ಹೊಸನಗರ ತಾ. ಬಿಳ್ಳೂಡಿ ಮಹಿಳೆಯಲ್ಲಿ ಕೆಎಫ್‌ಡಿ ಪತ್ತೆ

KannadaprabhaNewsNetwork |  
Published : Dec 03, 2025, 01:30 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಈ ಬಾರಿಯ ಮೊದಲ ಮಂಗನ ಕಾಯಿಲೆ (ಕೆಎಫ್‌ಡಿ) ಪತ್ತೆಯಾಗಿದ್ದು, ಹೊಸನಗರ ತಾಲೂಕಿನ 50 ವರ್ಷದ ಮಹಿಳೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಪ್ರತಿ ಬಾರಿಯೂ ಜನವರಿ, ಫೆಬ್ರವರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗನಕಾಯಿಲೆ ಈ ಬಾರಿ ನವೆಂಬರ್ ತಿಂಗಳಲ್ಲೇ ಕಾಣಿಸಿಕೊಂಡಿದ್ದು, ಮಲೆನಾಡಿನ ಜನರಲ್ಲಿ ಆತಂಕ ಹೆಚ್ಚಿಸಿದೆ.

- 50 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢ: ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ: ಡಾ.ಹರ್ಷವರ್ಧನ

- - -

- ಜನವರಿ, ಫೆಬ್ರವರಿಯಲ್ಲಿ ಕಾಣಿಸುತ್ತಿದ್ದ ಕೆಎಫ್‌ಡಿ ಈ ಬಾರಿ ನವೆಂಬರಲ್ಲಿ ಪತ್ತೆ

- ನ.28ರಂದು ಸೊನಲೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದರು

- ನ.29ರಂದು ಹೆಚ್ಚಿನ ಪರೀಕ್ಷೆಗೊಳಪಡಿಸಿದಾಗ ಸೋಂಕು ಇರುವುದು ಪತ್ತೆ

- ಅರಣ್ಯಕ್ಕೆ ಹೋಗದಂತೆ, ಗ್ರಾಮದ ಎಲ್ಲ ಮನೆಗಳ ತಪಾಸಣೆಗೆ ಸೂಚನೆ

- - -

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿಯ ಮೊದಲ ಮಂಗನ ಕಾಯಿಲೆ (ಕೆಎಫ್‌ಡಿ) ಪತ್ತೆಯಾಗಿದ್ದು, ಹೊಸನಗರ ತಾಲೂಕಿನ 50 ವರ್ಷದ ಮಹಿಳೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಪ್ರತಿ ಬಾರಿಯೂ ಜನವರಿ, ಫೆಬ್ರವರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗನಕಾಯಿಲೆ ಈ ಬಾರಿ ನವೆಂಬರ್ ತಿಂಗಳಲ್ಲೇ ಕಾಣಿಸಿಕೊಂಡಿದ್ದು, ಮಲೆನಾಡಿನ ಜನರಲ್ಲಿ ಆತಂಕ ಹೆಚ್ಚಿಸಿದೆ.

ಹೊಸನಗರ ತಾಲೂಕಿನ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳ್ಳೂಡಿ ಗ್ರಾಮಕ್ಕೆ ಸೇರಿದ ಮಹಿಳೆಯಲ್ಲಿ ಕೆಎಫ್‌ಡಿ ಸೋಂಕು ದೃಢಪಟ್ಟಿದೆ. ಸದ್ಯ ಮಹಿಳೆ ಆರೋಗ್ಯವಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲ ದಿನಗಳಿಂದ ತಲೆನೋವು, ಜ್ವರ ಮತ್ತು ದೌರ್ಬಲ್ಯದಂತಹ ಲಕ್ಷಣಗಳಿಂದ ಬಳಲುತ್ತಿದ್ದ ಮಹಿಳೆ ನ.28ರಂದು ಪ್ರಾಥಮಿಕವಾಗಿ ಸೊನಲೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಅನಂತರ ಲಕ್ಷಣಗಳು ಮುಂದುವರಿದ ಹಿನ್ನೆಲೆಯಲ್ಲಿ ನ.29ರಂದು ಹೆಚ್ಚಿನ ಪರೀಕ್ಷೆಗಳಿಗೆ ಕಳುಹಿಸಲಾಯಿತು. ವೈದ್ಯಕೀಯ ವರದಿಯಲ್ಲಿ ಕೆಎಫ್‌ಡಿ ಸೋಂಕು ಇರುವುದನ್ನು ದೃಢಪಡಿಸಲಾಗಿದೆ.

