ಎಂಡೋಸಲ್ಫಾನ್ ಹೂತಿರುವ ವಿಚಾರ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಭೇಟಿ, ಪರಿಶೀಲನೆ

KannadaprabhaNewsNetwork | Published : Dec 29, 2023 1:31 AM

ಸಾರಾಂಶ

ಕೇರಳ- ಕರ್ನಾಟಕ ಗಡಿ ಪ್ರದೇಶವಾದ ಮಿಂಚಿಪದವು ಎಂಬಲ್ಲಿನ ಪಾಳು ಬಾವಿಯಲ್ಲಿ ಕೇರಳ ಪ್ಲಾಂಟೇಶನ್ ಕಾರ್ಪೊರೇಶನ್ ಗೋದಾಮಿನಲ್ಲಿ ಇರಿಸಲಾಗಿದ್ದ ಎಂಡೋಸಲ್ಫಾನ್‌ನ್ನು ಮಣ್ಣಿನಡಿ ಹೂತು ಹಾಕಿರುವ ವಿಚಾರದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠ ಪರಿಶೀಲನೆ ನಡೆಸಲು ನೋಟಿಸ್ ಜಾರಿಗೊಳಿಸಿದೆ.

ಕನ್ನಡಪ್ರಭವಾರ್ತೆ ಪುತ್ತೂರು

ಕೇರಳ- ಕರ್ನಾಟಕ ಗಡಿ ಪ್ರದೇಶವಾದ ಮಿಂಚಿಪದವು ಎಂಬಲ್ಲಿನ ಪಾಳು ಬಾವಿಯಲ್ಲಿ ಕೇರಳ ಪ್ಲಾಂಟೇಶನ್ ಕಾರ್ಪೊರೇಶನ್ ಗೋದಾಮಿನಲ್ಲಿ ಇರಿಸಲಾಗಿದ್ದ ಎಂಡೋಸಲ್ಫಾನ್‌ನ್ನು ಮಣ್ಣಿನಡಿ ಹೂತು ಹಾಕಿರುವ ವಿಚಾರದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠ ಪರಿಶೀಲನೆ ನಡೆಸಲು ನೋಟಿಸ್ ಜಾರಿಗೊಳಿಸಿದೆ.ನೋಟಿಸ್‌ ಜಾರಿ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ಕೇರಳ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲಿಗೆ ಕೇರಳ ಮತ್ತು ಕರ್ನಾಟಕ ಗಡಿ ಪ್ರದೇಶವಾದ ಪುತ್ತೂರು ತಾಲೂಕಿನ ಈಶ್ವರ ಮಂಗಲದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ ಅವರೊಂದಿಗೆ ಮಾತುಕತೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿದರು. ಬಳಿಕ ಮಿಂಚಿಪದವು ಪ್ರದೇಶಕ್ಕೆ ನೀಡಿದ ತಂಡ ಕೇರಳ ಪ್ಲಾಂಟೇಶನ್ ಕಾರ್ಪೊರೇಶನ್ ಕಚೇರಿಗೆ ತೆರಳಿ ಮಾಹಿತಿ ಪಡೆಯಿತು. ಬಳಿಕ ಗೋದಾಮಿನಲ್ಲಿದ್ದ ಎಂಡೋಸಲ್ಫಾನ್‌ ಡಬ್ಬಗಳಿಂದ ಮಾದರಿ ಸಂಗ್ರಹಿಸಿತು.

ಎಂಡೋಸಲ್ಫಾನ್‌ ಹಾಕಲಾಗಿದೆ ಎನ್ನಲಾದ ಇಲ್ಲಿನ ಬಾವಿಯ ಪರಿಶೀಲನೆ ನಡೆಸಿದ ಅಧಿಕಾರಿಗಳು ಬಾವಿ ಅಳದಿಂದ ಮಣ್ಣನ್ನು ಹಾಗೂ ಸಮೀಪದ ಕೆರೆಗಳ ನೀರನ್ನು ಪರೀಕ್ಷಾರ್ಥವಾಗಿ ಸಂಗ್ರಹಿಸಿದರು. ಮಿಂಚಿಪದವು ಸಮೀಪದಲ್ಲಿರುವ ಕೇರಳದ ಭಾಗದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯೂ ತಂಡ ಮಾಹಿತಿ ಸಂಗ್ರಹಿಸಿತು. ಎಂಡೋಸಲ್ಫಾನ್ ಹೋರಾಟದ ಪದಾಧಿಕಾರಿಗಳನ್ನೂ ಭೇಟಿ ಮಾಡಿದರು.

