ಖರ್ಗೆ ಆರ್‌ಎಸ್‌ಎಸ್‌ ಮುಖಂಡರ ಕ್ಷಮೆ ಕೇಳಲಿ-ಮುತಾಲಿಕ್‌

KannadaprabhaNewsNetwork |  
Published : Jun 19, 2026, 02:15 AM IST
ಆರ್‌ಎಸ್ಸೆಸ್‌ ನೋಂದಣಿ ವಿಚಾರವಾಗಿ ಆರ್‌ಎಸ್ಸೆಸ್‌ ಮುಖಂಡರಿಗೆ ಪ್ರಶ್ನೆ ಮಾಡಿರುವ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬರೆದಿರುವ ಪತ್ರ ಪ್ರದರ್ಶಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ  | Kannada Prabha

ಸಾರಾಂಶ

ಆರ್‌ಎಸ್‌ಎಸ್‌ ಪ್ರಮುಖರಾದ ಮೋಹನ ಭಾಗವತ್‌ ಅವರಿಗೆ ಪ್ರಿಯಾಂಕ ಖರ್ಗೆ ಅವರು ಪ್ರಶ್ನಿಸುವ ಅಧಿಕಾರ ಹೊಂದಿಲ್ಲ. ಆರ್‌ಎಸ್‌ಎಸ್‌ ಸ್ಥಳೀಯ ಸಂಘಟನೆಯಲ್ಲ. ಇದೊಂದು ಅಂತಾರಾಷ್ಟ್ರೀಯ ಸಂಘಟನೆ. ಬರೀ ಏಳು ಕೋಟಿ ಕನ್ನಡಿಗರಿಗೆ ತಾವು ಗೃಹ ಸಚಿವರಾಗಿರಬಹುದು. ಆರ್‌ಎಸ್‌ಎಸ್‌ 140 ಕೋಟಿ ಭಾರತೀಯರ ಏಳ್ಗೆಗೆ ಶ್ರಮ ವಹಿಸುತ್ತಿದೆ ಎಂದು ಪ್ರಮೋದ ಮುತಾಲಿಕ್‌ ಹೇಳಿದ್ದಾರೆ.

ಧಾರವಾಡ:

