ಧರ್ಮಸ್ಥಳ ಬುರುಡೆ ಕೇಸ್‌ಗೆ ಕೇರಳ ಲಿಂಕ್ !

KannadaprabhaNewsNetwork |  
Published : Sep 06, 2025, 01:01 AM ISTUpdated : Sep 06, 2025, 08:25 AM IST
ಕೇರ‍ಳ ಮೂಲದ ಯೂಟ್ಯೂಬರ್ ಮನಾಫ್‌ | Kannada Prabha

ಸಾರಾಂಶ

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ಸಂಚು ನೆರೆಯ ಕೇರಳ ರಾಜ್ಯಕ್ಕೂ ವ್ಯಾಪಿಸಿದೆ. ಧರ್ಮಸ್ಥಳ ಕ್ಷೇತ್ರದ ತೇಜೋವಧೆಗೆ ಸಂಬಂಧಿಸಿ ಕೇರಳ ಮೂಲದ ಯೂಟ್ಯೂಬರ್ ಮನಾಫ್‌ ಎಂಬಾತನಿಗೆ ಎಸ್ಐಟಿ ನೋಟಿಸ್‌ ಜಾರಿಗೊಳಿಸಿದೆ.

 ಮಂಗಳೂರು :  ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ಸಂಚು ನೆರೆಯ ಕೇರಳ ರಾಜ್ಯಕ್ಕೂ ವ್ಯಾಪಿಸಿದೆ. ಧರ್ಮಸ್ಥಳ ಕ್ಷೇತ್ರದ ತೇಜೋವಧೆಗೆ ಸಂಬಂಧಿಸಿ ಕೇರಳ ಮೂಲದ ಯೂಟ್ಯೂಬರ್ ಮನಾಫ್‌ ಎಂಬಾತನಿಗೆ ವಿಶೇಷ ತನಿಖಾ ತಂಡ (ಎಸ್ಐಟಿ) ನೋಟಿಸ್‌ ಜಾರಿಗೊಳಿಸಿದೆ. ಇದರೊಂದಿಗೆ ಬುರುಡೆ ಕೇಸ್‌ ಕೇರಳ ನಂಟು ಹೊಂದಿರುವುದು ದೃಢಪಟ್ಟಂತಾಗಿದೆ.

2024ರ ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬದಿಯ ಗುಡ್ಡ ಕುಸಿದಿತ್ತು. ಈ ದುರಂತದಲ್ಲಿ ಬರೋಬ್ಬರಿ 11 ಮಂದಿ ಮೃತಪಟ್ಟಿದ್ದರು. ಇದೇ ಘಟನೆಯಲ್ಲಿ ಲಾರಿ ಚಾಲಕ ಅರ್ಜುನ್ ಮೃತಪಟ್ಟಿದ್ದ. ಈ ಮನಾಫ್​, ಅದೇ ಲಾರಿಯ ಮಾಲೀಕ ಹಾಗೂ ಕೇರಳ ಭಾಗದ ಯೂಟ್ಯೂಬರ್​​​ ಕೂಡ.​

ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಆರಂಭದಿಂದಲೂ ತನ್ನ ಯೂಟ್ಯೂಬ್‌ನಲ್ಲಿ ಮನಾಫ್‌ ಕಥೆ ಕಟ್ಟಿದ್ದ. ಧರ್ಮಸ್ಥಳದಲ್ಲಿ ಅನಾಥ ಶವಗಳನ್ನು ಹೂಳಲಾಗಿದೆ ಎನ್ನುವ ವಿಡಿಯೋವನ್ನು ಕೇರಳದಲ್ಲೂ ಹರಿಯಬಿಟ್ಟಿದ್ದ. ಇದರಿಂದಾಗಿ ಕೇರಳದಲ್ಲಿರುವ ಧರ್ಮಸ್ಥಳ ಕ್ಷೇತ್ರದ ಭಕ್ತರ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದ.

