ಕೆಂಪೇಗೌಡ ಬಂಧನದಲ್ಲಿದ್ದ ಆನೆಗೊಂದಿ ಸೆರೆಮನೆ ಪತ್ತೆ

KannadaprabhaNewsNetwork |  
Published : Jun 27, 2024, 01:05 AM IST
26 ಜಿಎನ್್ ಜಿ 1 ರಿಂದ 4 | Kannada Prabha

ಸಾರಾಂಶ

ನಾಡಪ್ರಭು, ಆಧುನಿಕ ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರು ಬಂಧನದಲ್ಲಿದ್ದ ಸೆರೆಮನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಪತ್ತೆಯಾಗಿದೆ.

ವಿಜಯನಗರ ಕಾಲದ ಸೆರೆಮನೆ । ಜಿಂಜರ ಬೆಟ್ಟದಲ್ಲಿ ಕೆಂಪೇಗೌಡರ ಕುರುಹಗಳು ಲಭ್ಯ

ರಾಮಮೂರ್ತಿ ನವಲಿ

ಕನ್ನಡಪ್ರಭ ವಾರ್ತೆ ಗಂಗಾವತಿ

ನಾಡಪ್ರಭು, ಆಧುನಿಕ ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರು ಬಂಧನದಲ್ಲಿದ್ದ ಸೆರೆಮನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಪತ್ತೆಯಾಗಿದೆ.

ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಹಲವಾರು ವರ್ಷಗಳಿಂದ ನಡೆಸಿದ ನಿರಂತರ ಶೋಧನೆಯಲ್ಲಿ ಅಂತಿಮವಾಗಿ ಆನೆಗೊಂದಿಯ ಜಿಂಜರ ಬೆಟ್ಟದಲ್ಲಿ ಸೆರೆಮನೆ ಪತ್ತೆ ಹಚ್ಚಿದ್ದಾರೆ.

ವಿಜಯನಗರ ಸಾಮ್ರಾಜ್ಯದ ನಿಷ್ಠಾವಂತ ಮಾಂಡಲಿಕನಾಗಿದ್ದ ಯಲಹಂಕ ನಾಡಪ್ರಭು ಕೆಂಪೇಗೌಡರು ಅಳಿಯ ರಾಮರಾಯನ ಕಾಲದಲ್ಲಿ ತನ್ನ ರಾಜ್ಯದಲ್ಲಿ ಉಂಟಾದ ಆರ್ಥಿಕ ದುಸ್ಥಿತಿ ಸುಧಾರಿಸಲು ಮತ್ತು ಪ್ರಜೆಗಳ ಹಿತರಕ್ಷಣೆಗಾಗಿ ಸಾಮ್ರಾಟನ ಅನುಮತಿ ಪಡೆಯದೆ ಬೈರೇಶ್ವರ ಹೆಸರಿನ ಸ್ವಂತ ನಾಣ್ಯ ಚಲಾಯಿಸಿದರು. ಇದರಿಂದ ಕೆರಳಿದ ಅಳಿಯ ರಾಮರಾಯ ಕೆಂಪೇಗೌಡರನ್ನು ರಾಜಧಾನಿ ವಿಜಯನಗರದಲ್ಲಿ ಜರುಗುತ್ತಿದ್ದ ದಸರಾ ಉತ್ಸವಕ್ಕೆ ಆಹ್ವಾನಿಸಿ, ಬಂಧಿಸಿ ಆನೆಗೊಂದಿ ಸೆರೆಮನೆಗೆ ತಳ್ಳುತ್ತಾನೆ. ಕೆಂಪೇಗೌಡರು ಪ್ರಸಕ್ತ ಶಕೆ 1560ರಿಂದ 5 ವರ್ಷಗಳ ಕಾಲ ಆನೆಗೊಂದಿ ಸೆರೆಮನೆಯಲ್ಲಿದ್ದರು. ಪ್ರಸಕ್ತ ಶಕೆ 1565ರಲ್ಲಿ ಭಾರಿ ದಂಡ ತೆತ್ತು ಬಿಡುಗಡೆಗೊಂಡರು.