ಆರ್‌ಎಸ್‌ಎಸ್‌ ನೋಂದಣಿ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದು ಬಾಲಿಶತನ. ಗೃಹ ಇಲಾಖೆಯ ಮದ ಏರಿದ ಅವರು ಆರ್‌ಎಸ್‌ಎಸ್‌ ಮುಖಂಡರ ಕ್ಷಮೆ ಕೇಳಬೇಕೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಪ್ರಿಯಾಂಕ ಖರ್ಗೆ ಅವರಿಗೆ ಪತ್ರ ಬರೆದಿರುವ ಮುತಾಲಿಕ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.ಆರ್‌ಎಸ್‌ಎಸ್‌ ಪ್ರಮುಖರಾದ ಮೋಹನ ಭಾಗವತ್‌ ಅವರಿಗೆ ಪ್ರಿಯಾಂಕ ಖರ್ಗೆ ಅವರು ಪ್ರಶ್ನಿಸುವ ಅಧಿಕಾರ ಹೊಂದಿಲ್ಲ. ಆರ್‌ಎಸ್‌ಎಸ್‌ ಸ್ಥಳೀಯ ಸಂಘಟನೆಯಲ್ಲ. ಇದೊಂದು ಅಂತಾರಾಷ್ಟ್ರೀಯ ಸಂಘಟನೆ. ಬರೀ ಏಳು ಕೋಟಿ ಕನ್ನಡಿಗರಿಗೆ ತಾವು ಗೃಹ ಸಚಿವರಾಗಿರಬಹುದು. ಆರ್‌ಎಸ್‌ಎಸ್‌ 140 ಕೋಟಿ ಭಾರತೀಯರ ಏಳ್ಗೆಗೆ ಶ್ರಮ ವಹಿಸುತ್ತಿದೆ. ಅದು ನಿಮ್ಮ ಕಾರ್ಯವಾಪ್ತಿಗೆ ನಿಲುಕಲಾರದ್ದು. ರಾಜ್ಯದಲ್ಲಿ ಅನೇಕ ಸಂಘಟನೆಗಳು ನೋಂದಣಿಯಾಗಿಲ್ಲ. ಎಲ್ಲವನ್ನು ತನಿಖೆಗೆ ಒಳಪಡಿಸಿ ವರದಿ ಕೇಳಿದ್ದಲ್ಲಿ ತಮ್ಮ ಬದ್ಧತೆ ಒಪ್ಪಬಹುದಿತ್ತು. ಆರ್‌ಎಸ್‌ಎಸ್‌ ಸಂಘಟನೆ ಮಾತ್ರ ಗುರಿಯಾಗಿಸಿಕೊಂಡಿದ್ದು ಪ್ರಾಮಾಣಿಕತೆ ಕಾಣುತ್ತಿಲ್ಲ. ಕಾಂಗ್ರೆಸ್‌ ವರಿಷ್ಠರನ್ನು ಮೆಚ್ಚಿಸಲು ಇಂತಹ ಪ್ರಚಾರ ಬಯಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾನೂನು ಪ್ರಕಾರ ಸಂಘಟನೆಗಳು ನೋಂದಣಿ ಮಾಡಬೇಕೆಂದು ಸಂವಿಧಾನದಲ್ಲಿ ಎಲ್ಲೂ ಇಲ್ಲ. ಶತಮಾನ ಕಂಡಿರುವ ಸಂಘಟನೆ ಬಗ್ಗೆ ಮಾತನಾಡುವುದು ನಿಮ್ಮ ಇಲಾಖೆ ವ್ಯಾಪ್ತಿಗೂ ಬರುವುದಿಲ್ಲ. ಈಗಾಗಲೇ ಚಿತ್ತಾಪೂರದ ಆರ್‌ಎಸ್‌ಎಸ್‌ ಪಥಸಂಚಲನ ನಿರ್ಬಂಧ ಮಾಡಿ ಮುಖ ಸುಟ್ಟುಕೊಂಡಿದ್ದೀರಿ. ಈಗಾಗಲೇ ರಾಜ್ಯದಲ್ಲಿ ಬಾಂಗ್ಲಾ ನುಸುಳುಕೋರರು ಬಂದಿದ್ದಾರೆ. ಗಾಂಜಾ, ಡ್ರಗ್ಸ್‌ , ವೈಶ್ಯಾವಾಟಿಕೆ, ಕೊಲೆ, ದರೋಡೆ ಆಗುತ್ತಿದ್ದು ಅವುಗಳನ್ನು ನಿಯಂತ್ರಿಸಬೇಕೆ ಹೊರತು ಆರ್‌ಎಸ್‌ಎಸ್‌ ಸಂಘಟನೆ ಕೆಣಕುವುದು ಏತಕ್ಕೆ ಎಂದು ಮುತಾಲಿಕ್‌ ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಶಿವಕುಮಾರ ಹಿರೇಮಠ, ಬಸವರಾಜ ಶಿರಸಂಗಿ, ವಿನೋದ, ವಿಶ್ವನಾಥ ಇದ್ದರು.ಧರ್ಮಸ್ಥಳಕ್ಕೆ ಕಳಂಕ: ಪ್ರಕಾಶ ರಾಜ್‌ ಬಂಧಿಸಿಧರ್ಮಸ್ಥಳಕ್ಕೆ ಕಳಂಕ ತರುವಲ್ಲಿ ಬಹುಭಾಷಾ ನಟ ಪ್ರಕಾಶರಾಜ್‌ ಅವರ ಪಾತ್ರವೂ ಇದೆ. ಕೂಡಲೇ ಎಸ್ಐಟಿ ಅವರನ್ನು ಬಂಧಿಸುವ ಮೂಲಕ ತನಿಖೆ ನಡೆಸಲು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ವಿರುದ್ಧದ ಸಂಚಿನ ರೂವಾರಿಗಳ ಜತೆಗೆ ಪ್ರಕಾಶ ರಾಜ್‌ ಅವರ ಸಂಬಂಧ ಏನು? ಅವರೊಂದಿಗೆ ದೂರವಾಣಿ ಕರೆಯಲ್ಲಿ ಏತಕ್ಕೆ ಮಾತನಾಡಬೇಕು. ಅವರೊಂದಿಗೆ ಏನು ಸಂಬಂಧ? ಹಾಗೂ ಈ ಕಾರ್ಯಕ್ಕೆ ಪ್ರಕಾಶ ರಾಜ್‌ ಎಷ್ಟು ಹಣ ನೀಡಿದ್ದಾರೆ ಎಂಬ ಮಾಹಿತಿ ತಿಳಿದುಕೊಳ್ಳಲು ಎಸ್‌ಐಟಿ ಅವರನ್ನು ಬಂಧಿಸಬೇಕು. ಕನ್ನಡ ಚಲನಚಿತ್ರ ಮಂಡಳಿ ಕೂಡಲೇ ಅವರನ್ನು ಬಹಿಷ್ಕರಿಸಬೇಕೆಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಕೀಳರಿಮೆ ಉಂಟುಮಾಡದಂತೆ ಎಚ್ಚರ ವಹಿಸಿ
ಶರಣ ಸಾಹಿತ್ಯಕ್ಕೆ ಡಾ.ಸಿದ್ದಯ್ಯ ಪುರಾಣಿಕರ ದೊಡ್ಡ ಕೊಡುಗೆ ಅಪಾರ