ಸಿಕ್ಕ ಸಿಕ್ಕವರಿಗೆಲ್ಲಾ ಗುತ್ತಿಗೆ ಕೊಟ್ಟ ರಾಜ್ಯ ಎಲೆಕ್ಟ್ರಾನಿಕ್ಸ್‌ ಅಭಿವೃದ್ಧಿ ನಿಯಮ !

KannadaprabhaNewsNetwork |  
Published : Mar 20, 2025, 01:17 AM ISTUpdated : Mar 20, 2025, 11:07 AM IST
Electronics Sector

ಸಾರಾಂಶ

ರಾಜ್ಯ ಎಲೆಕ್ಟ್ರಾನಿಕ್ಸ್‌ ಅಭಿವೃದ್ಧಿ ನಿಯಮ (ಕಿಯೋನಿಕ್ಸ್‌)ವು ಮಾಹಿತಿ ತಂತ್ರಜ್ಞಾನ (ಐಟಿ)ಕ್ಕೆ ಸಂಬಂಧಿಸದ ಉಪಕರಣಗಳ ಪೂರೈಕೆಗೂ 4ಜಿ ವಿನಾಯಿತಿ ಪಡೆದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವ ಮೂಲಕ ಕೆಟಿಪಿಪಿ ಕಾಯ್ದೆ ಉಲ್ಲಂಘಿಸಲಾಗಿದೆ  

 ವಿಧಾನಸಭೆ : ರಾಜ್ಯ ಎಲೆಕ್ಟ್ರಾನಿಕ್ಸ್‌ ಅಭಿವೃದ್ಧಿ ನಿಯಮ (ಕಿಯೋನಿಕ್ಸ್‌)ವು ಮಾಹಿತಿ ತಂತ್ರಜ್ಞಾನ (ಐಟಿ)ಕ್ಕೆ ಸಂಬಂಧಿಸದ ಉಪಕರಣಗಳ ಪೂರೈಕೆಗೂ 4ಜಿ ವಿನಾಯಿತಿ ಪಡೆದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವ ಮೂಲಕ ಕೆಟಿಪಿಪಿ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಆಮೂಲಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಿಯೋನಿಕ್ಸ್‌ನಲ್ಲಿ ಅಕ್ರಮ ನಡೆದಿರುವ ಕುರಿತು ರಾಜ್ಯ ಕಾಂಗ್ರೆಸ್‌ ಸರ್ಕಾರದ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.

2019ರಿಂದ 2023ರ ಮಾರ್ಚ್‌ ಅಂತ್ಯದವರೆಗೆ ಕಿಯೋನಿಕ್ಸ್‌ ಸಂಸ್ಥೆ ಮೂಲಕ ಬಿಬಿಎಂಪಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬುಡಕಟ್ಟು ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆಗಳಿಗೆ 14 ರೀತಿಯ ಉಪಕರಣಗಳ ಖರೀದಿಗೆ 347 ಖರೀದಿ ಆದೇಶ ನೀಡಲಾಗಿದೆ. ಒಟ್ಟಾರೆ ಈ ಅವಧಿಯಲ್ಲಿ ₹1,544.50 ಕೋಟಿ ಮೌಲ್ಯದ ಉಪಕರಣಗಳಿಗೆ 4ಜಿ ವಿನಾಯಿತಿಯಲ್ಲಿ ಖರೀದಿಸಿ ಪೂರೈಕೆ ಮಾಡಲಾಗಿದೆ.