ಈ ಸಂಗತಿಯನ್ನು ಮೈಸೂರ್ ಗ್ಯಾಜೆಟಿಯರ್‌ನಲ್ಲಿ ಉಲ್ಲೇಖಿಸಲಾಗಿದೆ (1897). ಕೆಂಪೇಗೌಡರು ಬಂಧನದಲ್ಲಿದ್ದ ಸೆರೆಮನೆ ಹುಡುಕಾಟ ನಡೆಸಿದ ಡಾ. ಶರಣಬಸಪ್ಪ ಕೋಲ್ಕಾರ್ ಸಾಂದರ್ಭಿಕ ಸನ್ನಿವೇಶಗಳನ್ನು ಅನುಲಕ್ಷಿಸಿ ಆನೆಗೊಂದಿಯ ಒಂಟೆ ಸಾಲು-ಆನೆ ಸಾಲು ಎಂಬ ಕಟ್ಟಡವೇ ಆನೆಗೊಂದಿ ಸೆರೆಮನೆ ಇರಬೇಕೆಂದು ಅಂದಾಜಿಸಿದ್ದರು. ಆನೆಗೊಂದಿಯಲ್ಲಿ ಪ್ರಚಲಿತವಾಗಿರುವ ಮೌಖಿಕ ಹೇಳಿಕೆಗಳು ಕೆಂಪೇಗೌಡರು ಜಿಂಜರ ಬೆಟ್ಟದಲ್ಲಿ ಬಂಧನದಲ್ಲಿದ್ದರು ಎಂಬುದನ್ನು ಸೂಚಿಸುತ್ತಿದ್ದವು.

ಆ ಮೌಖಿತ ಮಾಹಿತಿಯನ್ನು ಅನುಲಕ್ಷಿಸಿ ಬೆಟ್ಟವನ್ನು ಅಮೂಲಾಗ್ರವಾಗಿ ಪರಿಶೋಧಿಸಿದಾಗ ಬೆಟ್ಟದ ಮೇಲೆ ವಿಶಾಲವಾದ ಜಾಗದಲ್ಲಿ ಸುತ್ತಲೂ ರಕ್ಷಣಾ ಗೋಡೆಗಳು, ಅಲ್ಲಲ್ಲಿ ಕಾವಲು ಗೋಪುರಗಳು, ಕಾವಲುಗಾರರ ಮನೆಗಳು, ಸೈನಿಕರ ವಸತಿಗಳು, ಭದ್ರತಾ ಕಟ್ಟಡ (ಸೆರೆಮನೆ), ಕಣಜ ಮತ್ತು ನೈಸರ್ಗಿಕ ನೀರಿನ ಕೊಳಗಳು ಕಂಡು ಬಂದವು ಮತ್ತು ಬೆಟ್ಟವು ಸುಮಾರು 400 ಮೀಟರ್ ಎತ್ತರವಾಗಿದ್ದು, ಮೇಲಿನ ಸ್ಥಳ ಅತ್ಯಂತ ಗೌಪ್ಯವಾಗಿದೆ.

ಆನೆಗೊಂದಿಯ ಜಿಂಜರಬೆಟ್ಟದ ಈ ಕಟ್ಟಡಗಳೇ ಕೆಂಪೇಗೌಡರು ಬಂಧನದಲ್ಲಿದ್ದ ವಿಜಯನಗರ ಕಾಲದ ಸೆರೆಮನೆ ಎಂದು ನಿರ್ಧರಿಸಲಾಗಿದೆ.

ಈಗ ಕೆಂಪೇಗೌಡರ ಜನ್ಮದಿನಾಚರಣೆ ಸಂದರ್ಭದಲ್ಲಿ ಆನೆಗೊಂದಿಯಲ್ಲಿ ಕೆಂಪೇಗೌಡರ ಕುರುಹಗಳು ಲಭ್ಯವಾಗಿರುವುದು ಇತಿಹಾಸಕ್ಕೆ ಪುಷ್ಟಿ ನೀಡಿದಂತಾಗಿದೆ.

ಕೆಂಪೇಗೌಡರು ಬಂಧನದಲ್ಲಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ನಾಡಪ್ರಭು ಕೆಂಪೇಗೌಡರ ಸೆರೆಮನೆ, ವಸ್ತು ಸಂಗ್ರಹಾಲಯ ಮತ್ತು ಪರಂಪರೆಯ ಕುರುಹಗಳು ಲಭ್ಯವಾಗಿವೆ. ಈ ಸೆರೆಮನೆಯ ಬಗ್ಗೆ ರಾಜ್ಯ ಪ್ರಾಚ್ಯ ವಸ್ತು, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ಹಂಪಿ ಉತ್ಸವದ ಸಂದರ್ಭ ನಡೆಸಿದ ವಿಜಯನಗರ ಅಧ್ಯಯನ ವಿಚಾರ ಸಂಕಿರಣದಲ್ಲಿ ಈ ಕುರಿತು ಪ್ರಬಂಧ ಮಂಡಿಸಲಾಗಿದೆ ಎಂದು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