ಕಾರವಾರ: ಅಂಕೋಲಾದಲ್ಲಿ ನಿರ್ಮಾಣವಾಗುತ್ತಿರುವ ಕೇಣಿ ಬಂದರು ದೇಶದ ಮಾದರಿ ಬಂದರುಗಳಲ್ಲಿ ಒಂದಾಗಲಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲಿದೆ ಎಂದು ಕೇಣಿ ಬಂದರು ಯೋಜನಾ ನಿರ್ದೇಶಕ ಭರಮಪ್ಪ ಕುಂಟಗೇರಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಣಿ ಬಂದರನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಬಂದರಿಗೆ ಸಂಪರ್ಕ ಕಲ್ಪಿಸಲು 90 ಮೀಟರ್ ಅಗಲದ ರಸ್ತೆ ಮತ್ತು ರೈಲ್ವೆ ಸಂಪರ್ಕ ನಿರ್ಮಿಸಲಾಗುವುದು. ಈ ನಿರ್ಮಾಣ ಕಾರ್ಯಗಳಿಗೆ ಭಾವಿಕೇರಿ, ಅಂಕೋಲಾ, ಶಿರಕುಳಿ, ಮತ್ತು ಅಲಗೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು 138 ರಿಂದ 140 ಎಕರೆ ಜಮೀನು ಅಗತ್ಯವಿದೆ. ಈ ಪ್ರದೇಶದಲ್ಲಿ ಸುಮಾರು 313 ಕುಟುಂಬಗಳಿದ್ದು, 75 ಮನೆಗಳು ಮತ್ತು ಶೆಡ್‌ಗಳು ಇವೆ. ಈ ಎಲ್ಲ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು.ಜಿಲ್ಲಾಡಳಿತವು ಸೂಕ್ತ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸುವ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರಮಪ್ಪ ಕುಂಟಗೇರಿ ಸ್ಪಷ್ಟಪಡಿಸಿದರು.ಕೇಣಿ ಬಂದರು ಅಭಿವೃದ್ಧಿಯಿಂದ ಸರಕುಗಳ ಆಮದು ಮತ್ತು ರಫ್ತಿನ ವೆಚ್ಚದಲ್ಲಿ ಗಣನೀಯ ಉಳಿತಾಯವಾಗಲಿದೆ. ಇದು ರಾಜ್ಯದ ಜಿಎಸ್ಟಿ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ. ಒಟ್ಟು ₹4200 ಕೋಟಿ ವೆಚ್ಚದಲ್ಲಿ ಕೇಣಿ ಬಂದರು ನಿರ್ಮಾಣಕ್ಕೆ ಜೆಎಸ್ಡಬ್ಲ್ಯೂ ಕಂಪನಿ ಹೂಡಿಕೆ ಮಾಡಲು ಮುಂದಾಗಿದೆ ಮತ್ತು ಈಗಾಗಲೇ ಟೆಂಡರ್ ಪಡೆದುಕೊಂಡಿದೆ. ಈ ಬಂದರು ಸಂಪೂರ್ಣವಾಗಿ ಸಮುದ್ರದಲ್ಲಿ ಸುಮಾರು ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ. ಆರಂಭಿಕ ವರ್ಷಗಳಲ್ಲಿ ಕೇಣಿ ಬಂದರು ಜೆಎಸ್ಡಬ್ಲ್ಯೂ ಕಂಪನಿಯ ಅಧೀನದಲ್ಲಿರಲಿದೆ, ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಹರಿದು ಬರಲಿದೆ. 30 ವರ್ಷಗಳ ನಂತರ, ಕೇಣಿ ಬಂದರು ಕರ್ನಾಟಕ ಮೆರಿಟೈಮ್ ಬೋರ್ಡಗೆ ಹಿಂತಿರುಗಲಿದೆ ಎಂದರು.
ಜೆಎಸ್ಡಬ್ಲ್ಯೂ ಸಾರ್ವಜನಿಕ ಸಂಪರ್ಕಾಧಿಕಾರಿ ರೇಷ್ಮಾ ಉಲ್ಲಾಳ, ಬಂದರು ನಿರ್ಮಾಣದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಂದರು ಆಧಾರಿತ ಕೈಗಾರಿಕೆಗಳು ಉತ್ತೇಜನ ಪಡೆಯಲಿವೆ. ಇದು ಕರಾವಳಿ ಪ್ರದೇಶ ಮತ್ತು ರಾಜ್ಯದ ಕೈಗಾರಿಕೆಗಳ ಲಾಭಾಂಶ ಸುಧಾರಿಸುವುದರ ಜತೆಗೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಕರಾವಳಿ ಪ್ರದೇಶ ಮತ್ತು ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ನೆರವಾಗಲಿದೆ ಎಂದರು.ಬಂದರು ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ವಿ.ಪ್ರಸಾದ್ ಮತ್ತು ವಿನಾಯಕ ನಾಯ್ಕ ಇದ್ದರು.