ಕನ್ನಡಪ್ರಭ ವಾರ್ತೆ ಬೀದರ್
ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯುತಿದ್ದು, ಶನಿವಾರ ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ರೈತರ ಬೇಡಿಕೆಗಳಿಗೆ ಸಂಪೂರ್ಣ ಬೆಂಬಲವಿದೆ. ಮೊದಲು ಪ್ರತಿ ಟನ್‌ಗೆ 4,000 ರು. ಮುಂಗಡ ನೀಡಿ, ನಂತರ ಅಂತಿಮ ಬೆಲೆ ನಿಗದಿಪಡಿಸಬೇಕು. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದರು.
ಕೇಂದ್ರ ಸರ್ಕಾರ ನಿಗದಿಪಡಿಸಿರುವ 3,650 ಎಫ್‌ಆರ್‌ಪಿ ದರ ಅವೈಜ್ಞಾನಿಕವಾಗಿದ್ದು, ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಲೆ ದೊರೆಯುತ್ತಿಲ್ಲ. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಕಾಯ್ದೆ ಜಾರಿಗೊಳಿಸಬೇಕು ಹಾಗೂ ರಾಜ್ಯಾದ್ಯಂತ ಏಕರೂಪದ ಕಬ್ಬಿನ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಐದು ದಿನಗಳೊಳಗೆ 4,000 ಮುಂಗಡ ಘೋಷಿಸದಿದ್ದರೆ ಜಿಲ್ಲೆಯಾದ್ಯಂತ ನ.18 ಮತ್ತು 19ಕ್ಕೆ ನಡೆಸುವ ದೊಡ್ಡಮಟ್ಟದ ಹೋರಾಟಕ್ಕೆ ಕೂಡ ನಮ್ಮ ಬೆಂಬಲವಿದೆ ಎಂದು ಭರವಸೆ ನೀಡಿದರು.ಬಿ.ಎಸ್.ಎಸ್.ಕೆ ಲೀಸ್‌ಗೆ ಕೊಡುವುದು ಬೇಡ: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಲೀಸ್‌ಗೆ ಕೊಡಿ ಎಂದು ರೈತರು ಕೇಳುವುದು ಬೇಡ, ಅದನ್ನು ಸರ್ಕಾರದಿಂದಲೇ ನಡೆಸುವಂತೆ ಒತ್ತಾಯ ಮಾಡಬೇಕು. ಇನ್ನೂ ಒಂದುವರೆ ವರ್ಷ ಹಾಗೆಯೇ ನಡೆಸಲಿ. ಮುಂದೆ ನಮ್ಮ ಸರ್ಕಾರ ಬರಲಿದೆ, ನಮ್ಮ ಸರ್ಕಾರ ಬಂದ ಬಳಿಕ ಸರ್ಕಾರದಿಂದ ನಾವೇ ಅದನ್ನು ಚಾಲನೆ ಮಾಡುತ್ತೇವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪೂರ, ರೈತ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ, ಬಾಬುರಾವ ಹೊನ್ನಾ, ಶಿವರಾಜ ಪಾಟೀಲ್ ಅತಿವಾಳ, ಪ್ರಮುಖರಾದ ಶಶಿಧರ ಹೊಸಳ್ಳಿ, ಪೀರಪ್ಪ ಯರನಳ್ಳಿ, ಅಶೋಕ್ ಕೊಡಗೆ, ಬಾಬಾ ಪಟೇಲ್, ಸಜ್ಜದ್ ಸಾಹೇಬ್, ದೇವೆಂದ್ರ ಸೋನಿ, ರಾಜು ಕಡ್ಯಾಳ, ರಾಜಶೇಖರ ಜವಳೆ, ಬಸವರಾಜ್ ಪಾಟೀಲ್ ಹಾರೂರಗೇರಿ, ಅಭಿ ಕಾಳೆ, ಅರುಣ್ ಹೊತಪೇಟೆ, ಮನೋಹರ ದಂಡೆ, ಬಿಜೆಪಿ, ಜೆಡಿಎಸ್ ಮುಖಂಡರು, ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯುತ್ತಿರುವ ಸ್ಥಳಕ್ಕೆ ಬೇಟಿ ನೀಡಿ ಬೆಂಬಲ ಸೂಚಿಸಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಮಾತನಾಡಿದರು.