ಪಕ್ಷಿಗಳ ನೀರಿನ ದಾಹ ತಣಿಸುತ್ತಿರುವ ಖಾಕಿ

KannadaprabhaNewsNetwork |  
Published : May 22, 2024, 01:00 AM IST
ಅಅಅಅ | Kannada Prabha

ಸಾರಾಂಶ

ಬೇಸಿಗೆ ಪ್ರಖರತೆ ಹೆಚ್ಚಾಗುತ್ತಿದೆ. ಇದರಿಂದ ಪ್ರಾಣಿ, ಪಕ್ಷಿಗಳು ತಾಪಮಾನದ ಹೊಡೆತಕ್ಕೆ ಹೈರಾಣಾಗಿವೆ. ನೀರಿನ ಕೊರತೆಯಿಂದ ಮೂಕ ಪಕ್ಷಿಗಳ ಪ್ರಾಣಕ್ಕೆ ಸಂಚಕಾರ ಬಾರದಿರಲೆಂದು ಮತ್ತು ಅವುಗಳ ದಾಹವನ್ನು ತೀರಿಸಲು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಬೆಳಗಾವಿ ಜಿಲ್ಲಾ ಪೊಲೀಸರು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.

ಜಗದೀಶ ವಿರಕ್ತಮಠ

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೇಸಿಗೆ ಪ್ರಖರತೆ ಹೆಚ್ಚಾಗುತ್ತಿದೆ. ಇದರಿಂದ ಪ್ರಾಣಿ, ಪಕ್ಷಿಗಳು ತಾಪಮಾನದ ಹೊಡೆತಕ್ಕೆ ಹೈರಾಣಾಗಿವೆ. ನೀರಿನ ಕೊರತೆಯಿಂದ ಮೂಕ ಪಕ್ಷಿಗಳ ಪ್ರಾಣಕ್ಕೆ ಸಂಚಕಾರ ಬಾರದಿರಲೆಂದು ಮತ್ತು ಅವುಗಳ ದಾಹವನ್ನು ತೀರಿಸಲು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಬೆಳಗಾವಿ ಜಿಲ್ಲಾ ಪೊಲೀಸರು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.

ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ ಕೆರೆ, ಕಟ್ಟೆಗಳು ಖಾಲಿಯಾಗಿವೆ. ಜನ, ಜಾನುವಾರುಗಳು ನೀರಿಲ್ಲದೇ ಕಂಗೆಟ್ಟಿವೆ. ಸರ್ಕಾರ ಹಾಗೂ ಜಿಲ್ಲಾಡಳಿತ ಕುಡಿಯುವ ನೀರು, ಮೇವು ಪೂರೈಕೆ ಕಾರ್ಯವನ್ನು ಸಮಪರೋಪಾದಿಯಲ್ಲಿ ಕೈಗೊಂಡಿವೆ. ಆದರೆ, ಪ್ರಾಣಿ ಪಕ್ಷಿಗಳು ಕುಡಿಯುವ ನೀರಿಗಾಗಿ ಎದುರಿಸುತ್ತಿರುವ ಸಮಸ್ಯೆಯನ್ನು ಯಾರೂ ಊಹಿಸಲಾಗುತ್ತಿಲ್ಲ. ಹೀಗಾಗಿ ನೀರಿಗಾಗಿ ಪಕ್ಷಿಗಳು ಹುಡುಕಾಟ ಶುರು ಮಾಡಿವೆ. ನೀರು ಸಿಗದಿದ್ದಾಗ ನಿತ್ರಾಣಗೊಂಡು ಕುಸಿದು ಬೀಳುತ್ತಿವೆ. ಹೀಗಾಗಿ ಪಕ್ಷಿಗಳಿಗೆ ನೀರಿನ ಅಗತ್ಯತೆ ಹೆಚ್ಚಾಗಿರುವುದನ್ನು ಮನಗಂಡು ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಮೂಕ ಪಕ್ಷಿಗಳ ಸಂಕಷ್ಟ ಗಮನಿಸಿ ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆಗಳ ಆವರಣದಲ್ಲಿರುವ ಮರಗಿಡಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಮೌಖಿಕ ಸೂಚನೆ ನೀಡಿದ್ದರು. ಇದರಿಂದ ಸಣ್ಣ ಪ್ರಮಾಣದ ಪ್ಲಾಸ್ಟಿಕ್‌ ಪಾಟ್‌ (ಬುಟ್ಟಿ)ಗಳನ್ನು ತಮ್ಮ ಕಚೇರಿ ಆವರಣದಲ್ಲಿರುವ ಮರ ಗಿಡಗಳಲ್ಲಿ ತೂಗು ಬಿಟ್ಟಿದ್ದಾರೆ. ಅಲ್ಲದೇ ಪ್ರತಿ ದಿನ ಬುಟ್ಟಿಗಳಲ್ಲಿ ನೀರು ಹಾಕುವಂತೆ ಎಲ್ಲ ಸಿಬ್ಬಂದಿಗೆ ತಿಳಿಸಿದ್ದಾರೆ.ಪಾಟ್‌ಗಳಲ್ಲಿ ನೀರಿನ ವ್ಯವಸ್ಥೆ:

ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆ ಬಿಸಿಲಿನ ಪ್ರಖರತೆ ತೀವ್ರವಾಗಿದೆ. ಬಿಸಿಲಿನ ತಾಪಕ್ಕೆ ಜನ ಸಾಮಾನ್ಯರು, ಪ್ರಾಣಿ, ಪಕ್ಷಿಗಳು ಬಸವಳಿದು ಕುಡಿಯುವ ನೀರಿಗಾಗಿ ಪರಿತಪಿಸುತ್ತಿವೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರ ಪಕ್ಷಿಗಳ ಮೇಲಿನ ಕಾಳಜಿ ಹಾಗೂ ಅವುಗಳ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕೈಗೊಂಡ ನಿರ್ಧಾರಕ್ಕೆ ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆಯ ಸಿಬ್ಬಂದಿ ಕೈ ಜೋಡಿಸಿದ್ದಾರೆ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿರುವ ಒಟ್ಟು 36 ಪೊಲೀಸ್‌ ಠಾಣೆ, 5 ಡಿವೈಎಸ್‌ಪಿ ಕಚೇರಿ, 4 ಸಿಪಿಐ ಕಚೇರಿಗಳ ಆವರಣದಲ್ಲಿರುವ ಗಿಡ, ಮರಗಳ ಅನುಗುಣವಾಗಿ ಪ್ರತಿಯೊಂದು ಕಚೇರಿಯಲ್ಲಿ 4-5 ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲೇ ಸುಮಾರು 20ಕ್ಕೂ ಹೆಚ್ಚು ಪ್ಲಾಸ್ಟಿಕ್‌ ಪಾಟ್‌ (ಬುಟ್ಟಿ)ಗಳನ್ನು ನೀರಿಗಾಗಿ ಗಿಡಕ್ಕೆ ತೂಗು ಹಾಕಿದ್ದಾರೆ. ಪ್ರತಿ ದಿನವೂ ಕಚೇರಿ ಸಿಬ್ಬಂದಿ ಬುಟ್ಟಿಗಳಲ್ಲಿ ನೀರು ಹಾಕಿ ಪಕ್ಷಿಗಳಿಗೆ ನೀರಿನ ದಾಹ ತಿರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಕುತೂಹಲದಿಂದ ಕಚೇರಿ ಸಿಬ್ಬಂದಿ ಬಳಿ ಮಾಹಿತಿ ಪಡೆದುಕೊಳ್ಳುವುದರ ಜತೆಗೆ ಜಿಲ್ಲಾ ಪೊಲೀಸ್‌ರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.ಸಂತಾನೋತ್ಪತ್ತಿ ಕಾಲ:

