ಕನ್ನಡ ಮಾಧ್ಯಮ ಅಂಗನವಾಡಿಗೆ ಕನ್ನಡ ಬಲ್ಲ ಶಿಕ್ಷಕಿಯನ್ನೇ ನೇಮಿಸಲು ಕೇರಳ ಹೈಕೋರ್ಟ್ ಆದೇಶ

KannadaprabhaNewsNetwork |  
Published : Feb 18, 2025, 12:31 AM ISTUpdated : Feb 18, 2025, 10:17 AM IST
ಕೇರಳ ಹೈಕೋರ್ಟ್‌ ಆದೇಶದ ಪ್ರತಿ | Kannada Prabha

ಸಾರಾಂಶ

ಕಾಸರಗೋಡಿನ ಅಡೂರು ಕೋರಿಕಂಡ ಕನ್ನಡ ಮಾಧ್ಯಮ ಅಂಗನವಾಡಿಯಲ್ಲಿ ಮಲಯಾಳಿ ಭಾಷಾ ಶಿಕ್ಷಕಿ ಬದಲು ಕನ್ನಡ ಬಲ್ಲ ಶಿಕ್ಷಕಿಯನ್ನು ನೇಮಿಸುವಂತೆ ಕೇರಳ ಹೈಕೋರ್ಟ್‌ ಫೆ.13ರಂದು ಅಂತಿಮ ತೀರ್ಪು ನೀಡಿದೆ.

ಮಂಗಳೂರು : ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ಹೈಸ್ಕೂಲ್‌ನಲ್ಲಿ ಮಲಯಾಳಿ ಶಿಕ್ಷಕರ ನೇಮಕ ವಿರುದ್ಧ ಚಾಟಿ ಬೀಸಿದ್ದ ಕೇರಳ ಹೈಕೋರ್ಟ್‌, ಈಗ ಕನ್ನಡ ಮಾಧ್ಯಮ ಅಂಗನವಾಡಿಯಲ್ಲಿ ಮಲಯಾಳಿ ಭಾಷಿಕ ಶಿಕ್ಷಕಿಯ ನೇಮಕ ವಿಚಾರದಲ್ಲೂ ಮತ್ತೆ ಅಲ್ಲಿನ ಸರ್ಕಾರಕ್ಕೆ ಏಟು ನೀಡಿದೆ. ಕೋರ್ಟ್‌ ಆದೇಶದಿಂದಾಗಿ ಕೇರಳ ಸರ್ಕಾರ ಮುಖಭಂಗ ಅನುಭವಿಸುವಂತಾಗಿದೆ.

ಕಾಸರಗೋಡಿನ ಅಡೂರು ಕೋರಿಕಂಡ ಕನ್ನಡ ಮಾಧ್ಯಮ ಅಂಗನವಾಡಿಯಲ್ಲಿ ಮಲಯಾಳಿ ಭಾಷಾ ಶಿಕ್ಷಕಿ ಬದಲು ಕನ್ನಡ ಬಲ್ಲ ಶಿಕ್ಷಕಿಯನ್ನು ನೇಮಿಸುವಂತೆ ಕೇರಳ ಹೈಕೋರ್ಟ್‌ ಫೆ.13ರಂದು ಅಂತಿಮ ತೀರ್ಪು ನೀಡಿದೆ.

ಕನ್ನಡ ಮಾಧ್ಯಮ ಅಂಗನವಾಡಿಯಲ್ಲಿ ಮಲಯಾಳಿ ಭಾಷಿಕ ಶಿಕ್ಷಕಿಯ ನೇಮಕ ವಿರೋಧಿಸಿ ಅಂಗನವಾಡಿಯ ಪೋಷಕರು ಹಾಗೂ ಅಂಗನವಾಡಿ ಲೆವೆಲ್‌ ಮಾನಿಟರಿಂಗ್ ಅಂಡ್‌ ಸಪೋರ್ಟೆಂಡ್‌ ಕಮಿಟಿ(ಎಎಲ್‌ಎಂಸ್‌) ಎರಡು ಪ್ರತ್ಯೇಕ ರಿಟ್‌ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿತ್ತು. ಈಗಾಗಲೇ ತಾತ್ಕಾಲಿಕವಾಗಿ ನೇಮಕಗೊಂಡ ಮಲಯಾಳಿ ಭಾಷಿಕ ಶಿಕ್ಷಕರನ್ನು ಬದಲಾಯಿಸಬೇಕು. ಆಯ್ಕೆ ಪಟ್ಟಿಯಲ್ಲಿ ಇಲ್ಲದ ಶಿಕ್ಷಕಿಯರ ನೇಮಕಾತಿಯನ್ನು ನಿರ್ಬಂಧಿಸುವಂತೆ ರಿಟ್‌ ಅರ್ಜಿಯಲ್ಲಿ ಕೋರಲಾಗಿತ್ತು.

ಇದನ್ನು ವಿಚಾರಣೆಗೆ ಕೈಗೆತ್ತಿಕೊಂಡ ಎರ್ನಾಕುಲಂನಲ್ಲಿರುವ ಕೇರಳ ಹೈಕೋರ್ಟ್‌ ಪೀಠ ವಾದ-ಪ್ರತಿವಾದಗಳನ್ನು ಆಲಿಸಿತ್ತು. ಐದು ಹಂತಗಳಲ್ಲಿ ವಿಚಾರಣೆ ನಡೆಸಿ ಗುರುವಾರ ಅಂತಿಮ ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿ ಕನ್ನಡ ಮಾಧ್ಯಮ ಅಂಗನವಾಡಿಗೆ ಮಲಯಾಳಿ ಭಾಷಿಕ ಶಿಕ್ಷಕಿಯ ನೇಮಿಸಿದ್ದು ಸರಿಯಲ್ಲ, ಕೂಡಲೇ ಕನ್ನಡ ಬಲ್ಲ ಶಿಕ್ಷಕಿಯನ್ನು ನೇಮಕಗೊಳಿಸುವಂತೆ ಆದೇಶದಲ್ಲಿ ತಿಳಿಸಿತು.