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ದಕ್ಷಿಣ ಪೀಠದ ಅಧಿಕಾರಿ ಜೆ. ಚಂದ್ರಬಾಬು, ಪ್ರಯೋಗಾಲಯ ಸಹಾಯಕ ನಿಖಿಲ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ. ರವಿ ಡಿ. ಆರ್., ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಅಧೀಕ್ಷಕ ಆದರ್ಶ ಟಿ. ವಿ. ತಂಡದಲ್ಲಿದ್ದರು.

ದೂರು ನೀಡಿದ್ದ ಡಾ. ರವೀಂದ್ರ ಶ್ಯಾನುಭಾಗ್ -

ಕೇರಳ ರಾಜ್ಯದ ಗಡಿ ಪ್ರದೇಶವಾದ ಮಿಂಚಿಪದವು ಗುಡ್ಡ ಪ್ರದೇಶದಲ್ಲಿ ಹೂಳಲಾಗಿದೆ ಎನ್ನಲಾದ ಎಂಡೋಸಲ್ಫಾನ್ ಸಮಸ್ಯೆಗಳನ್ನು ಅಧ್ಯಯನ ನಡೆಸಿದ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರ ಶ್ಯಾನುಭಾಗ್ ಅವರು ಈ ಬಗ್ಗೆ ರಾಷ್ಟ್ರೀಯ ಹಸಿರು ಪೀಠಕ್ಕೆ ದೂರು ನೀಡಿದ್ದರು. ಈ ದೂರಿನಂತೆ ಎಂಡೋಸಲ್ಫಾನ್ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ ೪ ವಾರಗಳಲ್ಲಿ ವರದಿ ಸಲ್ಲಿಸುವಂತೆ ಹಸಿರು ಪೀಠ ನಿರ್ದೇಶಿಸಿ ಕರ್ನಾಟಕ ಮತ್ತು ಕೇರಲ ಸರ್ಕಾರ ಮತ್ತು ಪರಿಸರ ಇಲಾಖೆಗಳಿಗೆ ನೋಟಿಸ್‌ ಜಾರಿ ಮಾಡಿತ್ತು. ನೋಟಿಸ್ ಜಾರಿಗೊಂಡ ಬೆನ್ನಲ್ಲೇ ಇದೀಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಎಂಡೋಸಲ್ಫಾನ್ ವಿಷಕಾರಕ ಗುಣಗಳಿಂದಾಗಿ ಕೇರಳ ಮತ್ತು ಕರ್ನಾಟಕ ರಾಜ್ಯದ ಸುಮಾರು ೧೨ ಸಾವಿರಕ್ಕೂ ಅಧಿಕ ಮಕ್ಕಳು ವಿಕಲಚೇತನರಾಗಿದ್ದರು. ಹೀಗಾಗಿ ೨೦೧೧ರ ಮೇ ೧೩ರಂದು ಭಾರತದಲ್ಲಿ ಎಂಡೋಸಲ್ಫಾನ್ ಮಾರಾಟ ಮತ್ತು ಉಪಯೋಗ ನಿಷೇಧಗೊಂಡಿದೆ. ಆದರೆ ಆ ಬಳಿಕ ಉಳಿದಿದ್ದ ಎಂಡೋಸಲ್ಫಾನ್‌ನನ್ನು ಮಿಂಚಿಪದವು ಗುಡ್ಡದ ಗೇರು ತೋಪಿನಲ್ಲಿ ಹೂತು ಹಾಕಲಾಗಿತ್ತು. ಇದರಿಂದಾಗಿ ಕೆಳ ಭಾಗದಲ್ಲಿನ ಬಾವಿ, ಕೆರೆಗಳಲ್ಲಿ ಎಂಡೋಸಲ್ಫಾನ್ ಅಂಶಗಳು ಗೋಚರಗೊಂಡ ಬಗ್ಗೆ ಆರೋಪ ಕೇಳಿಬಂದಿತ್ತು.

Share this article