ಕನ್ನಡಪ್ರಭ ವಾರ್ತೆ ತುರುವೇಕೆರೆ
ನಾಡಪ್ರಭು ಕೆಂಪೇಗೌಡರ ದೂರದೃಷ್ಠಿಯಿಂದಾಗಿ ಇಂದು ಬೆಂಗಳೂರು ಜಗದ್ವಿಖ್ಯಾತವಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಗುರುವಾರ ತಾಲೂಕು ಆಡಳಿತ, ತಾಲೂಕು ಒಕ್ಕಲಿಗರ ಸಂಘ, ಒಕ್ಕಲಿಗ ನೌಕರರ ಸಂಘ, ಶ್ರೀ ಕಾಲಭೈರವೇಶ್ವರ ಮಹಿಳಾ ಒಕ್ಕಲಿಗರ ಸಂಘ, ಹಾಗೂ ಶ್ರೀ ಕೆಂಪೇಗೌಡ ಯುವಸೇನೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೆಂಪೇಗೌಡರ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಂಪೇಗೌಡರು ಒಂದೇ ಜಾತಿಗೆ, ಸೀಮಿತರಾಗದೆ ಜಾತ್ಯಾತೀತವಾಗಿ ಆಡಳಿತ ನಡೆಸಿದ್ದರು. ನೂರಾರು ವರ್ಷಗಳ ಹಿಂದೆಯೇ ಬೆಂಗಳೂರು ಎಂಬ ಸುಂದರವಾದ ನಗರವನ್ನು ನಿರ್ಮಿಸಿ ಎಲ್ಲ ಸಮುದಾಯದವರಿಗೂ ಪೇಟೆಗಳನ್ನು ನಿರ್ಮಾಣ ಮಾಡಿ ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ಮಾಡಿದ್ದರು. ರೈತಾಪಿ ವರ್ಗದ ಕೃಷಿಗಾಗಿ ಸುಮಾರು 300ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ ಕೀರ್ತಿ ಸಲ್ಲುತ್ತದೆ. ಆದರೆ ಇಂದು ಕೆರೆಕಟ್ಟೆಗಳು ಬಂಡವಾಳಶಾಹಿಗಳ ಕಪಿಮೃಷ್ಠಿಯಲ್ಲಿದೆ ಎಂದು ವಿಷಾದಿಸಿದರು. ಮೈಸೂರಿನ ಉಪನ್ಯಾಸಕ ಡಾ. ಮಂಜುನಾಥ್‌ರವರು ಕೆಂಪೇಗೌಡರ ಕುರಿತು ಮಾತನಾಡಿ ವಿಜಯನಗರ ಭಾಗವಾಗಿದ್ದ ಕೆಂಪೇಗೌಡರನ್ನು ಕೇವಲ ಪಾಳೆಗಾರರು ಎಂದು ಹಲವರು ಹೇಳುತ್ತಾರೆ. ಕೆಂಪೇಗೌಡರು ಯಲಹಂಕ ಸಾಮಂತ ರಾಜರಾಗಿದ್ದರು. ಬೆಂಗಳೂರು ಎಂಬ ಪುಟ್ಟ ಹಳ್ಳಗೆ ಬಂದು ನೆಲೆಸಿ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನೆಡೆಸಿದರು. ಕೆಂಪೇಗೌಡರು ಯುದ್ದಗಳನ್ನು ಮಾಡುವುದಕ್ಕಿಂತ ಶಾಂತಿ ಪ್ರಿಯಾರಾಗಿ ಆಡಳಿತ ನಡೆಸಿದರು.ಪಟ್ಟಣ ತಾಲೂಕು ಕಚೇರಿಯಿಂದ ಬೈಕ್ ರ್‍ಯಾಲಿ ಹಾಗೂ ಪಟ್ಟಣದ ಪ್ರವಾಸಿ ಮಂದಿರದಿಂದ ಕೆಂಪೇಗೌಡರ ಭಾವಚಿತ್ರವನ್ನು ಎತ್ತಿನ ಗಾಡಿಯಲ್ಲಿಟ್ಟು ವಿವಿಧ ಜಾನಪದ ಕಲಾ ಪ್ರಕಾರಗಳಾದ ಕೋಲಾಟ, ಸೋಮನಕುಣಿತ, ಧ್ವಜಕುಣಿತ, ನಗಾರಿ, ಚಿಟ್ಟಮೇಳ ವಾದ್ಯ, ಹುಲಿವೇಷದ ಕುಣಿತದೊಂದಿಗೆ ವೇದಿಕೆವರೆವಿಗೂ ಮೆರವಣಿಗೆ ಮಾಡಲಾಯಿತು. ಕೆಂಪೇಗೌಡರ ವೇಷಧಾರಿಯಾಗಿದ್ದ ಶಂಕರ್ ಎಲ್ಲರ ಗಮನ ಸೆಳೆದರು. ವಿದ್ಯಾರ್ಥಿಗಳು ಮೋಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು.ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ರಂಗಕರ್ಮಿ, ತಿಪ್ಪಣ್ಣ, ಡಾ.ನಾಗರಾಜು, ಇತಿಹಾಸಕರ ಪ್ರೊ.ಪುಟ್ಟರಂಗಪ್ಪ, ಶಿಕ್ಷಣ ತಜ್ಞ ಮಹಾದೇವಯ್ಯ, ಪರಿಸರ ಪ್ರೇಮಿ ರಾಮಣ್ಣರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಹೆಚ್.ಧನಪಾಲ್ ವಹಿಸಿದ್ದರು. ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಬಿಇಒ ಸೋಮಶೇಖರ್, ಪಪಂ ಸದಸ್ಯರಾದ ಸ್ವಪ್ನನಟೇಶ್, ಜಯಮ್ಮ, ಮಧು, ಎನ್.ಸುರೇಶ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಎಂ.ಡಿ.ರಮೇಶ್ ಗೌಡ, ಮುಖಂಡರಾದ ವೆಂಕಟೇಶ್ ಕೃಷ್ಣಪ್ಪ, ಡಿ.ಪಿರಾಜು, ಶ್ರೀನಿವಾಸ್ ಗೌಡ, ಎಂ.ಎನ್.ಚಂದ್ರೇಗೌಡ, ಉಗ್ರೇಗೌಡ, ಆರ್.ಮಲ್ಲಿಕಾರ್ಜುನ್, ರಂಗನಾಥ್, ರಾಜಣ್ಣ ಸೇರಿದಂತೆ ಹಲವು ಮುಖಂಡರಿದ್ದರು.