ಭಟ್ಕಳ: ಮುರುಡೇಶ್ವರ ಬಸ್ತಿಮಕ್ಕಿಯ ರಾಘವೇಶ್ವರ ಹವ್ಯಕ ಸಭಾಭವನದಲ್ಲಿ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಗಾನ ಪ್ರತಿಷ್ಠಾನ ಗೋಳಿಕುಂಬ್ರಿ, ಪೂರ್ಣಚಂದ್ರ ಯಕ್ಷಗಾನ ಮಂಡಳಿ ಕೊಂಡದಕುಳಿ ಇವರ ಆಶ್ರಯದಲ್ಲಿ ದಿ. ಸುಬ್ರಹ್ಮಣ್ಯ ಧಾರೇಶ್ವರ ಅವರ ವೇದಿಕೆಯಲ್ಲಿ ಏರ್ಪಡಿಸಿದ್ದ ೧೧ನೇ ವರ್ಷದ ಪೌರಾಣಿಕ ಯಕ್ಷಗಾನ ಸಪ್ತಾಹಕ್ಕೆ ಕೃಷ್ಣಾನಂದ ಭಟ್ಟ ಬಲ್ಸೆ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಯಾವ ಕಾಲದಲ್ಲೂ ಧರ್ಮಕ್ಕೇ ಜಯವಾಗಿದೆ. ಎಂದಿಗೂ ಅಧರ್ಮ ಗೆದ್ದಿಲ್ಲ. ಪೌರಾಣಿಕ ಯಕ್ಷಗಾನ ಸಪ್ತಾಹದಲ್ಲಿ ಧರ್ಮ- ಅಧರ್ಮ ಎರಡೂ ಕಡೆಯವರು ವೇಷಭೂಷಣದಲ್ಲಿ ಪಾತ್ರ ಮಾಡಿ ಮಿಂಚುತ್ತಾರೆ. ಆದರೆ ಕೊನೆಯಲ್ಲಿ ಧರ್ಮದ ವೇಷಧಾರಿಗಳಿಗೆ ಜಯ ದೊರೆಯುತ್ತದೆ. ಯಕ್ಷಗಾನದಿಂದ ಧರ್ಮ ಜಾಗೃತಿಯಾಗುವುದು. ಪ್ರಾಚೀನ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದರು.ವಿಜ್ಞಾನಿ ದೇವಿಕಾನ್ ಪರಮೇಶ್ವರ ಕೆ. ದೀಕ್ಷಿತ್ ಬೆಂಗಳೂರು ಮಾತನಾಡಿ, ಯಕ್ಷಗಾನವು ಮನರಂಜನೆಗೆ ಒಂದು ಮಾರ್ಗವಾದರೆ ನಮ್ಮ ಜ್ಞಾನ ವೃದ್ಧಿಯ ಸಾಧನವೂ ಹೌದು. ಇಂತಹ ಯಕ್ಷಗಾನ ಸಪ್ತಾಹಕ್ಕೆ ಅನೇಕರು, ಸಂಘ- ಸಂಸ್ಥೆಗಳು ಶಕ್ತಿಯಾಗಿ ನಿಂತು ಸಹಕರಿಸಿದ್ದನ್ನು ಸ್ಮರಿಸಿದ ಅವರು, ಪ್ರತಿವರ್ಷವೂ ಉತ್ತಮ ರೀತಿಯಲ್ಲಿ ನಡೆಯುತ್ತಿರುವ ಯಕ್ಷಗಾನ ಸಪ್ತಾಹ ಇದೇ ರೀತಿ ಮುಂದುವರಿಯಲಿ ಎಂದು ಹಾರೈಸಿದರು.