ಕೋರಿಕಂಡ ಅಂಗನವಾಡಿಗೆ 2024ರ ಆಗಸ್ಟ್‌ನಲ್ಲಿ ಮಲಯಾಳಿ ಭಾಷಿಕ ಶಿಕ್ಷಕಿಯನ್ನು ಅಂಗನವಾಡಿ ಇಲಾಖೆ ನೇಮಕ ಮಾಡಿತ್ತು. ಇದನ್ನು ಅಂಗನವಾಡಿ ಪೋಷಕರು, ಊರಿನವರು ವಿರೋಧಿಸಿದ್ದರು. ಆದರೂ ಅದಕ್ಕೆ ಸೊಪ್ಪು ಹಾಕದ ಇಲಾಖೆ, ಮಲಯಾಳಿ ಭಾಷಿಕ ಶಿಕ್ಷಕಿಯನ್ನು ಅಲ್ಲೇ ಮುಂದುವರಿಸಿತ್ತು. ಇಲಾಖೆಯ ಧೋರಣೆ ವಿರೋಧಿಸಿ ಪೋಷಕರು ಹಾಗೂ ಎಎಲ್‌ಎಂಎಸ್‌ ಸಮಿತಿ ಹೈಕೋರ್ಟ್‌ ಮೆಟ್ಟಿಲೇರಿತ್ತು. .

ಹಿಂದೆ ಹೈಸ್ಕೂಲ್‌ನಲ್ಲೂ ಹೀಗೇ ಆಗಿತ್ತು

ಕಾಸರಗೋಡಿನ ಅಡೂರು ಕನ್ನಡ ಮಾಧ್ಯಮ ಹೈಸ್ಕೂಲ್‌ನಲ್ಲೂ ಮಲಯಾಳಿ ಭಾಷಿಕ ಶಿಕ್ಷಕರನ್ನು ಶಿಕ್ಷಣ ಇಲಾಖೆ ನೇಮಕ ಮಾಡಿತ್ತು. ಈ ಬಗ್ಗೆ ಸಾಕಷ್ಟು ವಿರೋಧ, ಪ್ರತಿಭಟನೆ ವ್ಯಕ್ತವಾದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಹೋರಾಟ ಸಮಿತಿ ಹೈಕೋರ್ಟ್‌ ಮೆಟ್ಟಿಲೇರಿ ಕನ್ನಡ ಮಾಧ್ಯಮ ಪರ ಜಯ ದೊರಕಿಸುವಲ್ಲಿ ಯಶಸ್ವಿಯಾಗಿತ್ತು. ಈಗ ಅಂಗನವಾಡಿ ಹಂತದಲ್ಲೂ ಕನ್ನಡ ಮಾಧ್ಯಮಗಳಿಗೆ ಮಲಯಾಳಿ ಭಾಷಿಕರ ನೇಮಕ ಮುಂದುವರಿದಿತ್ತು. ಮುಂಚೂಣಿ ಹೋರಾಟ ನಡೆಸಿದ್ದು ಹೆಣ್ಮಗಳು!

ಕನ್ನಡ ಮಾಧ್ಯಮ ಅಂಗನವಾಡಿಗೆ ಮಲಯಾಳಿ ಭಾಷಿಕ ಶಿಕ್ಷಕಿಯ ನೇಮಕ ವಿರೋಧಿಸಿ ಮೊದಲು ಬೀದಿಗೆ ಇಳಿದದ್ದು ಅದೇ ಅಂಗನವಾಡಿ ಪೋಷಕರಾದ ನಯನಾ ಗಿರೀಶ್‌.

ಹೋರಾಟಕ್ಕೆ ಯಾರೂ ಮುಂದೆ ಬರದೇ ಇದ್ದಾಗ ಇವರೇ ಮುಂಚೂಣಿಯಲ್ಲಿ ನಿಂತು ಎಲ್ಲ ಕನ್ನಡ ಪೋಷಕರನ್ನು ಒಟ್ಟಿಗೆ ಸೇರಿಸಿ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಅಹರ್ನಿಶಿ ಶ್ರಮಿಸಿದರು. ಕೋರ್ಟ್‌ಗೆ ಬೇಕಾದ ಅವಶ್ಯಕ ದಾಖಲೆ ಪತ್ರಗಳನ್ನು ತಾನೇ ಸ್ವತಃ ಸಂಗ್ರಹಿಸಿದರು. ಮಾತ್ರವಲ್ಲ ವಾಟ್ಸ್‌ಆ್ಯಪ್‌ ಗುಂಪು ರಚಿಸಿ ಕನ್ನಡ ಶಾಲೆ ಉ‍‍ಳಿವಿಗಾಗಿ ಕೋರ್ಟ್‌ ಮೆಟ್ಟಿಲೇರಲು ಚಂದಾ ಎತ್ತಿದರು. ಸುಮಾರು 1.50 ಲಕ್ಷ ರು.ಗೂ ಅಧಿಕ ಮೊತ್ತ ಸಂಗ್ರಹವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

.ರಾಜ್ಯದ ಕಾಂಗ್ರೆಸ್‌ ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿ
ಪೂರ್ಣಾವಧಿ ಸಿಎಂ ಆಗುವ ವಿಶ್ವಾಸ ಇದೆ : ಸಿಎಂ ಸಿದ್ದರಾಮಯ್ಯ