು ಸಾಧ್ಯ ಎಂದು ಸಲಹೆ ನೀಡಿದರು.ಡೆಂಘೀಜ್ವರ ಮತ್ತು ಚಿಕೂನ್ ಗುನ್ಯಾ ಕಾಯಿಲೆ ಈಡಿಸ್ ಮತ್ತು ಈಜಿಪ್ಟೈ ಹೆಸರಿನ ಪ್ರಭೇದಗಳ ಸೊಳ್ಳೆಗಳಿಂದ ಬರುತ್ತವೆ. ಮನೆಯಲ್ಲಿ ನೀರು ಸಂಗ್ರಹ ತೊಟ್ಟಿಗಳು, ಬ್ಯಾರಲ್, ಡ್ರಂಗಳು ಮತ್ತಿತರ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಮುಚ್ಚಿಟ್ಟಿರಬೇಕು. ಆಗಾಗ ಸ್ವಚ್ಛಗೊಳಿಸಬೇಕು. ಇದರಿಂದ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಲು ಸಹಕಾರಿಯಾಗಲಿದೆ ಎಂದರು.
ನೀರು ಶೇಖರಣ ವಸ್ತುಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಫ್ರಿಡ್ಜ್ ಹಿಂಭಾಗ, ಹೂ ಕುಂಡ ಮತ್ತು ಹೂ ಕುಂಡದ ಕೆಳಗಿನ ತಟ್ಟೆಗಳಲ್ಲಿ ಶೇಖರಣೆಯಾಗುವ ನೀರನ್ನು ನಿಯಮಿತವಾಗಿ ಖಾಲಿ ಮಾಡಿ, ಸ್ವಚ್ಛತೆ ಕಾಪಾಡಿಕೊಳ್ಳಬೇಕು. ರಾತ್ರಿ ಅಥವಾ ಹಗಲು ಮಲಗುವಾಗ ಸೊಳ್ಳೆ ಪರದೆ ಅಥವಾ ಸೊಳ್ಳೆ ನಿರೋಧಕ ವರ್ಧಕಗಳನ್ನು ಉಪಯೋಗಿಸುವುದು ಸೂಕ್ತ ಎಂದು ಸಲಹೆ ನೀಡಿದರು.ಡಾ. ಜೆ.ಸಿ.ಕಲ್ಲೇಶ್, ಆರೋಗ್ಯ ಇಲಾಖೆಯ ಎಂ.ಉಮ್ಮಣ್ಣ, ನಾಗರಾಜ್, ಸುಧಾ ಪಿ. ಸುಲಾಕೆ, ಪಿ.ಎಚ್. ಶಶಿಕಾಂತ, ಆಶಾ, ಕವಿತಾ, ವಸಂತ ಭಾರ್ಕಿ, ಗೀತಾ, ಮಂಜುನಾಥ್, ರಾಘವೇಂದ್ರ, ರಂಗನಾಥ್, ತಿಪ್ಪೇಸ್ವಾಮಿ, ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
- - - -೧೮ಎಚ್‌ಆರ್‌ಆರ್೧:ಹರಿಹರದಲ್ಲಿ ರಾಷ್ಟ್ರೀಯ ಡೆಂಘೀ ದಿನ ಅಂಗವಾಗಿ ನಡೆದ ಜಾಗೃತಿ ಜಾಥಾಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಖಾದರ್ ಚಾಲನೆ ನೀಡಿದರು.