ಖೋಖೋ: ಚಿಕ್ಕಮಗಳೂರು ಬಾಲಕಿಯರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

KannadaprabhaNewsNetwork | Published : Oct 12, 2023 12:00 AM

ಸಾರಾಂಶ

ಖೋಖೋ: ಚಿಕ್ಕಮಗಳೂರು ಬಾಲಕಿಯರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ
ಕನ್ನಡಪ್ರಭ ವಾರ್ತೆ, ತರೀಕೆರೆ ಲಿಂಗದಹಳ್ಳಿಯಲ್ಲಿ 2 ದಿನಗಳ ಕಾಲ ಅಚ್ಚುಕಟ್ಟಾಗಿ ನಡೆದ 17 -14 ರ ವಯೋಮಿತಿ ಯವರ ಮೈಸೂರು ವಿಭಾಗ ಮಟ್ಟದ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ , ಶಾಲಾ ಶಿಕ್ಷಕ ವರ್ಗ, ಶಾಲಾಭಿವೃದ್ಧಿ ಸಮಿತಿ, ಗ್ರಾಮಸ್ಥರು , ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಶಾಲೆ ಹಳೆಯ ವಿದ್ಯಾರ್ಥಿಗಳ ಪರಿಶ್ರಮವೇ ಮುಖ್ಯ ಕಾರಣ. ಅವರೆಲ್ಲರಿಗೂ ಪಂದ್ಯಾವಳಿ ಆಯೋಜಕರ ವತಿಯಿಂದ ಅಭಿನಂದನೆ ಸಲ್ಲಿಸಲಾಗುವುದು ಎಂದು ಲಿಂಗದಹಳ್ಳಿ ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಿ.ಸಿ. ಚಂದ್ರಶೇಖರ್ ಹೇಳಿದರು. ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಕಳೆದ 2 ದಿನಗಳಿಂದ ಲಿಂಗದಹಳ್ಳಿ ಗ್ರಾಮದಾದ್ಯಂತ ಹಬ್ಬದ ವಾತವರಣ ಮನೆ ಮಾಡಿತ್ತು. ಕ್ರೀಡಾ ಕೂಟ ಯಶಸ್ವಿ ಯಾಗಲು ಗ್ರಾಮಸ್ಥರ ಸಲಹೆ, ಸಹಕಾರ, ಗ್ರಾಪಂ ಪದಾಧಿಕಾರಿಗಳು, ಪಂದ್ಯಾವಳಿ ಸಂಧರ್ಭದಲ್ಲಿ ಲಿಂಗದಹಳ್ಳಿ ಪೊಲೀಸ್ ಠಾಣಾಧಿಕಾರಿಗಳು, ಸಿಬ್ಬಂದಿ ಕಣ್ಗಾವಲು ಮತ್ತು ಆರೋಗ್ಯ ಇಲಾಖಾಧಿಕಾರಿಗಳ ತುರ್ತು ಚಿಕಿತ್ಸೆ ಮುಖ್ಯ ಕಾರಣ. ಅವರೆಲ್ಲರಿಗೂ ಹೃದಯಪೂರ್ವಕ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು. ಪಂದ್ಯಾವಳಿಯಲ್ಲಿ 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನ. ಹಾಗೂ ಮೈಸೂರು ಜಿಲ್ಲೆ ದ್ವೀತಿಯ ಸ್ಥಾನ ಪಡೆದುಕೊಂಡರೆ 17 ವರ್ಷದ ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲಾ ತಂಡ ಪ್ರಥಮ ಸ್ಥಾನ ಹಾಗೂ ಉಡುಪಿ ಜಿಲ್ಲಾ ತಂಡ ದ್ವೀತೀಯ ಸ್ಥಾನ ಪಡೆದು ಕೊಂಡವು. 14 ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಹಾಸನ ಜಿಲ್ಲೆಯ ತಂಡ ಪ್ರಥಮ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಂಡ ದ್ವಿತೀಯ ಸ್ಥಾನ ಪಡೆದರೆ ಬಾಲಕಿಯರ ವಿಭಾಗದ ಖೋ ಖೋ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ತಂಡ ಪ್ರಥಮ ಸ್ಥಾನ ಮತ್ತು ಮೈಸೂರು ಜಿಲ್ಲೆಯ ತಂಡ ದ್ವಿತೀಯ ಸ್ಥಾನ ಪಡೆದು ತುಮಕೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾದವು ಎಂದು ತಿಳಿಸಿದರು. 