ಸೌಜನ್ಯ ಪರ ಹೋರಾಟಗಾರ ಜಯಂತ್‌ ಮೂಲಕ ಮನಾಫ್‌, ಬುರುಡೆ ಕಥೆಯನ್ನು ಕೇರಳಕ್ಕೂ ಹಬ್ಬಿಸಿದ್ದ. ಕೇರಳದ ಮಾಧ್ಯಮಗಳೂ ಸುಳ್ಳನ್ನು ನಂಬುವಂತೆ ಮನಾಫ್‌ ಕಥೆ ಕಟ್ಟಿದ್ದ. ಸುಜಾತ ಭಟ್ ಹಾಗೂ ಬುರುಡೆ ಕೇಸ್ ಬಗ್ಗೆ ಧರ್ಮಸ್ಥಳಕ್ಕೆ ಬಂದು ಮನಾಫ್ ಕಟ್ಟು ಕಥೆ ಹೆಣೆದಿದ್ದ.

ಕೇರಳದಲ್ಲಿ ವ್ಯವಸ್ಥಿತ ಸಂಚು?:

ಬುರುಡೆ ಪ್ರಕರಣದಲ್ಲಿ ಲಿಂಕ್‌ ಹೊಂದಿರುವ ಮನಾಫ್‌, ಕೇರಳ ಕ್ರಿಯಾ ಸಮಿತಿ ಅಧ್ಯಕ್ಷನಾಗಿದ್ದ. ಧರ್ಮಸ್ಥಳದ ಪ್ರಕರಣದ ವಿರುದ್ಧ ಕೇರಳ ಕ್ರಿಯಾ ಸಮಿತಿ ರಚನೆ ಮಾಡಿದ್ದರು. ಹೀಗಾಗಿ, ಮನಾಫ್‌ನ ವಿಚಾರಣೆಗೆ ಸ್ವತಃ ತನಿಖಾಧಿಕಾರಿ‌ ಜಿತೇಂದ್ರ ದಯಾಮ ನೋಟಿಸ್‌ ಜಾರಿಗೊಳಿಸಿದ್ದಾರೆ. ತಾಂತ್ರಿಕ ಸಾಕ್ಷ್ಯ, ದಾಖಲೆಗಳ ಸಹಿತ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ. ಯೂಟ್ಯೂಬ್ ವಿಡಿಯೋಗೆ ಸಂಬಂಧಿಸಿದ ಎಲ್ಲ ತಾಂತ್ರಿಕ ಸಾಕ್ಷ್ಯ ಸಲ್ಲಿಸುವಂತೆ ಸೂಚಿಸಲಾಗಿದೆ. ವಿಚಾರಣೆಗೆ ಹಾಜರಾಗದೇ ಇದ್ದರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.

ಕೇರಳದ ಕೋಝಿಕ್ಕೋಡ್ ನಿವಾಸಿಯಾಗಿರುವ ಮನಾಫ್, ಕೇರಳದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಬೆಳೆದು ಮತ್ತೆ ಕೇರಳದಲ್ಲೇ ಬದುಕು ಕಟ್ಟಿಕೊಂಡಿದ್ದಾನೆ.

ಜು.11ರಂದೇ ವಿಡಿಯೋ ಯುಟ್ಯೂಬ್ಗೆ ಅಪ್‌ಲೋಡ್‌:

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಕಾಡಿನಿಂದ ಬುರುಡೆ ತಂದಿರುವ ಒರಿಜಿನಲ್ ವಿಡಿಯೋ ಎಸ್‌ಐಟಿಗೆ ಲಭ್ಯ‌ವಾಗಿತ್ತು. ಮನಾಫ್ ಯುಟ್ಯೂಬ್‌ನಲ್ಲಿ ಅಪ್ಲೋಡ್ ಆಗಿರುವ ವಿಡಿಯೋ ಅದಾಗಿದ್ದು, ಅದನ್ನು ಜುಲೈ 11ರಂದೇ ಅಪ್ಲೋಡ್ ಮಾಡಲಾಗಿತ್ತು. ಈ ನಡುವೆ ಬಂಗ್ಲೆಗುಡ್ಡದಿಂದ ಬುರುಡೆ ತಂದಿರೋದಾಗಿ ತಿಮರೋಡಿ ಆಪ್ತ ಜಯಂತ್‌ ಹೇಳಿದ್ದ. ಕಾಡಿನಲ್ಲೇ ಈ ವಿಡಿಯೋ ಶೂಟ್‌ ಮಾಡಿ ಅಪ್‌ಲೋಡ್‌ ಮಾಡಲಾಗಿತ್ತು.

ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲಿ, ಭೂಮಿಯ ಮೇಲ್ಬಾಗದಲ್ಲೇ ಬುರುಡೆ ಪತ್ತೆಯಾಗಿತ್ತು. ಬಳಿಕ ಕತ್ತಿ ಮೂಲಕ ಬುರುಡೆ ಹೊರತೆಗೆಯಲಾಗಿತ್ತು. ಈ ಎಲ್ಲಾ ದೃಶ್ಯಗಳನ್ನು ಚಿತ್ರೀಕರಿಸಿದ ವಿಡಿಯೋವನ್ನು ಮನಾಫ್‌ ತನ್ನ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ. ಆ ಬಳಿಕವೇ ಬುರುಡೆಯನ್ನು ಧರ್ಮಸ್ಥಳಕ್ಕೆ ತರಲಾಗಿತ್ತು. ಹಾಗಾಗಿ, ಧರ್ಮಸ್ಥಳ ಭಾಗದಿಂದಲೇ ಬುರುಡೆ ಎತ್ತಿಕೊಂಡು ಬಂದಿರುವ ಬಗ್ಗೆ ಎಸ್‌ಐಟಿ ತಂಡ ಅನುಮಾನ ವ್ಯಕ್ತಪಡಿಸಿದೆ. 

ಧರ್ಮಸ್ಥಳ ತೇಜೋವಧೆ ಕೇರಳದ ಹಣ: ತೇಜಸ್‌ಶ್ರೀಕ್ಷೇತ್ರ ಧರ್ಮಸ್ಥಳದ ತೇಜೋವಧೆಗೆ ಸಂಬಂಧಿಸಿ ಕೇರಳದ ಪ್ರಭಾವಿ ರಾಜಕೀಯ ನಾಯಕನ ಖಾತೆಯಿಂದ ತಮಿಳುನಾಡು ಸಂಸದರೊಬ್ಬರ ತಾಯಿಯ ಖಾತೆಗೆ ಹಣ ರವಾನೆಯಾಗಿದೆ ಎಂದು ಹಿಂದು ಮುಖಂಡ ತೇಜಸ್‌ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಷಡ್ಯಂತರದಲ್ಲಿ ಕೇರಳದ ಪ್ರಭಾವಿ ರಾಜಕಾರಣಿಯ ಕೈವಾಡವಿದೆ. ಅವರ ಬ್ಯಾಂಕ್ ಖಾತೆಯಿಂದ ತಮಿಳುನಾಡು ಸಂಸದರ ತಾಯಿಯ ಖಾತೆಗೆ ಹಣ ಹೋಗಿದೆ. ಫಂಡಿಂಗ್ ವಿಚಾರ ಗೊತ್ತಾದರೆ ಷಡ್ಯಂತರ ಬಯಲಾಗುತ್ತದೆ ಎಂದಿದ್ದಾರೆ.

ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ನಾನು ನೀಡಿದ ದೂರು ಸ್ವೀಕಾರ ಮಾಡಿದ್ದಾರೆ, ತನಿಖೆ ನಡೆಸುವ ಭರವಸೆ ನೀಡಿದ್ದಾರೆ.ಫಂಡಿಂಗ್ ಬಗ್ಗೆ ತನಿಖೆ ನಡೆಸುವಂತೆ ಈಗಾಗಲೇ ಇಡಿಗೆ ಕೂಡ ದೂರು ನೀಡಿದ್ದೇನೆ. ಎಸ್ಐಟಿ ದೂರಿನಲ್ಲಿ ಸ್ಥಳೀಯ ಫಂಡಿಂಗ್ ಬಗ್ಗೆ ತನಿಖೆ ನಡೆಸುವಂತೆಯೂ ಮನವಿ ಮಾಡಿದ್ದೇನೆ ಎಂದರು. 

ಬುರುಡೆ ಪ್ರಕರಣದಲ್ಲಿ ಕೇರಳ ಲಿಂಕ್‌ಗೆ ಪೂರಕವಾಗಿ ಇದೀಗ ಮನಾಫ್‌ಗೆ ನೊಟೀಸ್ ಜಾರಿ ಮಾಡಿದ್ದಾರೆ. ಆತ ಧರ್ಮಸ್ಥಳದ ಬಗ್ಗೆ ಯೂಟ್ಯೂಬ್ ವೀಡಿಯೋ ಮಾಡಿ ವೈರಲ್ ಮಾಡಿದ್ದ. ಕೇರಳದಲ್ಲಿ ಈ ಪ್ರಕರಣದ ಬಗ್ಗೆ ಬೇರೆಯೇ ಅಭಿಪ್ರಾಯ ಸೃಷ್ಟಿಸಿದ್ದ ಎಂದಿದ್ದಾರೆ.ಒಂದೇ ದಿನ ಬುರುಡೆ ಟೀಂಗೆ ಎಸ್ಐಟಿ ಡ್ರಿಲ್:

ಧರ್ಮಸ್ಥಳ ಗ್ರಾಮದ ಬುರುಡೆ ಪತ್ತೆ ಪ್ರಕರಣದ ತನಿಖೆ‌ ನಡೆಸುತ್ತಿರುವ ಎಸ್‌ಐಟಿ ತಂಡ, ಶುಕ್ರವಾರ ಸೌಜನ್ಯ ಪರ ಹೋರಾಟಗಾರರಾದ ಜಯಂತ್, ಗಿರೀಶ್ ಮಟ್ಟಣ್ಣವರ್ ಹಾಗೂ ಯೂಟ್ಯೂಬರ್‌ ಅಭಿಷೇಕ್ ವಿಚಾರಣೆ ನಡೆಸಿದೆ.

ಜಯಂತ್‌ನನ್ನು ಗುರುವಾರ ಸಂಜೆ ಎಸ್‌ಐಟಿ ಕಚೇರಿಗೆ ಕರೆಸಿಕೊಂಡಿದ್ದ ತಂಡ, ನಸುಕಿನ ಜಾವ (2.30ರ)ದ ವರೆಗೆ ವಿಚಾರಣೆ ನಡೆಸಿತ್ತು. ಶುಕ್ರವಾರ ಮತ್ತೆ ಕರೆಸಿಕೊಂಡು ದಿನಪೂರ್ತಿ ವಿಚಾರಣೆ ನಡೆಸಿ, ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದೆ. ಇನ್ನೋರ್ವ ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣವರ್‌ ಕೂಡ ಎಸ್‌ಐಟಿ ಕಚೇರಿಯಲ್ಲಿ ತಂಡದ ಮುಖ್ಯಸ್ಥ ಪ್ರಣವ್‌ ಮೊಹಾಂತಿ ಶುಕ್ರವಾರ ವಿಚಾರಣೆ ನಡೆಸಿದರು.ಇದೇ ವೇಳೆ, ಯೂಟ್ಯೂಬರ್‌ ಅಭಿಷೇಕ್ ಕೂಡ ಎಸ್‌ಐಟಿ ಕಚೇರಿಗೆ ಆಗಮಿಸಿದ್ದು, ಅಧಿಕಾರಿಗಳು ಅವರನ್ನೂ ವಿಚಾರಣೆಗೆ ಒಳಪಡಿಸಿದರು.

ಸೂಕ್ತ ಸಾಕ್ಷ್ಯ ಸಿಕ್ಕಿದರೆ ಪ್ರಕರಣ ದಾಖಲು?:

ಜಯಂತ್ , ಗಿರೀಶ್ ಮಟ್ಟಣ್ಣವರ್ ಹಾಗೂ ಯೂಟ್ಯೂಬರ್‌ ಅಭಿಷೇಕ್ ಇವರೆಲ್ಲರೂ ಹಿಂದೆ ನೀಡಿದ ಹೇಳಿಕೆಗಳನ್ನು, ವಿಚಾರಣಾ ಹೇಳಿಕೆ ಜೊತೆ ಎಸ್‌ಐಟಿ ಅಧಿಕಾರಿಗಳು ತಾಳೆ ಹಾಕಲಿದ್ದಾರೆ. ಸಾಕ್ಷಿ ವಿಚಾರಣೆ ವೇಳೆ ಆರೋಪಿಯಾಗುವಷ್ಟು ಸೂಕ್ತ ಸಾಕ್ಷ್ಯ ಸಿಕ್ಕಿದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಚಿನ್ನಯ್ಯನ ಹೇಳಿಕೆಯ ಹೊರತಾಗಿ ಇನ್ನೂ ಬೇರೆ ಸಾಕ್ಷ್ಯಗಳು ಇದ್ದರೆ ಕಾನೂನು ಕ್ರಮಕ್ಕೆ ಮುಂದಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬುರುಡೆ ನೀಡಿದ್ದು ಮಟ್ಟಣ್ಣವರ್‌: ಜಯಂತ್‌

