ಹೊಸಪೇಟೆ: ಮದ್ಯಪಾನ, ಮಾದಕವಸ್ತು, ತಂಬಾಕು ವಸ್ತುಗಳ ಸೇವನೆಯು ಆರೋಗ್ಯಕ್ಕೆ ಹಾನಿಕರವಾಗಿದೆ. ಇದನ್ನರಿತು ವಿದ್ಯಾರ್ಥಿ ಯುವಜನರು ಸೇರಿದಂತೆ ಪ್ರತಿಯೊಬ್ಬರು ವ್ಯಸನಮುಕ್ತರಾಗಿ ಮುನ್ನುಗ್ಗಬೇಕು ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಹೇಳಿದರು.
ಅಜ್ಞಾನದ ಕಾರಣದಿಂದಲು ಸಹ ಬಹುತೇಕರು ಒಂದಿಲ್ಲೊಂದು ದುಶ್ಚಟಕ್ಕೆ ಒಳಗಾಗಿರುತ್ತಾರೆ. ಜೀವಕ್ಕೆ ಹಾನಿ ಎಂದು ಗೊತ್ತಿದ್ದು ಬಹುತೇಕರು ಕೆಟ್ಟ ಚಟಗಳಿಗೆ ಬಲಿಯಾಗುತ್ತಾರೆ. ಇದರಿಂದ ವ್ಯಕ್ತಿಯೊಬ್ಬರಷ್ಟೇ ಅಲ್ಲ ಇಡೀ ಕುಟುಂಬದ ಸ್ವಾಸ್ಥ್ಯ ಹಾಳಾಗುವುದು, ವಿಪರ್ಯಾಸದ ಸಂಗತಿಯಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರ ಆರೋಗ್ಯವು ಸಹ ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ವಯಸ್ಸಿನ ಮೀತಿಯಿಲ್ಲದೇ ದುಶ್ಚಟಗಳಿಗೆ ದಾಸರಾಗುವುದನ್ನು ತಡೆಯುವ ಕೆಲಸವು ನಿರಂತರವಾಗಿ ನಡೆಯಬೇಕು. ದುರಾಭ್ಯಾಸವಿದ್ದಲ್ಲಿ ವಿದ್ಯೆಯು ಸಹ ತಲೆಗೆ ಹತ್ತುವುದಿಲ್ಲ. ಇದನ್ನು ವಿದ್ಯಾರ್ಥಿ ಯುವಜನರು ಅರಿಯಬೇಕು. ನಾನು ಈ ದಿನದಿಂದ ಯಾವುದೇ ದುಶ್ಚಟ ಮಾಡಲಾರೆ ಎಂದು ಸಂಕಲ್ಪ ಮಾಡುವ ಮನೋಭಾವ ಬೆಳೆಸಿಕೊಂಡಲ್ಲಿ ಉತ್ತಮ ಆರೋಗ್ಯ ಮತ್ತು ನೆಮ್ಮದಿ ಸಾಧ್ಯವಾಗಲಿದೆ ಎಂದರು.ವಿಶೇಷ ಉಪನ್ಯಾಸಕರಾಗಿ ಹಿಟ್ನಾಳ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಸವರಾಜ ಟಿ.ಎಚ್. ಮಾತನಾಡಿ, ದೇಶದ ಶ್ರೇಯೋಭಿವೃದ್ಧಿ ಎಂದರೆ ಅದು ಪ್ರಜೆಗಳ ಆರೋಗ್ಯ ಆಗಿರುತ್ತದೆ. ಅನ್ನ, ಆಶ್ರಯ, ಶಿಕ್ಷಣ ಮತ್ತು ಆರೋಗ್ಯ ಕೊಡುವುದು ಸಹ ಸರ್ಕಾರದ ಆದ್ಯತೆಯ ಕಾರ್ಯವಾಗಿರುವುದರ ಹಿಂದಿನ ಸಮಾಜಹಿತದ ಉದ್ದೇಶವನ್ನು ಅರಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಎಸಿ ವಿವೇಕಾನಂದ ಪಿ., ಎಎಸ್ಪಿ ಸಲೀಂ ಪಾಷಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರಪ್ಪ ಕೆ.ಬಿ., ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆಯ ಅಧಿಕಾರಿ ಅವಿನಾಶ ಗೋಟಖಿಂಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಮತ್ತಿತರರಿದ್ದರು.