ಕನ್ನಡಪ್ರಭ ವಾರ್ತೆ ಶಿರಸಿ
ಮನೆ ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಜಿ.ಟಿ. ಭಟ್ಟ ಹೇಳಿದರು.ನಗರದ ಅಕ್ಷಯ ಗಾರ್ಡನ್‌ನಲ್ಲಿ ಬುಧವಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಪಂ ಮತ್ತು ಜಿಪಂ, ಹುತ್ಗಾರ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹುತ್ತಗಾರ ಪಂಚಾಯತ ಹಬ್ಬ ಹಾಗೂ ಸ್ವಯಂ ಪ್ರೇರಿತ ಸ್ವಚ್ಛತಾ ಅರಿವು ಕಾರ್ಯಕ್ರಮದಲ್ಲಿ ಸ್ವಚ್ಛತೆ ಬಗ್ಗೆ ಅರಿವು ವಿಷಯದ ಕುರಿತು ಮಾತನಾಡಿದರು.ಗ್ರಾಪಂ ಎಂದರೆ ಸ್ವಯಂ ಆಡಳಿತ ಸಂಸ್ಥೆಯಾಗಿದ್ದು, ಗ್ರಾಮವನ್ನು ಹೇಗೆ ಅಭಿವೃದ್ಧಿಪಡಿಸಬೇಕು. ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ನಿರ್ಧಾರ ಕೈಗೊಳ್ಳುವ ಅಧಿಕಾರವಿದೆ. ಸ್ವಚ್ಛತೆಗಳಲ್ಲಿ ಅನೇಕ ವಿಧಾನಗಳಿವೆ. ಭಾರತದಲ್ಲಿ ಪ್ರತಿ ನಿತ್ಯ 2 ಕೋಟಿ ಟನ್ ತ್ಯಾಜ್ಯ ಸಂಗ್ರಹಿಸಲಾಗುತ್ತದೆ. ಮನೆಯ ಜತೆ ಮನವನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು. ಹುತ್ಗಾರ ಗ್ರಾಪಂ ಅಧ್ಯಕ್ಷ ಶ್ರೀಧರ ನಾಯ್ಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.ದಿವಗಿ ಫ್ಯಾಕ್ಟರಿ ಮ್ಯಾನೇಜರ್ ಮಂಜುನಾಥ ಕೆ.ಎನ್. ಮಾನವ ಸಂಪನ್ಮೂಲದ ಕುರಿತು ಮಾಹಿತಿ ನೀಡಿ, ಮಾನವ ಸಂಪನ್ಮೂಲಗಳ ರಕ್ಷಣೆಗೆ ನಾವು ಮುಂದಾಗಬೇಕು. ನಮ್ಮ ದೇಶದ ಸಂಪತ್ತು ಅಭಿವೃದ್ಧಿಯಾಗಬೇಕು ಎಂದರು.ಉದ್ಯಮಿ ಪ್ರದೀಪ ಶೆಟ್ಟಿ ಮಾತನಾಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ, ಉಪಾಧ್ಯಕ್ಷೆ ಶೋಭಾ ನಾಯ್ಕ, ಸದಸ್ಯರಾದ ನಾಗರಾಜ ಮುಕ್ರಿ, ಹೇಮಲತಾ ಮಡಿವಾಳ, ರವಿ ನಾಯ್ಕ, ಗಜಾನನ ಮೊಗೇರ, ಪವಿತ್ರ ಡಯಾಸ್, ಮಾದೇವಿ ನಾಯ್ಕ, ಸುಧಾಬಾಯಿ ಭಟ್, ಫಕೀರಪ್ಪ ಬಾರ್ಕಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವಕುಮಾರ.ಎಂ.ಪಿ ಮತ್ತಿತರರು ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮಕ್ಕೂ ಮೊದಲು ಹುತ್ಗಾರ ಗ್ರಾಪಂದಿಂದ ಅಕ್ಷಯ ಗಾರ್ಡನ್ ವರೆಗೆ ಸ್ವಚ್ಛತಾ ಅರಿವು ಜಾಥಾ ನಡೆಯಿತು. ನೂರಾರು ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಡೊಳ್ಳು ಕುಣಿತ ಹಾಗೂ ಯಕ್ಷಗಾನ ವೇಷಧಾರಿಗಳು ಮೆರವಣಿಗೆಗೆ ಮೆರಗು ತಂದರು. ಆರೋಗ್ಯ ಸೂತ್ರದ ಬಗ್ಗೆ ಡಾ. ವೆಂಕಟ್ರಮಣ ಹೆಗಡೆ ನಿಸರ್ಗಮನೆ ಮಾಹಿತಿ ನೀಡಿದರು. ನಂತರ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪಂಚಾಯತ ಅಭಿವೃದ್ಧಿ ಅಧಿಕಾರಿ ಗ್ರಾಪಂ ಕುರಿತು ಕಿರು ಪರಿಚಯ ಮಾಡಿದರು.