ಧರ್ಮಸ್ಥಳ ಗ್ರಾಮದ ಬುರುಡೆ ಕೇಸಿನ ಆರೋಪಿ ಚಿನ್ನಯ್ಯ, ಕೋರ್ಟ್‌ಗೆ ದೂರು ನೀಡುವಾಗ ತಾನು ತಂದಿರುವ ಬುರುಡೆಯನ್ನು ಸೌಜನ್ಯ ಪರ ಹೋರಾಟಗಾರ ಜಯಂತ್ ನೀಡಿದ್ದು ಎಂದು ತಿಳಿಸಿದ್ದಾನೆ ಎನ್ನಲಾಗಿತ್ತು. ಆದರೆ, ಎಸ್‌ಐಟಿ ವಿಚಾರಣೆ ವೇಳೆ ಜಯಂತ್‌ ಹೇಳಿಕೆ ನೀಡಿದ್ದು, ಚಿನ್ನಯ್ಯನಿಗೆ ಬುರುಡೆ ನೀಡಿದ್ದು ಗಿರೀಶ್ ಮಟ್ಟಣ್ಣವರ್ ಎಂದು ತಿಳಿಸಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.ಈ ಹಿಂದೆ ಬುರುಡೆ ಕುರಿತು ಪ್ರತಿಕ್ರಿಯಿಸಿದ್ದ ಮಟ್ಟಣ್ಣವರ್‌, ನಾನು ಬುರುಡೆ ತಂದಿಲ್ಲ, ಬುರುಡೆ ತಂದಿದ್ದು ಯಾರು ಎಂಬುದು ಗೊತ್ತಿಲ್ಲ ಎಂದಿದ್ದರು.  

ಇದೀಗ, ಜಯಂತ್ ಹೇಳಿಕೆ ಬುರುಡೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.ಚಿನ್ನಯ್ಯ ತಂದ ಬುರುಡೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಬುರುಡೆ ಜೊತೆ ಇದ್ದ ಮಣ್ಣುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್)ಕ್ಕೆ ಪೊಲೀಸರು ಕಳುಹಿಸಿದ್ದರು. ಆದರೆ, ಎಫ್‌ಎಸ್‌ಎಲ್ ವರದಿಯಂತೆ ಧರ್ಮಸ್ಥಳದ ಅಸುಪಾಸಿನಲ್ಲಿ ಇರುವ ಮಣ್ಣಿಗೂ, ಬುರುಡೆಯಲ್ಲಿರುವ ಮಣ್ಣಿಗೂ ಸಾಮ್ಯತೆ ಇಲ್ಲ ಎಂದು ಹೇಳಲಾಗಿತ್ತು.

ನಂತರ, ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಮಹಜರು ಮಾಡಲು ಬಂದಿದ್ದಾಗ ಚಿನ್ನಯ್ಯ ರಬ್ಬರ್ ತೋಟದ ಒಂದು ಜಾಗವನ್ನು ತೋರಿಸಿ, ಇಲ್ಲಿಂದ ಬುರುಡೆ ತೆಗೆದಿರುವುದಾಗಿ ತಿಳಿಸಿದ್ದ. ಆತನ ಹೇಳಿಕೆಯಂತೆ ಪೊಲೀಸರು ರಬ್ಬರ್ ತೋಟದಿಂದ ಮಣ್ಣುಗಳನ್ನು ತೆಗೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. 

ಧರ್ಮಸ್ಥಳ ವಿರುದ್ಧ ವಿಡಿಯೋಗೆ ನನಗೂ ಆಫರ್:  ಮಂಡ್ಯದ ಯುಟ್ಯೂಬರ್‌ಧರ್ಮಸ್ಥಳ ವಿರುದ್ಧದ ಷಡ್ಯಂತ್ರದ ಬಗ್ಗೆ ದಿನೇ, ದಿನೇ ಹೊಸ, ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸಲು ಯೂಟ್ಯೂಬರ್ ಹಾಗೂ ಕ್ರಿಯೇಟರ್‌ಗಳಿಗೆ ಫಂಡಿಂಗ್ ಆಗಿರುವ ಬಗ್ಗೆ ಆರೋಪ ಕೇಳಿ ಬಂದಿದೆ. 

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ತೊಪ್ಪನಹಳ್ಳಿಯ ಗೋಲ್ಡನ್ ಕನ್ನಡಿಗ ಯೂಟ್ಯೂಬರ್ ಸುಮಂತ್ ಈ ಬಗ್ಗೆ ಆರೋಪಿಸಿದ್ದು, ‘ಧರ್ಮಸ್ಥಳ ವಿರುದ್ಧ ವಿಡಿಯೋ ಮಾಡುವಂತೆ ನನಗೂ ಆಫರ್ ಬಂದಿತ್ತು. ನನ್ನ ಸ್ನೇಹಿತ ಯುನೈಟೆಡ್ ಮೀಡಿಯಾದ ಅಭಿಷೇಕ್ ಆಫರ್ ಮಾಡಿದ್ದ’ ಎಂದು ಹೇಳಿಕೆ ನೀಡಿದ್ದಾರೆ.

5 ತಿಂಗಳ ಹಿಂದೆ ಚಂದನ್‌ಗೌಡರ ಬಟ್ಟೆ ಅಂಗಡಿ ಉದ್ಘಾಟನೆಯಲ್ಲಿ ಅಭಿ ನನಗೆ ಸಿಕ್ಕಿದ್ದರು. ಆಗ ನಾನು, ‘ಸಮೀರ್ ವಿಡಿಯೋ ಹೇಗೆ ಇಷ್ಟು ವೈರಲ್ ಆಯ್ತು’ ಎಂದು ಕುತೂಹಲದಿಂದ ಅಭಿಯನ್ನು ಕೇಳಿದೆ. ಆಗ, ‘ಸಮೀರ್ ಅವರ ವಿಡಿಯೋ ವೈರಲ್ ಆಗಿರೋದನ್ನು ಮಾತ್ರ ನೀನು ನೋಡ್ತಾ ಇದ್ದೀಯಾ. ಅದರ ಹಿಂದೆ ಇರೋದು ನಾನು ಹಾಗೂ ಸುಮಾರು 300-400 ಟ್ರೋಲ್ ಪೇಜ್‌ಗಳು. ಇದಕ್ಕಾಗಿ 50- 60 ಕ್ರಿಯೆಟರ್‌ಗಳು ಕೆಲಸ ಮಾಡಿದ್ದಾರೆ’ ಎಂದು ಅಭಿ ಹೇಳಿದ್ದರು.ಅಲ್ಲದೆ, ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಿದ್ರೆ ನಿನಗೂ ಹಣ ಕೊಡ್ತೀವಿ. ನಾವು ಕೊಡುವ ಕಂಟೆಂಟ್‌‌‌ಗಳನ್ನು ನಿನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಬೇಕು. ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟು, ಊಟ, ತಿಂಡಿ, ದುಡ್ಡು ಸಹ ಕೊಡುತ್ತೇನೆ ಎಂದಿದ್ದರು. ಆಗ ನಾನು, ನಿಮಗೆ ಯಾರು ಫಂಡ್ ಮಾಡೋದು ಎಂದು ಕೇಳಿದೆ. ಆಗ ಅಭಿ, ‘ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ನಮ್ಮ ಬಾಸ್‌ಗಳು. ಎಲ್ಲವನ್ನೂ ಅವರು ನೋಡಿಕೊಳ್ತಾರೆ ಬಾ’ ಎಂದು ಕರೆದಿದ್ದರು. ಆಗ, ನಾನು ಆಗಲ್ಲ ಎಂದು ಬಂದು ಬಿಟ್ಟೆ ಎಂದು ಸುಮಂತ್ ತಿಳಿಸಿದ್ದಾರೆ.

