ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಕೆಂಪೇಗೌಡರ ಜಯಂತಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದ ಕೆಂಪೇಗೌಡರು ವಿಜಯನಗರದ ಜನಪರ ಆಡಳಿತ, ವೈಭವಯುತವಾಗಿ ನಡೆಯುತ್ತಿದ್ದ ವಿಜಯದಶಮಿಯನ್ನು ಕಣ್ತುಂಬಿಕೊಂಡು ವಿಜಯನಗರದಂತಹ ಮತ್ತೊಂದು ನಗರವನ್ನು ಕಟ್ಟಬೇಕೆಂದು ಪಣತೊಟ್ಟು 500 ವರ್ಷಗಳ ಹಿಂದೆಯೇ ಅಡಿಗಲ್ಲು ಹಾಕಿದ್ದರು. ಕರ್ನಾಟಕದ ಕಳಶಪ್ರಾಯವಾಗಿರುವ ಬೆಂಗಳೂರು ಪ್ರಗತಿಗೆ ನಾಡಪ್ರಭು ಕೆಂಪೇಗೌಡರ ಆಡಳಿತ ಕಾರ್ಯವೈಖರಿ ನಮ್ಮೆಲ್ಲರಿಗೂ ಮಾದರಿಯಾಗಿದೆ. ಭಾರತ ಎಂದರೇ ಬೆಂಗಳೂರು ಎನ್ನುವಷ್ಟರಮಟ್ಟಿಗೆ ಬೆಂಗಳೂರು ಬೆಳೆದಿದೆ ಎಂದರು.
ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1510 ಜೂ.27ರಂದು ಜನಿಸಿದ ನಾಡಪ್ರಭು ಕೆಂಪೇಗೌಡ ಅವರು ಸಣ್ಣ ಪಟ್ಟಣವಾಗಿದ್ದ ಬೆಂಗಳೂರನ್ನು ಇಂದು ಪ್ರಪಂಚದಲ್ಲಿ ಅತ್ಯುತ್ತಮ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಳ್ಳುವ ಮಟ್ಟಿಗೆ ಕಟ್ಟಿ ಬೆಳೆಸಿದ್ದಾರೆ. ಬೆಂಗಳೂರಿನಾದ್ಯಂತ ಅನೇಕ ಕೆರೆಕಟ್ಟೆಗಳು, ಉದ್ಯಾನವನಗಳು, ಸಾಕಷ್ಟು ದೇವಸ್ಥಾನಗಳನ್ನು ನಿರ್ಮಿಸಿದ ಕೆಂಪೇಗೌಡ ಅವರ ಜನಪರ ಯೋಜನೆಗಳ ಸಾಧನೆಗಳನ್ನು ಪರಿಗಣಿಸಿ ಸರ್ಕಾರವು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅವರ ಹೆಸರನ್ನಿಟ್ಟಿದೆ. ಇದು ಕೆಂಪೇಗೌಡ ಅವರಿಗೆ ಸಲ್ಲುವ ಗೌರವವಾಗಿದೆ ಎಂದರು.ಮುಖ್ಯ ಭಾಷಣ ಮಾಡಿದ ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವ ವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಎಂ.ಜಿ.ಮಂಜುನಾಥ್ ಮಾತನಾಡಿ, ಬುದ್ಧ, ಡಾ.ಅಂಬೇಡ್ಕರ್, ಬಸವಣ್ಣ ಅವರಂತೆ ನಾಡಪ್ರಭು ಕೆಂಪೇಗೌಡ ಅವರು ಸಮಾಜದ ಎಲ್ಲ ವರ್ಗಗಳ ಜನರನ್ನು ಸರ್ವಸಮನ್ವಯದಿಂದ ಕಂಡರು. ಎಲ್ಲಾ ಸ್ತರಗಳ ಜನರಿಗೂ ಬೆಂಗಳೂರಿನಲ್ಲಿ ಆಶ್ರಯ ನೀಡಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಿಕೊಟ್ಟು ಜನಸಾಮಾನ್ಯರ ಏಳಿಗೆಗೆ ಕಾರಣರಾದರು. ವ್ಯಾಪಾರದ ಅಭಿವೃದ್ಧಿಗಾಗಿ ಬಳೇಪೇಟೆ, ಚಿಕ್ಕಪೇಟೆ, ಮಂಡಿಪೇಟೆ, ಕಾಟನ್ ಪೇಟೆ ಸೇರಿದಂತೆ 35 ಪೇಟೆಗಳನ್ನು ತೆರೆದರು. ಕುಡಿಯುವ ನೀರು ಹಾಗೂ ರೈತಾಪಿ ವರ್ಗದವರ ಕೃಷಿ ಅನುಕೂಲಕ್ಕಾಗಿ 200 ಕೆರೆಗಳನ್ನು ನಿರ್ಮಿಸಿದ ಕೆಂಪೇಗೌಡರು ಬೆಂಗಳೂರಿನ ಅಸ್ತಿತ್ವವಿರುವವರೆಗೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ ಎಂದರು.
ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ, ನಾಡಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕೆಂಪೇಗೌಡ ಅವರು ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದರು. ಪರಿಸರ ಸಂರಕ್ಷಣೆಗೂ ಮಹತ್ವ ನೀಡಿದ್ದರು. ಎಲ್ಲಾ ಧರ್ಮದ ಜನರನ್ನು ಸಮಾನತೆಯಿಂದ ಕಾಣುತ್ತಿದ್ದ ಕೆಂಪೇಗೌಡ ಅವರ ಮೌಲ್ಯಯುತ ಆದರ್ಶ ಗುಣಗಳು ಅನುಕರಣೀಯವಾಗಿವೆ. ವಿಶ್ವಭೂಪಟದಲ್ಲಿ ಬೆಂಗಳೂರು ಚಿರಸ್ಥಾಯಿಯಾಗಲು ಸಮಾಜಮುಖಿಯಾಗಿದ್ದ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ ಎಂದರು.