ಒಂದೂವರೆ ವರ್ಷದಲ್ಲಿ ಕೆಮ್ಮಣ್ಣುನಾಲೆ ಆಧುನೀಕರಣ ಕಾರ್ಯ ಪೂರ್ಣ: ಕೆ.ಎಂ.ಉದಯ್

KannadaprabhaNewsNetwork |  
Published : May 13, 2025, 01:44 AM IST
9ಕೆಎಂಎನ್ ಡಿ23 | Kannada Prabha

ಸಾರಾಂಶ

95 ಕ್ಯುಸೆಕ್ ನೀರಿನ ಸಾಮರ್ಥ್ಯ ಹೊಂದಿರುವ ನಾಲೆಯಿಂದ ಸುಮಾರು 3,123 ಎಕರೆ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರಿನ ಸೌಲಭ್ಯ ದೊರಕಲಿದೆ. ನಾಲೆ ಆಧುನೀಕರಣ ಕಾಮಗಾರಿಯಲ್ಲಿ ಮದ್ದೂರು ಪಟ್ಟಣದ 4.08 ಕಿಲೋಮಿಟರ್ ನಲ್ಲಿ 6.3 ಕಿಲೋಮೀಟರ್ ಕಾಂಕ್ರೀಟ್ ಸ್ಲ್ಯಾಬ್ ಗಳನ್ನು ನಿರ್ಮಿಸಿ ನೀರು ಕಲ್ಮಶ ಆಗದಂತೆ ಕ್ರಮಕೈಗೊಳ್ಳಲಾಗುವುದು. ನಾಲೆಯ ಎರಡು ಭಾಗದಲ್ಲಿ 180 ಅಡ್ಡ ಮೋರಿ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಿಸಿ ಅಭಿವೃದ್ಧಿಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ಮುಂದಿನ ಒಂದೂವರೆ ವರ್ಷದಲ್ಲಿ ಕೆಮ್ಮಣ್ಣುನಾಲೆ ಆಧುನೀಕರಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ಹೇಳಿದರು.

ಪಟ್ಟಣದ ನಗರಕೆರೆ ರಸ್ತೆಯಲ್ಲಿ ಕೆಮ್ಮಣ್ಣು ನಾಲೆ ಆಧುನೀಕರಣ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚಾಲನೆ ನೀಡಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, 1893ರಲ್ಲಿ ನಿರ್ಮಾಣವಾದ ಕೆಮ್ಮಣ್ಣುನಾಲೆ ಮದ್ದೂರು ಕೆರೆ ನೀರಿನ ಆಶ್ರಯವನ್ನು ಹೊಂದಿದೆ ಎಂದರು.

95 ಕ್ಯುಸೆಕ್ ನೀರಿನ ಸಾಮರ್ಥ್ಯ ಹೊಂದಿರುವ ನಾಲೆಯಿಂದ ಸುಮಾರು 3,123 ಎಕರೆ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರಿನ ಸೌಲಭ್ಯ ದೊರಕಲಿದೆ. ನಾಲೆ ಆಧುನೀಕರಣ ಕಾಮಗಾರಿಯಲ್ಲಿ ಮದ್ದೂರು ಪಟ್ಟಣದ 4.08 ಕಿಲೋಮಿಟರ್ ನಲ್ಲಿ 6.3 ಕಿಲೋಮೀಟರ್ ಕಾಂಕ್ರೀಟ್ ಸ್ಲ್ಯಾಬ್ ಗಳನ್ನು ನಿರ್ಮಿಸಿ ನೀರು ಕಲ್ಮಶ ಆಗದಂತೆ ಕ್ರಮಕೈಗೊಳ್ಳಲಾಗುವುದು. ನಾಲೆಯ ಎರಡು ಭಾಗದಲ್ಲಿ 180 ಅಡ್ಡ ಮೋರಿ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಹಲವು ದಶಕಗಳ ಹಿಂದೆ ಕೆಮ್ಮಣ್ಣು ನಾಲೆಯ ನೀರನ್ನು ಪಟ್ಟಣ ಹಾಗೂ ಹಳ್ಳಿಗಳಿಂದ ಬರುತ್ತಿದ್ದ ಜನತೆ ಕುಡಿಯುವ ನೀರನ್ನಾಗಿ ಬಳಸುತ್ತಿದ್ದರು. ಆದರೆ, ಸರ್ಕಾರದ ಅನುದಾನದ ಕೊರತೆ, ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಂದು ಕೆಮ್ಮಣ್ಣು ನಾಲೆ ಸೂಕ್ತ ನಿರ್ವಹಣೆ ಇಲ್ಲದೇ ಪಟ್ಟಣದ ದೊಡ್ಡ ಚರಂಡಿಯಾಗಿದ್ದು, ಜನತೆ ಮೂಗುಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದರು.

ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಸಾರ್ವಜನಿಕರು ನಾಲಾ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳ ಬಳಿ ನೂರಾರು ಬಾರಿ ಮನವಿ, ಪ್ರತಿಭಟನೆ ನಡೆಸಿ ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ತಾವು ವಿಧಾನಸಭಾ ಚುನಾವಣೆಗೂ ಮುನ್ನ ಕೆಮ್ಮಣ್ಣು ನಾಲೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕೊಟ್ಟ ಮಾತನ್ನು ಈಡೇರಿಸುವ ಮೂಲಕ ರೈತರ ಬೆನ್ನೆಲುಬಾಗಿ ನಿಂತಿರುವುದಾಗಿ ಹೇಳಿದರು.

ಅಂದಾಜು 90 ಕೋಟಿ ರು. ವೆಚ್ಚದಲ್ಲಿ ಕೆಮ್ಮಣ್ಣು ನಾಲೆಯ ಆಧುನೀಕರಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿದರು.

ನಾನು ಶಾಸಕನಾದರೆ ಜನರ ಕೈಗೆ ಮೊದಲೇ ಸಿಗೋದಿಲ್ಲ ಎಂದು ಕೆಲವರು ನನ್ನ ಬಗ್ಗೆ ಟೀ ಅಂಗಡಿ, ಬಾರ್ ಗಳಲ್ಲಿ ಕುಹಕದ ಮಾತುಗಳನ್ನು ಆಡುತ್ತಿದ್ದರು. ಆದರೆ, ಕೇವಲ 2 ವರ್ಷಗಳಲ್ಲೇ ಜನತೆಗೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಾ ಕ್ಷೇತ್ರದ ಅಭಿವೃದ್ಧಿಗೆ 1 ಸಾವಿರ ಕೋಟಿಗೂ ಅಧಿಕ ವಿಶೇಷ ಅನುದಾನ ತಂದು ಸಮರೋಪಾದಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ತಕ್ಕ ಉತ್ತರ ನೀಡಿದ್ದೇನೆ ಎಂದು ತಿರುಗೇಟು ನೀಡಿದರು.

ಪುರಸಭಾ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚೆಲುವರಾಜು, ಅಣ್ಣೂರು ರಾಜೀವ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ್, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಪುರಸಭಾ ಸದಸ್ಯರಾದ ಸಿದ್ದರಾಜು, ಕಮಲ್ ನಾಥ್, ಪ್ರಮೀಳಾ, ರತ್ನಮ್ಮ, ಸರ್ವಮಂಗಳ, ಕಾವೇರಿ ನೀರಾವರಿ ನಿಗಮದ ಇಇ ನಂಜುಂಡೇಗೌಡ, ಎಇಇ ನಾಗರಾಜ್, ಎಇ ದೀಪಕ್, ಪ್ರವೀಣ್ ಮತ್ತಿತ್ತರರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