ಎಲೆಕ್ಷನ್‌ಗೆ ಸ್ಪರ್ಧೆ ಮಾಡಿದಾಗ ದುಡ್ಡಿಲ್ಲದೆ ಚೈನ್ ಅಡವಿಟ್ಟ ಚಂದನ್‌ಗೌಡ, ಈಗ 50 ಲಕ್ಷದ ಬಟ್ಟೆ ಅಂಗಡಿ ಇಟ್ಟಿದ್ದಾರೆ. ಇದಕ್ಕೆ ದುಡ್ಡು ಎಲ್ಲಿಂದ ಬಂತು?. ಬರೀ ಯೂಟ್ಯೂಬ್ ವಿಡಿಯೋಗಳಿಂದ ಅಷ್ಟೊಂದು ಸಂಪಾದನೆ ಮಾಡಲು ಸಾಧ್ಯನಾ?. ಯೂಟ್ಯೂಬರ್ ಸಮೀರ್, ಚಂದನ್ ಗೌಡ, ಅಭಿಗೆ ಫಂಡಿಂಗ್ ಆಗಿದೆ. ಯುನೈಟೆಡ್ ಮೀಡಿಯಾ ಅಭಿಷೇಕ್, ಚಂದನ್‌ಗೌಡಗೆ ಎಡಿಟರ್ ಆಗಿದ್ದರು ಎಂದು ಸುಮಂತ್‌ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಸೌಜನ್ಯ ಪರ ಹೋರಾಟದ ಹೆಸರಲ್ಲಿ ಈ ಪ್ಲ್ಯಾನ್ ಎಕ್ಸಿಕ್ಯೂಟ್ ಮಾಡಿದ್ದಾರೆ. ನಾನು ಅವರೆಲ್ಲರ ಆ ಷಡ್ಯಂತ್ರ್ಯ ಕೇಳಿ ನಾನು ಪ್ರೋಮೋಷನ್ ಗೆ ಆಗಲ್ಲ ಅಂದೆ. ಎಐ ವಿಡಿಯೋ ಮಾಡಲು ಲಕ್ಷಾಂತರ ರುಪಾಯಿ ಹಣ ಬೇಕು. ಇವರಿಗೆಲ್ಲಾ ಎಲ್ಲಿಂದ ಹಣ ಬರುತ್ತಿದೆ ಎಂದು ಸುಮಂತ್‌ ಪ್ರಶ್ನಿಸಿದರು.

ಇದೆಲ್ಲವೂ ಫ್ರೀ ಪ್ಲ್ಯಾನ್ ಆಗಿದೆ. ನಾನು ಇದನ್ನು ಎಲ್ಲಿ ಬೇಕಿದ್ದರೂ ಹೇಳುತ್ತೇನೆ. ಎಸ್‌ಐಟಿ ವಿಚಾರಣೆಗೂ ನಾನು ರೆಡಿ ಇದ್ದೇನೆ. ಸಾಕ್ಷಿ ಸಹಿತ ನಾನು ಅವರಿಗೆ ಎಲ್ಲಾ ಹೇಳುತ್ತೇನೆ. ಧರ್ಮಸ್ಥಳ ವಿರುದ್ಧದ ಷಡ್ಯಂತ್ರದಲ್ಲಿ ಭಾಗಿಯಾದ ಯೂಟ್ಯೂಬರ್‌ಗಳ ವಿರುದ್ಧ ಕ್ರಮ ಆಗಬೇಕು. ದುಡ್ಡಿಗಾಗಿ ಕೋಟ್ಯಾಂತರ ಭಕ್ತರ ಭಾವನೆಗಳ ಜೊತೆ ಆಟವಾಡಿದವರಿಗೆ ಶಿಕ್ಷೆ ಆಗಬೇಕು. ಇದಕ್ಕೆ ನಾನೇ ಸಾಕ್ಷಿ ಎಂದು ಸುಮಂತ್‌ ಹೇಳಿದರು.

ಇಂದು ಚಿನ್ನಯ್ಯ ಕೋರ್ಟ್‌ಗೆ

ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಕಸ್ಟಡಿ ಅವಧಿ ಶನಿವಾರಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ, ಚಿನ್ನಯ್ಯನನ್ನು ಶನಿವಾರ ಎಸ್‌ಐಟಿ ಅಧಿಕಾರಿಗಳು ಮತ್ತೆ ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ನ್ಯಾಯಾಲಯ ಚಿನ್ನಯ್ಯನಿಗೆ ನ್ಯಾಯಾಂಗ ಬಂಧನ ವಿಧಿಸುವ ಸಾಧ್ಯತೆ ಇದೆ.ಇಲ್ಲಿವರೆಗೆ ಚಿನ್ನಯ್ಯ ಒಟ್ಟು 15 ದಿನ ಪೊಲೀಸ್‌ ಕಸ್ಟಡಿಯಲ್ಲಿ ವಿಚಾರಣೆ ಎದುರಿಸಿದ್ದಾನೆ. ಈ ವೇಳೆ ಆತನಿಂದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಮಹತ್ವದ ಮಾಹಿತಿಗಳನ್ನು ಕಲೆಹಾಕುವಲ್ಲಿ ಎಸ್ಐಟಿ ತಂಡ ಯಶಸ್ವಿಯಾಗಿದೆ. ಚಿನ್ನಯ್ಯನನ್ನು ಬೆಂಗಳೂರು ಹಾಗೂ ಉಜಿರೆಯ ಸ್ಥಳಗಳಿಗೆ ಕರೆದುಕೊಂಡು ಹೋಗಿ ಮಹಜರು ನಡೆಸಲಾಗಿದೆ.