ಯಕ್ಷಗಾನ ಸಪ್ತಾಹದ ಗೌರವಾಧ್ಯಕ್ಷ ನಾಗರಾಜ ಭಟ್ಟ ಬೇಂಗ್ರೆ ಮಾತನಾಡಿ, ಯಕ್ಷಗಾನಕ್ಕೆ ಜನರನ್ನು ಆಕರ್ಷಿಸುವ ಹಾಗೂ ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಯಕ್ಷಗಾನ ಸಪ್ತಾಹ ಕೇವಲ ಮನರಂಜನೆಗಾಗಿ ಅಲ್ಲ. ಇದೊಂದು ಆರಾಧನೆಯಾಗಿದೆ ಎಂದರು.ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ, ಭಟ್ಕಳ ಹವ್ಯಕ ವಲಯದ ಸಂಘಟನಾ ಕಾರ್ಯದರ್ಶಿ ಶ್ರೀಧರ ಎಂ. ಭಟ್ಟ ಮಾತನಾಡಿದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ಜಿ. ಮಡಿವಾಳ, ಹವ್ಯಕ ವಲಯದ ಮಾತೃ ವಿಭಾಗದ ಮುಖ್ಯಸ್ಥೆ ಮಂಗಲಾ ಉಪಾಧ್ಯಾಯ ಉಪಸ್ಥಿತರಿದ್ದರು.
ಆಶಾ ಭಟ್ಟ ಪ್ರಾರ್ಥಿಸಿದರು. ಪ್ರತಿಷ್ಟಾನದ ಕಾರ್ಯದರ್ಶಿ ಶ್ರೀಕಾಂತ ಹೆಗಡೆ ಸ್ವಾಗತಿಸಿದರು. ಶಿಕ್ಷಕ ಐ.ವಿ. ಹೆಗಡೆ ನಿರೂಪಿಸಿದರು. ಯಕ್ಷಗಾನ ಸಪ್ತಾಹದ ಅಧ್ಯಕ್ಷ ನಾಗರಾಜ ಮಧ್ಯಸ್ಥ ವಂದಿಸಿದರು.ವಿದ್ಯಾರ್ಥಿಗಳಿಗೆ ಕನ್ನಡ ಕೈಬರಹ ಸ್ಪರ್ಧೆ
ಭಟ್ಕಳ: ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನದಿಂದ ಕನ್ನಡ ಭಾಷಾ ಪ್ರೋತ್ಸಾಹದ ಉದ್ದೇಶದಿಂದ ತಾಲೂಕು ಮಟ್ಟದ ಕನ್ನಡ ಮಾಧ್ಯಮ ಕೈಬರಹದ ಸ್ಪರ್ಧೆಯನ್ನು ೫ರಿಂದ ೮ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದೆ.ಮಾರ್ಚ್ ತಿಂಗಳ ಪ್ರತಿ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ ೩ ಗಂಟೆಯಿಂದ ೫ ಗಂಟೆಯವರೆಗೆ ಏರ್ಪಡಿಸಲಾಗಿದೆ. ಬರಹದ ಪ್ರತಿ ಹಾಗೂ ಉತ್ತರದ ಪ್ರತಿಯನ್ನು ಸಂಸ್ಥೆಯಿಂದಲೇ ನೀಡಲಾಗುವುದು. ಸ್ಪರ್ಧೆ ಪ್ರತಿಷ್ಠಾನದ ಗೀತಾ ವಿಸ್ಮಿತಾ ಸಭಾಭವನದಲ್ಲಿ ನಡೆಯಲಿದೆ.ಸ್ಪರ್ಧಾ ಕಾಲಾವಧಿ 1 ಗಂಟೆ ಆಗಿದ್ದು, ಪ್ರಥಮ ಬಹುಮಾನ ₹೧೦೦೦, ದ್ವಿತೀಯ ₹೭೫೦, ತೃತೀಯ ₹500, ೪ನೇ ₹೪೦೦, ಐದನೇ ₹೩೦೦, ಆರನೇ ಬಹುಮಾನ ₹೨೦೦ ಹಾಗೂ ಪ್ರಮಾಣಪತ್ರ ಮತ್ತು ೧೮ ಸಮಾಧಾನಕರ ಬಹುಮಾನಗಳು ₹೧೦೦ ಹಾಗೂ ಪ್ರಮಾಣಪತ್ರ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧ್ಯಕ್ಷ ಎಸ್.ಎಸ್. ಕಾಮತ್, ಮೊ. ೯೯೦೨೬೮೮೭೫೪, ವಾಟ್ಸ್‌ಆ್ಯಪ್ ೯೫೧೩೪೭೮೦೭೯ ಸಂಪರ್ಕಿಸಲು ಕೋರಲಾಗಿದೆ.