ಜಿಲ್ಲೆಯಲ್ಲಿ ಶೇ.80 ಕ್ಕೂ ಹೆಚ್ಚಿನ ಕೆರೆಗಳು ಬರದಿಂದ ನೀರಿಲ್ಲದಂತಾಗಿವೆ. ನೀರಿನ ಜೀವ ಸೆಲೆಯಾಗಬೇಕಿದ್ದ ಕೆರೆಗಳು ಮಳೆ ಕೊರತೆಯಿಂದಾಗಿ ಖಾಲಿ ಖಾಲಿಯಾಗಿದೆ. ಅತ್ತ ಜಾನುವಾರುಗಳಿಗೆ, ಇತ್ತ ಪ್ರಾಣಿ, ಪಕ್ಷಿಗಳಿಗೆ ಕೆರೆಗಳಲ್ಲಿ ಒಂದು ಹನಿ ನೀರು ಸಿಗುತ್ತಿಲ್ಲ. ತಗ್ಗು ಪ್ರದೇಶದ ಕೆರೆ, ಕುಂಟೆಗಳಲ್ಲೂ, ಹಳ್ಳ, ಕೊಳ್ಳಗಳಲ್ಲೂ ಜಲ ಬತ್ತಿ ಹೋಗಿದೆ. ಜನವರಿಯಿಂದ ಏಪ್ರಿಲ್‌ ವರೆಗೂ ಪಕ್ಷಿಗಳಿಗೆ ಸಂತಾನೋತ್ಪತಿ ಕಾಲ. ಆಗ ತಾನೇ ಜನಿಸಿದ ಪುಟ್ಟಮರಿಗಳು ಹಾರಲು, ಆಹಾರ ತಿನ್ನುವುದನ್ನು ಕಲಿಯುತ್ತವೆ. ಆದರೇ, ಬಿಸಿಲು ಹೆಚ್ಚಿರುವ ಪರಿಣಾಮ ನೀರು ಸಿಗದ ಸ್ಥಿತಿಗೆ ತಲುಪುತ್ತಿವೆ. ಶಕ್ತಿಶಾಲಿ ಹಾಗೂ ಅಕ್ರಮಣಕಾರಿಯಾದ ಹದ್ದುಗಳು ಬಿಸಿಲಿಗೆ ಬಸವಳಿಯುತ್ತಿವೆ. ನೀರು ಹುಡುಕಿಕೊಂಡು ಹೋಗುವ ಪಕ್ಷಿಗಳು ನೀರಿಗಾಗಿ ಸುತ್ತಾಡಿ ಎಲ್ಲೂ ಸಿಗದೆ ಎಲ್ಲೆಂದರಲ್ಲಿ ಬೀಳುವಂತ ಸ್ಥಿತಿಗೆ ಬಂದಿವೆ.

ನಮ್ಮ ಮನೆಯ ಮುಂಭಾಗದಲ್ಲಿರುವ ನೀರಿನ ಕೊಳವನ್ನು ಮುಚ್ಚಲಾಗಿತ್ತು, ಈ ಸಮಯದಲ್ಲಿ ಪಕ್ಷಿ ನೀರಿಗಾಗಿ ಬಂದು ಕೊಳದ ಮೇಲೆ ಕುಳಿತಿರುವುದನ್ನು ಗಮನಿಸಿದೆ. ತಕ್ಷಣ ಮುಚ್ಚಿರುವ ಕೊಳವನ್ನು ತೆರೆದು, ನೀರು ಸಂಗ್ರಹ ಮಾಡಿದ ಕೆಲವೇ ಕ್ಷಣಗಳಲ್ಲಿ ಮರಳಿ ಬಂದು ನೀರು ಕುಡಿಯಿತು. ಇದರಿಂದಾಗಿ ಜಿಲ್ಲೆಯಲ್ಲಿರುವ ಎಲ್ಲ ಪೊಲೀಸ್‌ ಠಾಣೆ, ಡಿವೈಎಸ್‌ಪಿ, ಸಿಪಿಐ ಕಚೇರಿ ಸೇರಿದಂತೆ ತಮ್ಮ ಕಚೇರಿ (ಎಸ್‌ಪಿ ಆಫೀಸ್‌) ಕಚೇರಿ ಆವರಣದಲ್ಲಿರುವ ಗಿಡ ಮರಗಳಲ್ಲಿ ಪಕ್ಷಿಗಳಿಗಾಗಿ ಸಣ್ಣ ಗಾತ್ರದ ಬುಟ್ಟಿ ತೂಗು ಬಿಟ್ಟು, ಪ್ರತಿದಿನ ನೀರು ಹಾಕುವಂತೆ ತಿಳಿಸಲಾಗಿದೆ.

- ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೆಳಗಾವಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳ ಮದುವೆ ಸಂಬಂಧ ಹತ್ಯೆ ಯತ್ನಕ್ಕೊಳಗಾಗಿದ್ದ ಮಹಿಳೆ ಸಾವು
ಕೋಗಿಲು ಒತ್ತುವರಿಗೆ ಇಬ್ಬರು ಖಾಕಿಬಲೆಗೆ