ರಾಮನಗರ: ಭಾರತದ ಏಕತೆ ಕಾಪಾಡುವಲ್ಲಿ ಹಾಗೂ ಕರ್ನಾಟಕ ಏಕೀಕರಣದಲ್ಲಿ ಕೆಂಗಲ್ ಹನುಮಂತಯ್ಯ ನಿರ್ಣಾಯಕ ಪಾತ್ರ ವಹಿಸಿದವರು. ಅವರಿಗೆ ಸಿಗಬೇಕಾದ ಗೌರವ ಸರಿಯಾಗಿ ಸಿಕ್ಕಿಲ್ಲ ಎಂದು ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕರಂಗೇಗೌಡ ಬೇಸರ ವ್ಯಕ್ತಪಡಿಸಿದರು.
ವಿಧಾನಸೌಧ ನಿರ್ಮಾತೃವಾದ ಕೆಂಗಲ್ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗ ಇಡಬೇಕು ಎಂದು ನಾವು ಹೋರಾಟ ಮಾಡಿದೆವು. ಆಗಲೂ ಪಿತೂರಿ ಮಾಡಿ ಅವರ ಪ್ರತಿಮೆಯನ್ನು ವಿಧಾನಸೌಧದ ಹಿಂದೆ ಇಟ್ಟು ಅವಮಾನ ಮಾಡುತ್ತಾರೆ. ಈಗಲಾದರೂ ಅದು ಮುಂದೆ ಬರಬೇಕಿದೆ. ಈ ನಿಟ್ಟಿನಲ್ಲಿ ಹೋರಾಟ ಶುರುವಾಗಬೇಕಿದೆ ಎಂದು ಹೇಳಿದರು.
ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಕೆಂಗಲ್ ಅವರ ಕಾಲದ್ದು ಕಟ್ಟುವ ಕಾಲದ ರಾಜಕಾರಣವಾದರೆ, ಈಗಿನದ್ದು ತಿನ್ನುವ ಮತ್ತು ಕೆಡಗುವ ರಾಜಕಾರಣ. ದೇಶ ಸ್ವಾತಂತ್ರ್ಯ ಪಡೆದಾಗ ಉಸ್ತುವಾರಿ ಮುಖ್ಯಮಂತ್ರಿಯಾಗಿ ಕೆ.ಸಿ. ರೆಡ್ಡಿ ಇದ್ದರು. ಆದರೆ, ಮೊದಲ ಚುನಾಯಿತ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕೆಂಗಲ್ ಅವರು ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಲ್ಲನ್ನು ಭದ್ರವಾಗಿ ನೆಟ್ಟರು ಎಂದು ಹೇಳಿದರು.ಕೆಂಗಲ್ ರವರು ಜನರ ಕೆಲಸವನ್ನು ದೇವರ ಕೆಲಸ ಎಂದು ಪರಿಭಾವಿಸಿ, ವಿಧಾನಸೌಧದಲ್ಲಿ ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಯಿಸಿದರು. ಏಕೀಕರಣ ಎಂಬುದು ಕನ್ನಡಿಗರ ಅಸ್ಮಿತೆಯ ಪ್ರಶ್ನೆ ಎಂದು ಪರಿಗಣಿಸಿ, ಅಧಿಕಾರ ಲೆಕ್ಕಿಸದೆ ಏಕೀಕರಣಕ್ಕೆ ಕೊಡುಗೆ ನೀಡಿದರು ಎಂದು ತಿಳಿಸಿದರು.
ಬಮೂಲ್ ನಿರ್ದೇಶಕ ಪಿ.ನಾಗರಾಜು ಮಾತನಾಡಿ, ನನೆಗುದಿಗೆ ಬಿದ್ದಿರುವ ಕೆಂಗಲ್ ಹನುಮಂತಯ್ಯ ಅವರ ಸಮಾಧಿ ಹಾಗೂ ಅತಿಥಿ ಗೃಹದ ಅಭಿವೃದ್ಧಿ ಜೊತೆಗೆ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣವಾಗಬೇಕಿದೆ. ಅದಕ್ಕಾಗಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸೋಣ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಹಳೆ ಬಸ್ ನಿಲ್ದಾಣದ ಬಳಿ ಸೌಂದರ್ಯೀಕರಣಗೊಂಡಿರುವ ಕೆಂಗಲ್ ಪ್ರತಿಮೆಯನ್ನು ಸಿ.ಎಂ.ಲಿಂಗಪ್ಪ ಸೇರಿದಂತೆ ಗಣ್ಯರು ಅನಾವರಣಗೊಳಿಸಿ, ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಪ್ರತಿಮೆ ನಿರ್ಮಾಣಕ್ಕೆ ಶ್ರಮಿಸಿದ ಬಮೂಲ್ ನಿರ್ದೇಶಕ ಪಿ. ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
-------------------------
ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜನ ಜಾಗೃತಿ ವೇದಿಕೆ ಮತ್ತು ನಮ್ಮವರು ಬಳಗ ಹಮ್ಮಿಕೊಂಡಿದ್ದ ‘ಕೆಂಗಲ್ ಹನುಮಂಗಯ್ಯ ನೆನಪು’ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.