ಮೂಲ್ಕಿ: ಮೇ 15ರಂದು ಕಂಡೇವುದ ಆಯನದ ಮೀನು ಹಿಡಿಯುವ ಜಾತ್ರೆ ನಡೆಯಲಿದ್ದು, ಖಂಡಿಗೆ ನದಿಯಲ್ಲಿ ತ್ಯಾಜ್ಯ ತುಂಬಿ ಮೀನು ಹಿಡಿಯಲು ಅಸಾಧ್ಯವಾಗಿದೆ. ಈ ಬಗ್ಗೆ ಸಂಸದರ ಸೂಚನೆಯಂತೆ ಮಂಗಳೂರು ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚೇಳೈರು ಖಂಡಿಗೆ ಭಾಗದಲ್ಲಿ ಕೃಷಿ ಅವಲಂಬಿತ ಕುಟುಂಬಗಳು ಕೃಷಿ ಮಾಡದ ಪರಿಸ್ಥಿತಿ ಎದುರಾಗಿದ್ದು, ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಬಾವಿಗಳು ಮಲಿನಗೊಂಡಿವೆ. ಕೊಳಕು ನೀರಿನ ವಾಸನೆಯಿಂದ ಉಸಿರಾಟದ ತೊಂದರೆಯಾಗಿದ್ದು, ಇತಿಹಾಸ ಪ್ರಸಿದ್ದ ಖಂಡಿಗೆ ದೈವಸ್ಥಾನದ ಮೀನು ಹಿಡಿಯುವ ವಿಶೇಷ ಜಾತ್ರೆ ನಿಲ್ಲುವ ಹಂತಕ್ಕೆ ತಲುಪಿದೆ. ಜಾನುವಾರುಗಳಿಗೆ ನೀರು ಕುಡಿಯಲು ಮತ್ತು ಮೇವು ತಿನ್ನದ ಹೀನಾಯ ಪರಿಸ್ಥಿತಿ ಎದುರಾಗಿದ್ದು ಬಾವಿಯ ನೀರು ಕುಡಿದ ಅನೇಕ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಬಗ್ಗೆ ನಂದಿನಿ ನದಿ ಸಂರಕ್ಷಣಾ ಸಮಿತಿ ಖಂಡಿಗೆ ಚೇಳೈರು ಸೇರಿ ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆ ವಿರುದ್ಧ ಇತ್ತಿಚೆಗೆ ಪ್ರತಿಭಟನೆ ನಡೆಸಲಾಗಿತ್ತು. ಶಾಸಕ ಉಮಾನಾಥ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ನಂದಿನಿ ನದಿ ಸಮಸ್ಯೆ ಬಗ್ಗೆ ಬೆಂಗಳೂರು ಅಧಿವೇಶನದಲ್ಲಿ ಪ್ರಸ್ತಾಪಿಸಿ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಅನುದಾನ ನೀಡಿ ಬಗೆಹರಿಸಬೇಕಾಗಿ ಅಗ್ರಹಿಸಿದ್ದರು. ದ.ಕ. ಜಿಪಂನಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ನಂದಿನಿ ನದಿ ಕಲುಷಿತಗೊಂಡಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈಗ ಪುನಃ ನದಿಯಲ್ಲಿ ಕೊಳೆತ ದುರ್ನಾತ, ಗಬ್ಬು ವಾಸನೆ, ಮತ್ತು ಹಾವಸೆ ತುಂಬಿಕೊಂಡಿದ್ದು ಈ ಬಗ್ಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಗಮನಕ್ಕೆ ತಂದಾಗ ಅವರು ಮಂಗಳೂರು ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ ಅವರನ್ನು ಭೇಟಿ ನೀಡಿ ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಸೂಚಿಸಿದ್ದರು. ಅವರ ಸೂಚನೆ ಮೇರೆಗೆ ಆಯುಕ್ತರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಇಷ್ಟರವರೆಗೆ ಸ್ಥಳಕ್ಕೆ ಉಪಲೋಕಾಯುಕ್ತರು, ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿ, ಸಂಬಂಧಿಸಿದ ಉನ್ನತ ಮಟ್ಟದ ಅನೇಕ ಅಧಿಕಾರಿಗಳು ಬಂದರೂ ಸಮಸ್ಯೆ ಬಗೆ ಹರಿಸಿಲ್ಲ. ಸ್ವಲ್ಪ ಸಮಯ ಕಾದು ತ್ಯಾಜ್ಯ ನೀರನ್ನು ನದಿಗೆ ಬಿಡುವುದನ್ನು ನಗರ ಪಾಲಿಕೆ ಮತ್ತು ಖಾಸಗಿ ಅಸ್ಪತ್ರೆಯವರು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವ ಮೂಲಕ ಪ್ಲಾಂಟ್‌ನ್ನು ಬಂದ್ ಮಾಡುವ ಬಗ್ಗೆ ನಂದಿನಿ ನದಿ ಸಂರಕ್ಷಣಾ ಸಮಿತಿಯವರು ಎಚ್ಚರಿಕೆ ನೀಡಿದರು. ಈ ಬಗ್ಗೆ ತಕ್ಷಣ ನಗರಪಾಲಿಕೆ ಮತ್ತು ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿ ಸರ್ಕಾರದ ಗಮನಕ್ಕೆ ತರಲಾಗುವುದುದು ಎಂದು ಸಹಾಯಕ ಆಯುಕ್ತರು ತಿಳಿಸಿದರು. ಈ ಸಂದರ್ಭ ಮಂಗಳೂರು ತಹಸೀಲ್ದಾರ್ ರಮೇಶ್ ಬಾಬು, ಕಂದಾಯ ಅಧಿಕಾರಿ ಪ್ರಸಾದ್, ಚೇಳೈರು ಗ್ರಾಮ ಆಡಳಿತ ಅಧಿಕಾರಿ ಸುಲೋಚನಾ, ನಗರಪಾಲಿಕೆ ಅಧಿಕಾರಿಗಳಾದ ಲಾವಣ್ಯ, ಶಿವಲಿಂಗಪ್ಪ, ಯತೀಶ್, ಪರಿಸರ ಇಲಾಖೆ ಅಧಿಕಾರಿಗಳು, ಚೇಳೈರು ಗ್ರಾಪಂ ನಿಕಟ ಪೂರ್ವಧ್ಯಕ್ಷ ಜಯಾನಂದ, ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಡಿ, ಮಾಜಿ ಸದಸ್ಯರಾದ ಸುಧಾಕರ ಶೆಟ್ಟಿ, ನಂದಿನಿ ನದಿ ಸಂರಕ್ಷಣಾ ಸಮಿತಿ ಪ್ರಮುಖರಾದ ಸುಕೇಶ್ ಶೆಟ್ಟಿ ಖಂಡಿಗೆ, ನಿತಿನ್ ಶೆಟ್ಟಿ ಖಂಡಿಗೆ, ವಾಸುದೇವ ಶೆಟ್ಟಿ ಖಂಡಿಗೆ, ಚರಣ್ ಕುಮಾರ್, ಸುನಿಲ್ ಶೆಟ್ಟಿ ಚೇಳೈರು ಮತ್ತಿತರರಿದ್ದರು.