17 ರ ವಯೋಮಿತಿಯ ಬಾಲಕರ ವಿಭಾಗದ ಖೋ ಖೋ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ತಂಡದ ಆಟಗಾರ ಪುನೀತ್ ಉತ್ತಮ ಓಟಗಾರ ಪ್ರಶಸ್ತಿ ಪಡೆದರೇ ಮಂಡ್ಯ ಜಿಲ್ಲೆಯ ತಂಡದ ಆಟಗಾರ ಕೆ.ಪಿ. ಚೇತನ್ ಉತ್ತಮದಾಳಿಗಾರ ಪ್ರಶಸ್ತಿ ಪಡೆದರು, ಇದೇ 17 ರ ವಯೋಮಿತಿಯ ಬಾಲಕಿಯರ ವಿಭಾಗ ದಲ್ಲಿ ಚಿಕ್ಕಮಗಳೂರು ಜಿಲ್ಲೆಯ ತಂಡದ ಆಟಗಾರ್ತಿ ಶೋಭ, ಉತ್ತಮ ಓಟಗಾರ್ತಿ ಪ್ರಶಸ್ತಿಗೆ ಆಯ್ಕೆಯಾದರೆ ಮೈಸೂರು ತಂಡದ ಆಟಗಾರ್ತಿ ಎನ್. ಮಾನಸ ಉತ್ತಮದಾಳಿಗಾರ್ತಿ ಪ್ರಶಸ್ತಿಗೆ ಭಾಜನರಾದರು. 14 ರ ವಯೋಮಿತಿಯ ಬಾಲಕರ ವಿಭಾಗದ ಖೋ ಖೋ ಸ್ಪರ್ಧೆಯಲ್ಲಿ ಹಾಸನ ತಂಡದ ಆಟಗಾರ ಸೃಜನ್ ಗೌಡಗೆ ಉತ್ತಮ ಓಟಗಾರ ಪ್ರಶಸ್ತಿ , ದಕ್ಷಿಣ ಕನ್ನಡ ತಂಡದ ಆಟಗಾರ ಅಬ್ದುಲ್ ಹಸನ್‌ ಗೆ ಉತ್ತಮ ದಾಳಿಗಾರ ಪ್ರಶಸ್ತಿ, 14ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಚಿಕ್ಕಮಗಳೂರು ತಂಡದ ಆಟಗಾರ್ತಿ ಪಂಚಮಿಗೆ ಉತ್ತಮ ದಾಳಿಗಾರ್ತಿ ಪ್ರಶಸ್ತಿ, ಮೈಸೂರು ತಂಡದ ಇಂಚರ ಉತ್ತಮ ಓಟಗಾರ್ತಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರೆಂದು ಲಿಂಗದಹಳ್ಳಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಜೆ.ಎಂ.ಸೋಮಶೇಖರಪ್ಪ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಬಿ.ಸಿ. ಚಂದ್ರಶೇಖರ್ ಘೋಷಿಸಿದರು. ರಾಜ್ಯದ 8 ಜಿಲ್ಲೆಗಳಿಂದ ಆಗಮಿಸಿದ್ದ ಕ್ರೀಡಾ ಪಟುಗಳು ಮತ್ತು ಅಧಿಕಾರಿ ವೃಂದದವರಿಗೆ ನಂದಿ ಬಟ್ಟಲು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ನಂದಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಗಳಲ್ಲಿ ತಂಗಲು ವ್ಯವಸ್ಥೆ ಮಾಡುವುದರೊಂದಿಗೆ ಕ್ರೀಡಾ ಪಟುಗಳು ಹಾಗೂ ಅಧಿಕಾರಿಗಳನ್ನು ವಾಹನ ಗಳಲ್ಲಿ ಕರೆದೊಯ್ದು ಕರೆತರಲು ಸಹಕರಿಸಿದ 2 ವಸತಿ ಶಾಲೆಗಳ ಅಧಿಕಾರಿ ವರ್ಗ ಮತ್ತು ಶಿಕ್ಷಕ ವೃಂದ ದವರ ಶ್ರಮ ಸದಾ ನೆನಪಿನಲ್ಲಿ ಉಳಿಯಲಿದೆ ಎಂದು ಲಿಂಗದಹಳ್ಳಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ಎಲ್ ಎನ್.ಲಿಂಗರಾಜು ತಿಳಿಸಿದ್ದಾರೆ. 11ಕೆಟಿಆರ್-ಕೆ04ಃ ತರೀಕೆರೆಯ ಲಿಂಗದಹಳ್ಳಿಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಚಿಕ್ಕಮಗಳೂರು ಜಿಲ್ಲೆಯ ತಂಡಕ್ಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಲ್.ಎನ್. ಲಿಂಗರಾಜು ಮುಖ್ಯ ಶಿಕ್ಷಕ ಜೆ.ಎಂ.ಸೋಮಶೇಖರಪ್ಪ ದೈಹಿಕ ಶಿಕ್ಷಕ ಬಿ.ಸಿ. ಚಂದ್ರಶೇಖರ್ ಮುಂತಾದವರು ಪ್ರಶಸ್ತಿ ಮತ್ತು ಬಹುಮಾನಗಳನ್ನು ನೀಡಿ ಅಭಿನಂದಿಸಿದರು.

Share this article