ಈ ಮಧ್ಯೆ, ಎಸ್‌ಐಟಿ ಮುಖ್ಯಸ್ಥ ಪ್ರಣವ್‌ ಮೊಹಾಂತಿ ನೇತೃತ್ವದಲ್ಲಿ ಮಂಗಳೂರಲ್ಲಿ ಶುಕ್ರವಾರ ಎಸ್‌ಐಟಿ ತಂಡದ ಅಧಿಕಾರಿಗಳು ಸಭೆ ನಡೆಸಿದ್ದು, ಈ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ಕೊಡಗಿನಲ್ಲಿ ಬುರುಡೆ ಟೀಂ ನಿಗೂಢ ಸಭೆ:

ಧರ್ಮಸ್ಥಳ ಬುರುಡೆ ಗ್ಯಾಂಗ್ ಸದಸ್ಯರು ಕೊಡಗಿಗೂ ಭೇಟಿ ನೀಡಿದ್ದು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಗ್ಗೆ ಗೊಂದಲ ಮೂಡಿಸಿ, ಅಪಪ್ರಚಾರ ನಡೆಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

2024ರ ಡಿಸೆಂಬರ್‌ನಲ್ಲಿ ಗ್ಯಾಂಗ್ ನ ಸದಸ್ಯರಾದ ಟಿ.ಜಯಂತ್, ಬೆಂಗಳೂರು ಮತ್ತು ಮಂಗಳೂರಿಗೆ ಸೇರಿದ ಕೆಲವು ಅನಾಮಿಕ ವ್ಯಕ್ತಿಗಳು ವಿರಾಜಪೇಟೆ, ಸುಂಟಿಕೊಪ್ಪ, ಕುಶಾಲನಗರ ವ್ಯಾಪ್ತಿಗೆ ಆಗಾಗ ಭೇಟಿ ನೀಡಿ, ಕೆಲವು ನಿಗೂಢ ಸಭೆಗಳನ್ನು ನಡೆಸಿದ್ದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ಸದಸ್ಯರನ್ನು ಭೇಟಿ ಮಾಡಿ, ಅವರ ಮೂಲಕ ಕೆಲವು ಕಪೋಲಕಲ್ಪಿತ ದೂರುಗಳನ್ನು ಒತ್ತಾಯಪೂರ್ವಕವಾಗಿ ಪಡೆದು ಪೊಲೀಸ್ ಠಾಣೆಗೆ ನೀಡುವಲ್ಲಿ ಯಶಸ್ವಿಯಾಗಿದ್ದರು. ಮಹಿಳೆಯರ ಹೇಳಿಕೆಗಳನ್ನು ವಿಡಿಯೋ ಮಾಡುವ ಮೂಲಕ ಯೂಟ್ಯೂಬರ್ಸ್‌ಗಳಿಗೆ ರವಾನಿಸಿ, ಅದನ್ನು ಎಲ್ಲೆಡೆ ಪ್ರಚಾರ ಮಾಡುವ ಹುನ್ನಾರ ನಡೆಸಿದ್ದರು.ಈ ಬಗ್ಗೆ ಮಾಹಿತಿ ದೊರೆತ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಸೇರಿದಂತೆ ಕ್ಷೇತ್ರದ ಭಕ್ತಾಭಿಮಾನಿಗಳು, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ದೂರು ನೀಡಿದ್ದರು. ಹೀಗಾಗಿ, ಈ ಷಡ್ಯಂತ್ರದ ಕಾರ್ಯಾಚರಣೆಗೆ ಬ್ರೇಕ್ ಬಿದ್ದಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!