ಬಳಿಕ ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನ.29ರಂದು ಮಹಿಳೆಯಲ್ಲಿ ಪ್ಲೇಟ್‌ಲೇಟ್‌ ಸಂಖ್ಯೆ ಅತಿ ಕಡಿಮೆ ಇದ್ದ ಕಾರಣ ಮುನ್ನಚ್ಚರಿಕೆ ಕ್ರಮವಾಗಿ ಅಂದೇ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದೆ. ಸದ್ಯ ಮಹಿಳೆಯ ಆರೋಗ್ಯದಲ್ಲಿ ಸ್ಥಿರತೆ ಕಾಣಿಸುತ್ತಿದೆ ಎಂದು ವಿಡಿಎಲ್‌ನ ಡಿಸಿಎಂಒ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.

ಉಣ್ಣೆ ಕಚ್ಚಿ ಸೋಂಕಿನ ಶಂಕೆ:

ಕಾಡು ಪ್ರದೇಶಗಳಲ್ಲಿ ಸಂಚರಿಸುವವರು, ಕಾಡಿಗೆ ಸೌದೆ- ಸೊಪ್ಪು ತರಲು ಹೋಗುವವರಿಗೆ ಕೆಎಫ್‌ಡಿ ಸೋಂಕಿನ ಅಪಾಯ ಹೆಚ್ಚು ಇರುತ್ತದೆ. ಇಲಾಖೆ ಅಧಿಕಾರಿಗಳ ಪ್ರಾಥಮಿಕ ಅಂದಾಜು ಪ್ರಕಾರ, ಮಹಿಳೆ ಕಾಡಿನೊಳಗೆ ದರಗು ತರಲು ಹೋದ ಸಂದರ್ಭದಲ್ಲಿ ಉಣ್ಣೆ ಕಚ್ಚಿರುವುದರಿಂದ ವೈರಸ್ ಬಂದಿರಬಹುದು ಎಂದು ಶಂಕಿಸಲಾಗಿದೆ.

ನವೆಂಬರ್‌ನಲ್ಲೇ ಪ್ರಕರಣ:

ಪ್ರತಿವರ್ಷ ಮಂಗನ ಕಾಯಿಲೆ ಪ್ರಕರಣಗಳು ಸಾಮಾನ್ಯವಾಗಿ ಜನವರಿಯಲ್ಲಿ ಹೆಚ್ಚಾಗುತ್ತವೆ. ಆದರೆ ಈ ಬಾರಿ ನವೆಂಬರ್‌ನಲ್ಲೇ ಪ್ರಕರಣ ಕಾಣಿಸಿರುವುದು ಗಮನಾರ್ಹ. ಇದರ ಪರಿಣಾಮವಾಗಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿದೆ. ತಾಲೂಕು ಆರೋಗ್ಯಾಧಿಕಾರಿಗಳು ತಕ್ಷಣ ಸಭೆ ಕರೆದಿದ್ದು, ಗ್ರಾಮದಲ್ಲಿನ ಎಲ್ಲ ಮನೆಗಳಿಗೆ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ. ಕಾಡು ಪ್ರದೇಶಗಳಿಗೆ ಅನವಶ್ಯಕ ಪ್ರವೇಶ ಮಾಡದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.- - -

(ಬಾಕ್ಸ್‌) ಕೆಎಫ್​ಡಿ ಪಾಸಿಟಿವ್ ಬಂದ ಮಹಿಳೆ ಆರೋಗ್ಯವಾಗಿದ್ದಾರೆ. ಇದು ಕೆಎಫ್​​ಡಿ ಹರಡುವ ಸಮಯ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಸೊರಬ ಭಾಗದಲ್ಲಿ ಪ್ರತಿ ವರ್ಷ ಜ್ವರ ಹಾಗೂ ಇತರೆ ಲಕ್ಷಣಗಳು ಕಂಡುಬಂದಾಗ ಅವರ ರಕ್ತದ ಮಾದರಿಯನ್ನು ಪರೀಕ್ಷೆ ನಡೆಸುತ್ತೇವೆ.

- ನಾಗರಾಜ್ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ.

- - -

(ಸಾಂದರ್ಭಿಕ ಚಿತ್ರ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ
24ರಿಂದ ಎಬಿವಿಪಿ ರಾಜ್ಯಮಟ್ಟದ ಪ್ರಾಂತ ಸಮ್ಮೇಳನ