ಚಪಾತಿ ಮಾಡುವ ಯಂತ್ರ ಪೂರೈಕೆ:ಕಿಯೋನಿಕ್ಸ್‌ನಿಂದ ಖರೀದಿಸಲಾದ 14 ರೀತಿಯ ಉಪಕರಣಗಳ ಪೈಕಿ ಐಟಿಗೆ ಸಂಬಂಧಿಸಿದ ಕಂಪ್ಯೂಟರ್‌, ಸಿಸಿ ಟಿವಿ ಕ್ಯಾಮೆರಾ, ಆಡಿಯೋ ವ್ಯವಸ್ಥೆ, ಡ್ರೋನ್‌ ಕ್ಯಾಮೆರಾ ಸೇರಿ ಇನ್ನಿತರ ಉಪಕರಣಗಳೂ ಸೇರಿವೆ. ಅವುಗಳೊಂದಿಗೆ ಐಟಿಗೆ ಸಂಬಂಧಿಸದ ಬೀದಿ ದೀಪಗಳು, ಆರ್‌ಒ ನೀರು ಶುದ್ಧೀಕರಣ ಪರಿಕರ, ಹೈ ಮಾಸ್ಟ್‌ ಲೈಟ್‌ಗಳಲ್ಲದೆ ಚಪಾತಿ ಮಾಡುವ ಯಂತ್ರ, ತೊಳೆಯುವ ಯಂತ್ರಗಳನ್ನೂ ಪೂರೈಸಲಾಗಿದೆ. ಇದು ಕೆಟಿಪಿಪಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಮೊತ್ತ: ಬಿಬಿಎಂಪಿ, ಗಿರಿಜನ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಕಿಯೋನಿಕ್ಸ್‌ ಪೂರೈಸಿರುವ 9 ಪರಿಕರಗಳನ್ನು ಚಾಲ್ತಿಯಲ್ಲಿದ್ದ ಮಾರುಕಟ್ಟೆ ಮೌಲ್ಯಕ್ಕಿಂತ ಶೇ. 172ರಷ್ಟು ಹೆಚ್ಚಿನ ಮೊತ್ತ ಪಾವತಿಸಿ ಸಾರ್ವನಿಕ ಬೊಕ್ಕಸಕ್ಕೆ 47.97 ಕೋಟಿ ರು. ಆರ್ಥಿಕ ಹೊರೆ ಉಂಟು ಮಾಡಲಾಗಿದೆ. ವರದಿಯಲ್ಲಿರುವಂತೆ 9 ಉಪಕರಣಗಳಿಗೆ 27.84 ಕೋಟಿ ರು, ಮಾರುಕಟ್ಟೆ ಮೌಲ್ಯವಿದ್ದರೆ 75.81 ಕೋಟಿ ರು. ನಿಗದಿ ಮಾಡಲಾಗಿದೆ. ಮಾರುಕಟ್ಟೆಯ ಬೆಲೆಯನ್ನು ಸಮರ್ಪಕವಾಗಿ ಪರಿಶೀಲಿಸದೆ ಉಪಕರಣಗಳ ಪೂರೈಕೆಗೆ ಕಾರ್ಯಾದೇಶ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಅದರೊಂದಿಗೆ ಸಲಕರಣೆಗಳ ವಿತರಣೆಯನ್ನು ಪರಿಶೀಲಿಸಲು ವ್ಯಾಪಾರ ಸಹವರ್ತಿ (ಬಿಎ)ಗಳಿಂದಲೇ ಮೂರನೇ ವ್ಯಕ್ತಿಗಳನ್ನು ನೇಮಿಸಲಾಗಿತ್ತು. ಈ ಕುರಿತು ಕಿಯೋನಿಕ್ಸ್‌ನ ತಾಂತ್ರಿಕ ಸಿಬ್ಬಂದಿಗೆ ಯಾವುದೇ ನಿರ್ದೇಶನವನ್ನೂ ನೀಡಿರಲಿಲ್ಲ. ಅಲ್ಲದೆ, 347 ಪರಿಕರ ಪರೀಕ್ಷಾ ಪ್ರಕರಣದಲ್ಲಿ 155 ಪ್ರಕರಣಗಳನ್ನು ಯಾವುದೇ ಪರಿಶೀಲನೆಗೊಳಪಡಿಸದೇ 85.98 ಕೋಟಿ ರು. ಪಾವತಿಸಲಾಗಿದೆ. ಹಾಗೆಯೇ, ನಕಲಿ ವಿತರಣಾ ಚಲನ್‌ಗಳು ಮತ್ತು ನಕಲಿ ಪರಿಶೀಲನಾ ವರದಿಗಳ ಆಧಾರದ ಮೇಲೆ ಬಿಎಗಳಿಗೆ ಹಣ ಪಾವತಿಸಲಾಗಿದೆ ಹಾಗೂ ಕೆಲ ಉಪಕರಣಗಳ ವಿತರಣೆಯ ನೈಜ ದಿನಾಂಕಕ್ಕೂ ಮುನ್ನವೇ ಪರಿಕ್ಷೆ ನಡೆಸಲಾಗಿದೆ ಎಂದು ತೋರಿಸಿರುವುದು ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!