ಕನ್ನಡಪ್ರಭ ವಾರ್ತೆ ಮಂಡ್ಯಹನುಮ ಧ್ವಜ ತೆರವು ಪ್ರಕರಣದಿಂದ ಬಿಗುವಿನ ವಾತಾವರಣ ನೆಲೆಸಿರುವ ತಾಲೂಕಿನ ಕೆರಗೋಡು ಗ್ರಾಪಂನಲ್ಲಿ ನಡಾವಳಿ ಪುಸ್ತಕ ನಾಪತ್ತೆಯಾಗಿರುವ ವಿಷಯ ಬಹಿರಂಗಗೊಂಡು ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ನಡಾವಳಿ ಪುಸ್ತಕ ನಾಪತ್ತೆಯಾಗಿರುವ ಕುರಿತಂತೆ ಗ್ರಾಪಂನ ಕೆಲವು ಸದಸ್ಯರು ಹಾಗೂ ಗ್ರಾಮಸ್ಥರು ಗ್ರಾಪಂ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಇಒ ತೆಗೆದುಕೊಂಡು ಹೋಗಿದ್ದಾರೆಂದು ಮಾಹಿತಿ ನೀಡಿದರು. ಅವರೇಕೆ ನಡವಳಿ ಪುಸ್ತಕವನ್ನು ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಪುಸ್ತಕದಲ್ಲಿ ಏನಾದರೂ ವ್ಯತ್ಯಾಸಗಳಾದರೆ ಯಾರು ಜವಾಬ್ದಾರರು ಎಂದು ಸಿಬ್ಬಂದಿ ವಿರುದ್ಧ ಹರಿಹಾಯ್ದರು.ಅದೇ ಸಮಯಕ್ಕೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಕೆರಗೋಡಿಗೆ ಆಗಮಿಸಿದರು. ಈ ವಿಷಯವನ್ನು ವಿವೇಕ್ ಅವರ ಗಮನಕ್ಕೆ ತಂದಾಗ, ಅವರು ತಾಪಂ ಇಒ ಎಂ.ಎಸ್.ವೀಣಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ನಡಾವಳಿ ಪುಸ್ತಕ ತಮ್ಮ ಬಳಿ ಇರುವುದನ್ನು ಒಪ್ಪಿಕೊಂಡರು. ಆ ನಂತರ ವಕೀಲರು ಸದಸ್ಯರು, ಗ್ರಾಮಸ್ಥರನ್ನು ಸಮಾಧಾನಪಡಿಸಿದರು. ಜೊತೆಗೆ ಧ್ವಜ ಸ್ಥಂಭದ ವಿಚಾರವಾಗಿ ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿ ಸ್ಥಳದಿಂದ ನಿರ್ಗಮಿಸಿದರು.
ಕೆರಗೋಡು ಗ್ರಾಪಂ ಸಾಮಾನ್ಯ ಸಭೆಯ ನಡವಳಿ ನಾಪತ್ತೆ ಆರೋಪ ಬಗ್ಗೆ ಮಂಡ್ಯ ತಾಲೂಕು ಪಂಚಾಯ್ತಿ ಇಒ ಎಂ.ಎಸ್.ವೀಣಾ ಅವರನ್ನು ಪ್ರಶ್ನಿಸಿದಾಗ, ನಡಾವಳಿ ಪತ್ರ ನಾಪತ್ತೆಯಾಗಿಲ್ಲ. ಅದನ್ನು ನಮ್ಮ ಸುಪರ್ದಿಗೆ ತೆಗೆದುಕೊಂಡಿದ್ದೇವೆ. ಪಂಚಾಯತ್ ರಾಜ್ ಆ್ಯಕ್ಟ್ 157 ಪ್ರಕಾರ ಇಒಗೆ ಸಂಪೂರ್ಣ ಅಧಿಕಾರ ಇದೆ. ಗ್ರಾಮ ಪಂಚಾಯ್ತಿಯ ಯಾವುದೇ ದಾಖಲೆ, ಆಸ್ತಿ ಪತ್ರಗಳಾಗಬಹುದು, ಹಣಕಾಸಿನ ದಾಖಲೆ ಯಾವುದನ್ನಾದರು ವಶಪಡಿಸಿಕೊಳ್ಳುವ ಹಕ್ಕು ಇದೆ. ಅದಕ್ಕೆ ತಾಪಂ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಸುರಕ್ಷತೆ ದೃಷ್ಟಿಯಿಂದ ನಡಾವಳಿ ಪುಸ್ತಕ ನಮ್ಮ ವಶದಲ್ಲಿದೆ. ಅದನ್ನ ಯಾವ ರೀತಿಯಲ್ಲೂ ದುರ್ಬಳಕೆ ಮಾಡಿಕೊಳ್ಳಲಾಗದು. ನನ್ನ ಮೇಲೆ ಯಾರ ಒತ್ತಡವೂ ಇಲ್ಲ. ಒತ್ತಡಕ್ಕೂ ಒಳಗಾಗುವ ಅಗತ್ಯವೂ ಇಲ್ಲ. ಮೇಲಾಧಿಕಾರಿಗಳ ಗಮನಕ್ಕೆ ತಂದೇ ನಡಾವಳಿ ಪುಸ್ತಕವನ್ನು ವಶಕ್ಕೆ ಪಡೆದಿದ್ದೇವೆ ಎಂದು ಪ್ರತಿಕ್ರಿಯಿಸಿದರು.